ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಜೀವಂತವಿಲ್ಲ

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ
Last Updated 19 ಏಪ್ರಿಲ್ 2019, 4:36 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಜೀವಂತವಿಲ್ಲ ಎಂಬುದು ಜನರಿಗೆ ಎಂದೋ ಮನವರಿಕೆಯಾಗಿದೆ. ಜೀವಂತವಿಲ್ಲದ ಸರ್ಕಾರದಲ್ಲಿ ಯಾರಿದ್ದರೂಪ್ರಯೋಜನವಿಲ್ಲಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ದೂರಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ನೇತೃತ್ವದ ಮಹಾಘಟಬಂಧನ್‌ಗೆ ಏಕೆ ಮತ ನೀಡಬೇಕು? ಭಯೋತ್ಪಾದಕರನ್ನು ಬೆಂಬಲಿಸುವ, ಸೈನಿಕರ ವಿಶೇಷ ಅಧಿಕಾರವನ್ನು ವಾಪಸು ಪಡೆಯುವ ನಾಯಕರಿಗೆ ಮತ ನೀಡಿದರೆ ಭಾರತಕ್ಕೆ ಉಳಿಗಾಲವಿಲ್ಲ’ ಎಂದರು.

ಜನಲೋಕಪಾಲ್ ಮಸೂದೆ ಜಾರಿಗೊಳಿಸಿ ಭ್ರಷ್ಟರಿಗೆ ಕಡಿವಾಣ ಹಾಕುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೃಢ ನಿರ್ಧಾರ ಮಾಡಿದರು. ರಾಜ್ಯದಲ್ಲಿನ ಲೋಕಾಯುಕ್ತ ವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಲ್ಲು ಕಿತ್ತ ಹಾವನ್ನಾಗಿಸಲಾಗಿದೆ.ಇದರ ಕೀರ್ತಿ ಕಾಂಗ್ರೆಸ್, ಜೆಡಿಎಸ್‌ಗೆ ಸಲ್ಲುತ್ತದೆ ಎಂದು ಆರೋಪಿಸಿದರು.

‘ಬಡ ಕುಟುಂಬಗಳ ಹಿತ ಕಾಯುವಲ್ಲಿ ಸಮ್ಮಿಶ್ರ ಸರ್ಕಾರ ವಿಫಲವಾಗಿದೆ. ಬಗರ್‌ಹುಕುಂ ಸಾಗುವಳಿ ರೈತರಿಗೆ ಹಕ್ಕುಪತ್ರ ವಿತರಿಸಲು ಈ ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ಅವಧಿಯಲ್ಲಿ ಮೇಲ್ಮನೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪ್ರಸ್ತಾಪಿಸಿದ್ದೇನೆ. 4.5 ಲಕ್ಷ ಜನರಿಗೆ ಹಕ್ಕುಪತ್ರ ನೀಡಲು ಇವರಿಗೆ ಏಕೆ ಸಾಧ್ಯವಾಗಿಲ್ಲ ಎಂದು ಕಾಗೋಡು ಅವರನ್ನು ಪ್ರಶ್ನೆ ಮಾಡಿದೆ. ರಾಜಕಾರಣ ಮೀರಿದ ಗೌರವವನ್ನು ಅವರ ಮೇಲೆ ಇಟ್ಟುಕೊಂಡಿದ್ದೇನೆ. ಅವರು ಸುಮ್ಮನೆ ಭಾಷಣ ಬಿಗಿದರೇ ಹೊರತು ಹಕ್ಕುಪತ್ರ ವಿತರಿಸಿಲ್ಲ’ ಎಂದು ದೂರಿದರು.

192(ಎ) ಕಾಯ್ದೆ ಅಡಿಯಲ್ಲಿ ರೈತರಿಗೆ ಜೈಲು ಶಿಕ್ಷೆ ವಿಧಿಸುತ್ತಿರುವ ಕುರಿತ ಪತ್ರಕರ್ತರ ಪ್ರಶ್ನೆಗೆ ಶ್ರೀನಿವಾಸ ಪೂಜಾರಿ ಉತ್ತರಿಸಲಿಲ್ಲ. ಈ ಕಾಯ್ದೆ ಜಾರಿ ಅವಧಿ ಕುರಿತು ಮಾಹಿತಿ ಇಲ್ಲ ಎಂದರು.

ಅರಣ್ಯ, ಸರ್ಕಾರಿ ಭೂ ಪ್ರದೇಶದ ಸಾಗುವಳಿ ರೈತರನ್ನು ಜೈಲಿಗೆ ತಳ್ಳುವ ತೀರ್ಮಾನದ ಕಾಯ್ದೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಬಿಜೆಪಿ ಸ್ಥಳೀಯ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಓಟು ಕೇಳುತ್ತಿಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಮತ ಕೇಳುತ್ತಿದೆ. ಇದು ಸರಿಯೇ ಎಂಬ ಪ್ರಶ್ನೆಗೆ ರಾಘವೇಂದ್ರ ಅವರು ಉತ್ತಮ ಕೆಲಸ ಮಾಡಿದ್ದಾರೆ. ಮೋದಿ ಅವರು ಪ್ರಧಾನಿಯಾಗಲು ರಾಘವೇಂದ್ರ ಅವರು ಆಯ್ಕೆ ಆಗಬೇಕು ಎಂದು ಉತ್ತರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಪ್ರಮುಖರಾದ ಅಶೋಕಮೂರ್ತಿ, ನಾಗರಾಜಶೆಟ್ಟಿ, ಆರ್.ಮದನ್, ತೀರ್ಥಹಳ್ಳಿ ಬಿಜೆಪಿ ಘಟಕದ ಅಧ್ಯಕ್ಷ ಕೋಣಂದೂರು ಮೋಹನ್, ಮಾಧ್ಯಮ ಪ್ರಮುಖ ಸಂದೇಶ ಜವಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT