ಶುಕ್ರವಾರ, ಸೆಪ್ಟೆಂಬರ್ 17, 2021
29 °C
ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಚಿದಂಬರರಾವ್ ಜಂಬೆ

ಅ.ರಾ.ಶ್ರೀನಿವಾಸ್ ಬರಹಗಳಲ್ಲಿ ಸಂವೇದನಾಶೀಲತೆ ಬೆಳೆಸುವ ಗುಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅ.ರಾ.ಶ್ರೀನಿವಾಸ್ ಅವರ ಸಾಹಿತ್ಯ ಕೃತಿ ಹಾಗೂ ಪತ್ರಿಕಾ ಬರಹಗಳಲ್ಲಿ ಸಂವೇದನಾಶೀಲತೆಯನ್ನು ಬೆಳೆಸುವ ಗುಣವಿದೆ ಎಂದು ರಂಗ ನಿರ್ದೇಶಕ ಚಿದಂಬರರಾವ್ ಜಂಬೆ ಹೇಳಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಅಂತರಂಗ ಪ್ರಕಾಶನ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅ.ರಾ.ಶ್ರೀನಿವಾಸ್ ಅವರ ರಂಗ ವಿಮರ್ಶೆಗಳ ಸಂಕಲನ ‘ರಂಗ ಸಮ್ಮುಖ’, ಕಾದಂಬರಿ ‘ಸ್ಥಿತ್ಯಂತರ’, ಅಂಕಣ ಬರಹಗಳ ಸಂಗ್ರಹದ ‘ನಿಕಷ’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ನಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ಆತಂಕ ಹಾಗೂ ಅನುಮಾನಗಳಿಂದ ನೋಡುವ ಮನೋಧರ್ಮ ಶ್ರೀನಿವಾಸ್ ಅವರ ಬರಹಗಳ ಹಿಂದಿದೆ. ಯಾವುದೇ ಅಳುಕಿಲ್ಲದೆ ಸತ್ಯವನ್ನು ನಿಷ್ಠುರವಾಗಿ ಹೇಳುವ ಬರಹಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ತುಡಿತ ಶ್ರೀನಿವಾಸ್ ಅವರಲ್ಲಿ ಎದ್ದು ಕಾಣುತ್ತದೆ’ ಎಂದರು.

‘ರಂಗ ಸಮ್ಮುಖ’ ಕೃತಿ ಕುರಿತು ಮಾತನಾಡಿದ ಹೆಗ್ಗೋಡಿನ ನೀನಾಸಂನ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಗಣೇಶ್, ‘ಮೂರು ದಶಕಗಳ ಕಾಲ ಕನ್ನಡ ರಂಗಭೂಮಿಯಲ್ಲಿ ಆದ ಸ್ಥಿತ್ಯಂತರಗಳನ್ನು ಶ್ರೀನಿವಾಸ್ ಅವರು ತಮ್ಮ ಕೃತಿಯಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ. ನಾಟಕ ರಚನೆ, ಕಟ್ಟುವ ಬಗೆ, ಅಭಿನಯ, ನೋಡುವ ಕ್ರಮ, ಸಿದ್ಧ ಮಾದರಿಗಳನ್ನು ಮುರಿದು ಹೊಸ ಬಗೆಯನ್ನು ಅನುಸರಿಸಿದ ಮಾದರಿ ಇವುಗಳ ಕುರಿತ ವಿಶಿಷ್ಟವಾದ ಒಳನೋಟಗಳು ಅವರ ಬರಹಗಳಲ್ಲಿವೆ’ ಎಂದು ಹೇಳಿದರು.

ಕೃತಿಕಾರ, ಕೃತಿಯ ಕಾಲದೇಶ, ಕತೆಯ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತಲೇ ಒಂದು ರಂಗ ಪ್ರಯೋಗ ಸಮಕಾಲೀನ ಸಂದರ್ಭಕ್ಕೆ ಹೇಗೆ ಪ್ರಸ್ತುತವಾಗುತ್ತದೆ ಎಂಬುದರ ವಿಶ್ಲೇಷಣೆ ‘ರಂಗ ಸಮ್ಮುಖ’ ಕೃತಿಯಲ್ಲಿದೆ. ಕನ್ನಡ ರಂಗಭೂಮಿಯ ಕುರಿತು ಸಂಶೋಧನೆ ನಡೆಸುವವರಿಗೆ ಈ ಕೃತಿ ಮಾರ್ಗದರ್ಶಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು.

‘ಸ್ಥಿತ್ಯಂತರ’ ಕಾದಂಬರಿ ಕುರಿತು ಮಾತನಾಡಿದ ಪರಿಸರ ಬರಹಗಾರ ಅಖಿಲೇಶ್ ಚಿಪ್ಪಳಿ, ‘ಪಾಶ್ಚಾತ್ಯ ಮಾದರಿಯ ಅಭಿವೃದ್ಧಿಯ ಕಲ್ಪನೆಯ ಹಿಂದಿರುವ ಕ್ರೌರ್ಯ ಮತ್ತು ಅತಿರೇಕಗಳಿಗೆ ಕಾದಂಬರಿ ಕನ್ನಡಿ ಹಿಡಿದಿದೆ. ಆರ್ಥಿಕವಾಗಿ ಸಬಲರಾಗಿದ್ದರೂ ಮಲೆನಾಡಿನ ಜನರು ‘ಮುಳುಗಡೆ’ಯ ಕಾರಣಕ್ಕೆ ಎದುರಿಸಿದ ಅನಿಶ್ಚಿತತೆ, ವಿಕ್ಷಿಪ್ತ ಪರಿಸ್ಥಿತಿಯ, ಆತಂಕಗಳ ಸಮರ್ಥ ಅಭಿವ್ಯಕ್ತಿಯಾಗಿ ಕೃತಿ ರೂಪುಗೊಂಡಿದೆ’ ಎಂದು ಅವರು ವಿಶ್ಲೇಷಿಸಿದರು.

ಈ ಹಿಂದೆ ಪ್ರಕೃತಿ ವಿಕೋಪಗಳಿಂದ, ರಾಜಮಹಾರಾಜರಿಂದ ಸಂಕಷ್ಟ ಎದುರಿಸಿದ ಜನರು ಈಗ ತಾವೇ ಆರಿಸಿದ ಜನಪ್ರತಿನಿಧಿಗಳಿಂದ ಅಭಿವೃದ್ಧಿಯ ಹೆಸರಿನಲ್ಲಿ ಯಾವ ರೀತಿ ತೊಂದರೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಲೇಖಕರು ಕಾದಂಬರಿಯಲ್ಲಿ ಜೀವಂತವಾಗಿ ನಿರೂಪಿಸಿದ್ದಾರೆ. ಹಿಂದಿನ ಮಲೆನಾಡಿನ ಸಂಕಟಗಳ ಜೊತೆಗೆ ಭವಿಷ್ಯದ ಅಪಾಯಗಳ ಕುರಿತೂ ಕೃತಿ ಎಚ್ಚರಿಸುತ್ತದೆ ಎಂದು ತಿಳಿಸಿದರು.

‘ನಿಕಷ’ ಕೃತಿ ಕುರಿತು ಮಾತನಾಡಿದ ಲೇಖಕ ಜಿ.ಟಿ.ಸತ್ಯನಾರಾಯಣ, ‘ಸಮಾಜ ಎಂದರೆ ಭಿನ್ನ ಆಲೋಚನೆ, ಅಭಿಪ್ರಾಯಗಳ ಒಟ್ಟು ಮೊತ್ತವಾಗಿದೆ. ಒಂದು ಆಲೋಚನಾ ಕ್ರಮ, ಒಂದು ಮನಸ್ಥಿತಿಯೇ ಅಂತಿಮವಲ್ಲ ಎಂಬ ಧೋರಣೆ ಶ್ರೀನಿವಾಸ್ ಅವರ ಅಂಕಣ ಬರಹಗಳ ಹಿಂದಿದೆ’ ಎಂದರು.

ಪುರಾಣ, ಮಹಾಕಾವ್ಯಗಳ ಪಾತ್ರಗಳಿಗೆ ಪ್ರಶ್ನೆ ಕೇಳುವ ಹೊಸ ಬಗೆಯ ಅನುಸಂಧಾನದ ಮಾದರಿಯನ್ನು ಲೇಖಕರು ತಮ್ಮ ಬರಹಗಳಲ್ಲಿ ಅನುಸರಿಸಿದ್ದಾರೆ. ವಿಚಾರಗಳ ಮಂಡನೆಯಲ್ಲಿ ವಿಶಿಷ್ಟ ತರ್ಕ ಮತ್ತು ಖಚಿತತೆ ಇರುವ ಕಾರಣಕ್ಕೆ ಅದು ಓದುಗರನ್ನು ಸೆಳೆಯುತ್ತದೆ ಎಂದು ಹೇಳಿದರು.

ಲೇಖಕ ವಿಲಿಯಂ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಲೇಖಕ ಅ.ರಾ.ಶ್ರೀನಿವಾಸ್ ಇದ್ದರು. ವೈ.ಎನ್.ಹುಬ್ಬಳ್ಳಿ ಪ್ರಾರ್ಥಿಸಿದರು. ಎಚ್.ಬಿ. ರಾಘವೇಂದ್ರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿ.ಟಿ.ಸ್ವಾಮಿ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.