ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಅಗತ್ಯ

ಕಾನೂನು ಅರಿವು ಕಾರ್ಯಕ್ರಮದಲ್ಲಿ ವಕೀಲರಾದ ಉಜ್ವಲ
Last Updated 8 ಅಕ್ಟೋಬರ್ 2021, 6:06 IST
ಅಕ್ಷರ ಗಾತ್ರ

ಶಿವಮೊಗ್ಗ: ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಮತ್ತು ಸಂಸ್ಕೃತಿ ಕಲಿಸುವುದು ಅವಶ್ಯ ಎಂದು ವಕೀಲರಾದ ಉಜ್ವಲ ಹೇಳಿದರು.

ಸೋಗಾನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿಹಮ್ಮಿಕೊಂಡಿದ್ದ ‘ಆಜಾದಿ ಕಾ ಅಮೃತ್ ಮಹೋತ್ಸವ್‌’ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕಾರ ಮತ್ತು ಸಂಸ್ಕೃತಿಯಿಂದ ಮನುಷ್ಯನಲ್ಲಿ ಸನ್ನಡತೆ ಮೂಡುವುದು. ಈ ಸನ್ನಡತೆಯೇ ವ್ಯಕ್ತಿಯ ವ್ಯಕ್ತಿತ್ವದ ಮಾನದಂಡ, ಧರ್ಮ, ಸಂಸ್ಕಾರ, ವ್ಯಕ್ತಿತ್ವಗಳನ್ನು ಇನ್ನಷ್ಟು ಉನ್ನತೀಕರಣಗೊಳಿಸುತ್ತದೆ ಎಂದು ಹೇಳಿದರು.

ಈಚೆಗೆ ಕಾನೂನುಗಳು ಸಾಕಷ್ಟು ಕಠಿಣವಾದರೂ ಬಾಲ್ಯವಿವಾಹಗಳು ಸದ್ದಿಲ್ಲದೇ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು. ಮಕ್ಕಳಿಗೆ ಮುಂದೆ ಆಗಬಹುದಾದ ತೊಂದರೆಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

‘ಮನೆಯ ಅಕ್ಕಪಕ್ಕದಲ್ಲಿ ದುರಂತಗಳು ಸಂಭವಿಸುವ ಮುನ್ನವೇ ಎಲ್ಲರೂ ಜಾಗರೂಕರಾಗುವುದು ಅತ್ಯಗತ್ಯ. ಪಕ್ಕದ ಮನೆಯಲ್ಲಿಯೇ ದುರ್ಘಟನೆ ನಡೆದರೂ ನಮಗೇಕೆ ಎಂಬ ಮನೋಭಾವ ಇದೆ. ಇಂತಹ ಮನಃಸ್ಥಿತಿಯಿಂದ ಎಲ್ಲರೂ ಹೊರಬಂದು ಅಪರಾಧ ನಡೆದಾಗ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.

ವಕೀಲ ಪ್ರದೀಪ್ ಕುಮಾರ್ ಮಾತನಾಡಿ, ‘ಕಾನೂನಿನ ಅರಿವು ಇಲ್ಲದಿರುವುದು ಅಪರಾಧ. ಕಾನೂನಿನ ಅರಿವು ಇಲ್ಲದೇ ಹೋದರೆ ಸಮಾಜದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದುವುದು ಅತ್ಯಗತ್ಯ’ ಎಂದು ಹೇಳಿದರು.

ಸೋಗಾನೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ‘ಗ್ರಾಮೀಣ ಮಟ್ಟದಲ್ಲಿ ಅನೇಕರಿಗೆ ಕಾನೂನಿನ ಅರಿವಿನ ಕೊರತೆ ಇರುವ ಕಾರಣದಿಂದ ನಾನಾ ರೀತಿಯ ಸಮಸ್ಯೆ ಎದುರಿಸುವಂತಾಗಿದೆ. ಅವಶ್ಯವಿದ್ದಾಗ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಸಲಹೆ ಪಡೆದುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕಿ ಮೀನಾ, ‘ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದೆ. ಇಲಾಖೆಯ ಪ್ರಯೋಜನ ಪಡೆದುಕೊಳ್ಳುವ ಮೂಲಕ ಪರಿಶಿಷ್ಟರು ಸ್ವಾವಲಂಬಿಗಳಾಗಬೇಕು’ ಎಂದು ಸಲಹೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಶೋಭಾ ಮೂರ್ತಿ, ರಾಜಶೇಖರಪ್ಪ, ಸಮಿತ್ರ, ಪಿಡಿಒ ದಿವಾಕರ್, ಪ್ರಮುಖರಾದ ಮುರುಗೇಶ್, ರವಿ, ಸುನಿತಾ, ಹಾಲೇಶ್, ನವೀನ್, ಕೀರ್ತಿ, ಪರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT