ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಸೂರಿಗೆ ಕೊಳೆಗೇರಿ ನಿವಾಸಿಗಳ ಅಲೆದಾಟ

ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಜನರಿಗೆ ಸಿಗದ ಸಾಲ ಸೌಲಭ್ಯ
Last Updated 3 ಸೆಪ್ಟೆಂಬರ್ 2021, 3:57 IST
ಅಕ್ಷರ ಗಾತ್ರ

ಶಿವಮೊಗ್ಗ: ಅಂದು ದುಡಿದು ಆ ಹೊತ್ತಿನ ಹಸಿವು ನೀಗಿಸಿಕೊಳ್ಳುವ ಅದೆಷ್ಟೋ ಜನರು ಇರಲು ನೆಲೆ ಇಲ್ಲದೆ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಇಂತಹ ಶ್ರಮಿಕರು ಬದುಕುವ 53 ಕೊಳೆಗೇರಿಗಳನ್ನು ಸರ್ಕಾರ ಗುರುತಿಸಿದ್ದರೂ ಅವರಿಗೆ ಹಕ್ಕುಪತ್ರ ನೀಡುವ, ಶಾಶ್ವತ ವಸತಿ ಭಾಗ್ಯ ಕಲ್ಪಿಸುವ ಯೋಜನೆ ಶಿವಮೊಗ್ಗ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೂರ್ಣ ಸಾಕಾರಗೊಂಡಿಲ್ಲ.

ಕೊಳೆಗೇರಿ ಎಂದರೆ ಹೆಸರೇ ಸೂಚಿಸುವಂತೆ ಸ್ವಚ್ಛತೆಯ ಸಮಸ್ಯೆ ಇರುವ ಪ್ರದೇಶ. ನಗರ ಪ್ರದೇಶದ ಒಳಗೆ ಹಾದು ಹೋಗಿರುವ ರೈಲು ಮಾರ್ಗ, ನಾಲೆ, ರಾಜಕಾಲುವೆಗಳ ಪ್ರದೇಶ, ಹಲವು ವರ್ಷ ಬಳಸದೆ ಬಿಟ್ಟ ಜಾಗಗಳಲ್ಲಿ ಗುಡಿಸಲು ಕಟ್ಟಿಕೊಂಡು, ಟೆಂಟ್‌ ಹಾಕಿಕೊಂಡು ಜೋಪಡಿಗಳಲ್ಲಿ ಹಲವು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

ಸರ್ಕಾರ ಕೈಗೊಂಡ ಕೊಳೆಗೇರಿ ನಿವಾಸಿಗಳ ಸಮೀಕ್ಷೆಯ ಮಾಹಿತಿಯಂತೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಪಾಲಿಕೆ ವ್ಯಾಪ್ತಿಯಲ್ಲಿ 53 ಕೊಳೆಗೇರಿಗಳನ್ನು ಗುರುತಿಸಿದೆ.2012ರಲ್ಲಿ ಸರ್ಕಾರಿ ಭೂಮಿಯನ್ನು ಒಳಗೊಂಡ ಕೊಳಚೆ ಪ್ರದೇಶಗಳ 2,741 ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಹಕ್ಕುಪತ್ರ ಇದ್ದರೂ ಬಹುತೇಕರಿಗೆ ಇಂದಿಗೂ ಖಾತೆ ಮಾಡಿಕೊಟ್ಟಿಲ್ಲ. ಉಳಿದವರಿಗೆ ಹಕ್ಕುಪತ್ರ ನೀಡಿಲ್ಲ. ಸದ್ಯಕ್ಕೆ ಅವರಿಗೆ ನೀಡಿರುವ ಪರಿಚಯ ಪತ್ರವೇ ಅವರಿಗೆ ಆಧಾರ. ಹಿಂದೆ ವಿವಿಧ ಯೋಜನೆಗಳಲ್ಲಿ 2,309 ಮನೆಗಳನ್ನು ಕಟ್ಟಿಕೊಡಲಾಗಿತ್ತು. ಉಳಿದವವರು ಹಂದಿಗೂಡುಗಳಂತಹ ಮನೆಗಳಲ್ಲೇ ಜೀವನ ಸಾಗಿಸುತ್ತಿದ್ದಾರೆ. 2017–18ನೇ ಸಾಲಿನಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ 20 ಕೊಳೆಗೇರಿಗಳಲ್ಲಿ ಮನೆ ಕಟ್ಟಿಕೊಡುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ನಾಲ್ಕು ವರ್ಷಗಳಾದರೂ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ.

ಬಾಡಿಗೆ ಮನೆಯಲ್ಲೇ ವಾಸ: ಪ್ರಧಾನಮಂತ್ರಿ ಆವಾಸ್‌ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳು ಮನೆ ನಿರ್ಮಾಣಕ್ಕೆ ಜಾಗ ಬಿಟ್ಟುಕೊಟ್ಟು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಒಪ್ಪಂದದ ಪ್ರಕಾರ 6 ತಿಂಗಳ ಒಳಗೆ ಮನೆ ಕಟ್ಟಿಕೊಡಬೇಕಿತ್ತು. ನಾಲ್ಕು ವರ್ಷಗಳಾದರೂ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ. ಅತ್ತ ಬಾಡಿಗೆ ಕಟ್ಟಲೂ ಆಗದೆ, ಇತ್ತ ಸ್ವಂತ ಮನೆಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಬಹುತೇಕ ಮನೆಗಳಿಗೆ ಗಿಲಾವ್ ಆಗಿಲ್ಲ. ವೈರಿಂಗ್ ಆಗಿಲ್ಲ. ಕಿಟಕಿ, ಬಾಗಿಲುಗಳೂ ಇಲ್ಲ. ನೆಲಹಾಸು ಸಿದ್ಧವಾಗಿಲ್ಲ. ಮನೆಗಳು ಅಪೂರ್ಣವಾಗಿವೆ. ಒಳಗಡೆ ಗಿಡ, ಗಂಟಿಗಳು ಬೆಳೆದು ಬೀದಿ ನಾಯಿಗಳು, ಹುಳುಉಪ್ಪಟೆಗಳ ಆವಾಸ ಸ್ಥಾನವಾಗಿವೆ.

ಜಾಗದ ಸಮಸ್ಯೆ ಅಭಿವೃದ್ಧಿಗೆ ಅಡ್ಡಿ: ಕೊಳೆಗೇರಿಗಳ ಅಭಿವೃದ್ಧಿಗೆ ಅವುಗಳಿರುವ ಜಾಗಗಳದೇ ಬಹುಮುಖ್ಯ ಸಮಸ್ಯೆ. ಬಹುತೇಕ ಕೊಳೆಗೇರಿಗಳು ರೈಲು ನಿಲ್ದಾಣದಿಂದ ನಾಲ್ಕೈದು ಅಡಿಗಳ ಅಂತರದಲ್ಲಿವೆ. ಕೆಲವು ಖಾಸಗಿ ಒಡೆತನದ ನಿವೇಶನಗಳಲ್ಲಿ ತಲೆಎತ್ತಿವೆ. ನಾಲಾ ಪ್ರದೇಶದಲ್ಲಿ ನಿಯಮ ಮೀರಿ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ರಸ್ತೆ, ಚರಂಡಿ, ಯುಜಿಡಿ ಕಾಮಗಾರಿ ಕೈಗೊಳ್ಳಲೂ ಜಾಗವೇ ಇಲ್ಲ.

ತುಂಗಾ ಜಲಾಶಯದಿಂದ ಹರಿದು ಬರುವ ನಾಲೆ ಉದ್ದಕ್ಕೂ ಮನೆಗಳು ತಲೆ ಎತ್ತಿವೆ. ನಗರ ಪ್ರವೇಶಿಸುವ ನಾಲೆಗೆ ಎಲ್ಲ ಬಡಾವಣೆಗಳ ಕಲ್ಮಶ ನೀರು ಹರಿಸುವ ಕಾರಣ ಅದು ಸಂಪೂರ್ಣ ರಾಜಕಾಲುವೆಯಾಗಿ ಬದಲಾಗಿದೆ. ಈ ನಾಲೆಯ ದಂಡೆಯ ಮೇಲೆ ಮನೆಕಟ್ಟಿಕೊಂಡ ನಿವಾಸಿಗಳು ಕಲ್ಮಶದ ವಾಸನೆ ಮಧ್ಯೆಯೇ ಬದುಕು ನಡೆಸುತ್ತಿದ್ದಾರೆ.

ಆರ್‌ಎಂಎಲ್‌ ನಗರ, ಟಿಪ್ಪು ನಗರ, ಶರಾವತಿ ನಗರ, ವಿನೋಬನಗರ, ರವೀಂದ್ರ ನಗರ, ರಾಜೇಂದ್ರನಗರ, ಕೀರ್ತಿನಗರ, ಅಶ್ವತ್ಥ ನಗರ, ನವುಲೆ, ರಂಗನಾಥ ಬಡಾವಣೆ, ಕೃಷಿನಗರ, ತ್ರಿಮೂರ್ತಿನಗರ, ಶಾಂತಿನಗರ, ಮಲ್ಲಿಕಾರ್ಜುನ ನಗರಗಳ ಮೂಲಕ ಸಾಗಿ ತ್ಯಾವರೆಚಟ್ನಹಳ್ಳಿ ಬಳಿ ಅಚ್ಚುಕಟ್ಟು ಜಮೀನು ತಲುಪುತ್ತದೆ. ಈ ಮಾರ್ಗದ ಉದ್ದಕ್ಕೂ ಇರುವ ಕುಟುಂಬಗಳ ಬದುಕು ಅಕ್ಷರಶಃ ನರಕವಾಗಿದೆ.

***

ಅನುದಾನ ದೊರೆತರೂ ಕಡಿಮೆ ಖರ್ಚು!

ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಳೆಗೇರಿಗಳಿದ್ದರೂ ಅವುಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಸೂಕ್ತ ಯೋಜನೆ ರೂಪಿಸಿಲ್ಲ. 2015–16ನೇ ಸಾಲಿನಿಂದ ಇಲ್ಲಿಯವರೆಗೆ
₹ 88.92 ಕೋಟಿ ಅನುದಾನ ಹರಿದುಬಂದಿದೆ. ಈ ಅನುದಾನದಲ್ಲಿ ಖರ್ಚಾಗಿರುವ ಹಣ ಅತ್ಯಲ್ಪ. ವಿದ್ಯಾನಗರ, ಜೆ.ಪಿ.ನಗರ, ಬಸವನಗುಡಿ ಭೋವಿ ಕಾಲೊನಿ, ಶಾಂತಿನಗರ, ವೆಂಕಟೇಶ ನಗರದ ಕೊಳೆಗೇರಿಗಳಲ್ಲಿ ಕಾಂಕ್ರೀಟ್‌ ರಸ್ತೆ, ಅಡ್ಡ ಮೋರಿ, ಕಚೇರಿ ಕಟ್ಟಡ, ಚರಂಡಿ, ಡಾಂಬರು ರಸ್ತೆ, ಒಳಚರಂಡಿ ನಿರ್ಮಾಣಕ್ಕೆ ಅನುದಾನ ಬಳಸಲಾಗಿದೆ.

ಬಹುತೇಕ ಕೊಳೆಗೇರಿಗಳು ಇಕ್ಕಟ್ಟಾಗಿವೆ. ಕಿಷ್ಕಿಂಧೆಯಂತಹ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಹಲವು ಮನೆಗಳಿಗೆ ಹೋಗಲು ದಾರಿ ಇಲ್ಲ. ಸರ್ವೆ ಮಾಡುವಾಗ, ಅಳತೆ ಮಾಡುವಾಗ ಹಲವು ಸಮಸ್ಯೆಗಳು ಎದುರಾಗಿವೆ. ಎಲ್ಲ ಕೊಳೆಗೇರಿಗಳೂ ಬಹುತೇಕ ಮೂಲಸೌಕರ್ಯಗಳಿಂದ ವಂಚಿತವಾಗಿವೆ.

***

ರೈಲು ಮಾರ್ಗದ ಉದ್ದಕ್ಕೂ ನರಕಯಾತನೆ

ನಗರದ ಬಹುತೇಕ ಕೊಳೆಗೇರಿಗಳು ಇರುವುದು ರೈಲು ಮಾರ್ಗದ ಆಸುಪಾಸಿನಲ್ಲಿ. ಹರಿಗೆಯಿಂದ ಆರಂಭವಾಗುವ ರೈಲುಮಾರ್ಗ ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ ಮೂಲಕ ನಿಲ್ದಾಣ ತಲುಪಿ, ಅಲ್ಲಿಂದ ಅಮೀರ್ ಅಹಮದ್‌ ನಗರ, ಹನುಮಂತನಗರ, ರವೀಂದ್ರ ನಗರ, ರಾಜೇಂದ್ರನಗರ, ಕೀರ್ತಿನಗರ, ವಿನೋಬನಗರ, ಪಿಎನ್‌ಟಿ ಕಾಲೊನಿ, ಸೂರ್ಯ ಲೇಔಟ್, ಜೆ.ಎಚ್.ಪಟೇಲ್ ಬಡಾವಣೆ, ಕಾಶಿಪುರದ ಮೂಲಕ ತಾಳಗುಪ್ಪ ಕಡೆಗೆ ಸಾಗುತ್ತದೆ. ಸೋಮಿನಕೊಪ್ಪ ರಸ್ತೆಯ ಹುಚ್ಚೆಂಗ್ಯಮ್ಮ ಕಾಲೊನಿ, 100 ಅಡಿ ರಸ್ತೆಯ ಹನುಮಂತ ನಗರ, ಅಮೀರ್ ಅಹಮದ್‌ ಕಾಲೊನಿ, ಬಸವನಗುಡಿ, ವಿದ್ಯಾನಗರದ ಬಳಿ ಹೆಚ್ಚು ಕೊಳೆಗೇರಿಗಳು ತಲೆ ಎತ್ತಿವೆ.

ಹನುಮಂತನಗರದ ಬಳಿ ಸಾಗುವ ರಾಜಕಾಲುವೆ ಮುಂದೆ ಚಲಿಸಲು ರೈಲು ಮಾರ್ಗ ಅಡ್ಡಿಯಾಗುತ್ತದೆ. ಹಾಗಾಗಿ, ಮಳೆಗಾಲದಲ್ಲಿ ಬರುವ ನೀರು ಮನೆಗಳಿಗೆ ನುಗ್ಗುತ್ತದೆ. ಮಳೆಗಾಲ ಕಳೆಯುವವರೆಗೂ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಾರೆ.

***

ಸಾಲ ನೀಡಲು ಬ್ಯಾಂಕ್‌ಗಳ ಹಿಂದೇಟು

ಒಂದು ಮನೆ ನಿರ್ಮಾಣಕ್ಕೆ ₹ 5.05 ಲಕ್ಷ ನಿಗದಿ ಮಾಡಲಾಗಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ₹ 1.50 ಲಕ್ಷ, ರಾಜ್ಯ ಸರ್ಕಾರ ₹ 1.20 ಲಕ್ಷ (ಪರಿಶಿಷ್ಟರಿಗೆ ₹ 2 ಲಕ್ಷ) ನೀಡುತ್ತವೆ. ಪರಿಶಿಷ್ಟ ಸಮುದಾಯಕ್ಕೆ ಸೇರಿದ ಫಲಾನುಭವಿಗಳು ₹ 50 ಸಾವಿರ, ಇತರೆ ಫಲಾನುಭವಿಗಳು ₹ 75 ಸಾವಿರ ಭರಿಸಬೇಕು. ಉಳಿದ ಹಣ ಬ್ಯಾಂಕ್‌ ಸಾಲದ ಮೂಲಕ ಭರ್ತಿ ಮಾಡಲಾಗುತ್ತದೆ. ಆಯ್ಕೆಯಾದ ಶೇ 90ರಷ್ಟು ಫಲಾನುಭವಿಗಳಿಗೆ ಬ್ಯಾಂಕ್‌ಗಳ ಸಾಲ ದೊರೆತಿಲ್ಲ. ದಾಖಲೆಗಳ ಕೊರತೆಯ ನೆಪ ನೀಡಿ ಅಲೆದಾಡಿಸಲಾಗುತ್ತಿದೆ. ತನ್ನಲ್ಲಿ ನೋಂದಣಿ ಮಾಡಿಸಿದ ಕಾರ್ಮಿಕರಿಗೆ ಸಾಲವನ್ನು ಕಾರ್ಮಿಕ ಇಲಾಖೆ ನೀಡುತ್ತಿದೆ. ಕೋವಿಡ್‌ ನಂತರ ಇಲಾಖೆಯ ಹಣವೂ ಬಿಡುಗಡೆಯಾಗಿಲ್ಲ.

ಮನೆಗಳ ನಿರ್ಮಾಣ ವಿಳಂಬ ಖಂಡಿಸಿ ಕೊಳಚೆ ಪ್ರದೇಶದ ನಿವಾಸಿಗಳು ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಸಚಿವರು, ಸಂಸದರು ಲೀಡ್‌ ಬ್ಯಾಂಕ್ ಸಭೆ ನಡೆಸಿ, ಪರಿಚಯ ಪತ್ರದ ಆಧಾರದ ಮೇಲೆ ಸಾಲ ಮಂಜೂರು ಮಾಡುವಂತೆ ಸೂಚಿಸಿದರೂ ಸಮಸ್ಯೆ ಬಗೆಹರಿದಿಲ್ಲ.

***

ಇವರು ಏನಂತಾರೆ?

ಮನೆಗಳಿಗಾಗಿ ವಂತಿಗೆ ಕಟ್ಟಿದ ಫಲಾನುಭವಿಗಳಿಗೆ ಬ್ಯಾಂಕ್‌ ಸಾಲ ದೊರಕಿಸುವಲ್ಲಿ ಕೊಳೆಗೇರಿ ಮಂಡಳಿ, ಕಾರ್ಮಿಕ ಇಲಾಖೆ ಸಂಪೂರ್ಣ ವಿಫಲವಾಗಿವೆ. ಇದರಿಂದ ನೂರಾರು ಜನರು ಪರಿತಪಿಸುತ್ತಿದ್ದಾರೆ. ವೈಫಲ್ಯದ ಹೊಣೆಯನ್ನು ವಸತಿ ಇಲಾಖೆ, ವಸತಿ ಸಚಿವರು ಹೊರಬೇಕು.

– ಬಿ.ಎ.ರಮೇಶ್ ಹೆಗ್ಡೆ, ಪಾಲಿಕೆ ಹಿರಿಯ ಸದಸ್ಯ

40 ವರ್ಷಗಳಿಂದ ವಾಸಿಸುತ್ತಿದ್ದರೂ 12 ಕುಟುಂಬಗಳಿಗೆ ಹಕ್ಕುಪತ್ರ ನೀಡಿಲ್ಲ. ಯಾವ ಸವಲತ್ತೂ ಇಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಹಲವು ಬಾರಿ ಮನವಿಕೊಟ್ಟರೂ ಸಮಸ್ಯೆ ಬಗೆಹರಿಸಿಲ್ಲ. ಮನೆ ಕಟ್ಟಿಕೊಟ್ಟಿಲ್ಲ.

– ಹಸೀನಾ ಬಾನು, ಹನುಮಂತನಗರ ಕೊಳೆಗೇರಿ ನಿವಾಸಿ

ಕೊಳೆಗೇರಿ ಉರ್ದು ಶಾಲೆಯ ಒಂದೇ ಕೊಠಡಿಯಲ್ಲಿ 80 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಸಕರ ನಿಧಿಯಿಂದ ₹ 8 ಲಕ್ಷ ದೊರೆತಿದೆ ಎನ್ನುತ್ತಾರೆ. ಆದರೆ, ಹಲವು ವರ್ಷಗಳಿಂದ ದುರಸ್ತಿಯೇ ಆಗಿಲ್ಲ. ನೀರಿನ ವ್ಯವಸ್ಥೆ ಇಲ್ಲ. ಸರ್ಕಾರ ಇಂತಹ ತಾರತಮ್ಯ ಏಕೆ ಮಾಡುತ್ತಿದೆ. ತಕ್ಷಣ ನೆರವಾಗಬೇಕು.

– ರೇಷ್ಮಾ, ಎಸ್‌ಡಿಎಂಸಿ ಅಧ್ಯಕ್ಷೆ, ಅಮೀರ್ ಅಹಮದ್‌ ಕಾಲೊನಿ

20 ವರ್ಷಗಳಿಂದ ವಾಸಿಸುತ್ತಿದ್ದೇವೆ. ಒಂದು ನಿವೇಶನ, ಮನೆ ಕೊಟ್ಟಿಲ್ಲ. ಮಳೆ ಬಂದರೆ ಮನೆಯ ಒಳಗೆ ನೀರು ನುಗ್ಗುತ್ತದೆ. ಮುಖ್ಯರಸ್ತೆ ರಸ್ತೆ ಕಾಮಗಾರಿಯೂ ಕಳಪೆಯಾಗಿದೆ. ಇಂತಹ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ಯಾರು ಅಧಿಕಾರಕ್ಕೆ ಬಂದರೂ ನಮ್ಮ ಕಷ್ಟ ಬಗೆಹರಿದಿಲ್ಲ.

– ಅಬ್ದುಲ್‌ ರೆಹಮಾನ್, ಬಡಗಿ, ಕೊಳೆಗೇರಿ ನಿವಾಸಿ

ಮನೆ ಕಟ್ಟಲು ಆರಂಭಿಸಿ ಮೂರು ವರ್ಷಗಳಾಗಿವೆ. ಕೆಲಸಗಾರರು, ಎಂಜಿನಿಯರ್‌ಗಳು ಮನಸ್ಸಿಗೆ ಬಂದಾಗ ಬರುತ್ತಾರೆ. ಜೋರು ಮಾಡಿದಾಗ ಎರಡು ದಿನ ಕೆಲಸ ಮಾಡುತ್ತಾರೆ. ಮೂರು ತಿಂಗಳಿಗೆ ಮುಗಿಸುವ ಭರವಸೆ ಕೊಟ್ಟಿದ್ದರು. ಈಗ ಮೂರು ವರ್ಷಗಳಿಂದ ತಿಂಗಳಿಗೆ ₹ 4 ಸಾವಿರ ಬಾಡಿಗೆ ಕಟ್ಟುತ್ತಿದ್ದೇವೆ.

– ಹನುಮಂತಪ್ಪ, ಸುಭಾಷ್‌ ನಗರ ನಿವಾಸಿ

ವಂತಿಗೆ, ಸರ್ಕಾರದ ಅನುದಾನದಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಕೈಗೊಂಡಿದ್ದೇವೆ. ಬ್ಯಾಂಕ್‌ ಸಾಲ ವಿಳಂಬದ ಕಾರಣ ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಬ್ಯಾಂಕ್‌ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದೇವೆ. ಶೀಘ್ರ ಮನೆಗಳ ನಿರ್ಮಾಣ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

– ಚಂದ್ರಹಾಸ್, ಎಂಜಿನಿಯರ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT