ಭಾನುವಾರ, ಏಪ್ರಿಲ್ 11, 2021
32 °C

ಬೆಲೆ ಏರಿಕೆ: ಬೋಂಡಾ ಕರಿದು, ಚಹ ಮಾಡಿ ಕಾಂಗ್ರೆಸ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಶಿವಪ್ಪನಾಯಕ ಪ್ರತಿಮೆ ಮುಂದೆ ಬೋಂಡಾ, ಹಪ್ಪಳ ಕರಿದು, ಚಹ ಸಿದ್ಧಪಡಿಸಿ ಪ್ರತಿಭಟನೆ ನಡೆಸಿದರು.

ಅಡುಗೆ ಅನಿಲದ ಸಿಲಿಂಡರ್‌ಗೆ ಹೂವಿನ ಮಾಲೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪಕ್ಕದಲ್ಲಿ ಸೌದೆ ಒಲೆ ಸಿದ್ಧಪಡಿಸಿ, ಸ್ಥಳದಲ್ಲೇ ಬೋಂಡ ಹಾಗೂ ಹಪ್ಪಳ ಕರಿದರು. ಚಹ ಮಾಡಿ ಸಾರ್ವಜನಿಕರಿಗೆ ಹಂಚಿದರು. ಮಹಿಳಾ ಕಾರ್ಯಕರ್ತೆಯರು ಈರುಳ್ಳಿ, ತರಕಾರಿ ಹಾರ ಧರಿಸಿ ಸರ್ಕಾರಗಳ ವಿರುದ್ಧ  ಘೋಷಣೆ ಕೂಗಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ನಡೆಸುವಲ್ಲಿ ವಿಫಲವಾಗಿವೆ. ಜನ ಸಾಮಾನ್ಯರ ಬವಣೆ ಅರ್ಥಮಾಡಿಕೊಳ್ಳುವಲ್ಲಿ ಸೋತಿವೆ. ಕೊರೊನಾ ಸಂಕಷ್ಟದ ಸಮಯದಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಿತ್ಯದ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಎರಡು ವಾರಗಳ ಹಿಂದೆಯಷ್ಟೆ ಅಡುಗೆ ಅನಿಲ ದರ ₹ 50 ಹೆಚ್ಚಳವಾಗಿತ್ತು. ಈಗ ಮತ್ತೆ ಏರಿಕೆ ಮಾಡಲಾಗಿದೆ.₹ 880 ತಲುಪಿದೆ. ಬಡವರು ಖರೀದಿಸಲು ಸಾಧ್ಯವಾಗದೇ ಸೌದೆ ಒಲೆಯ ಮೊರೆ ಹೋಗುತ್ತಿದ್ದಾರೆ. ವರ್ಷಕ್ಕೆ 12 ಸಿಲಿಂಡರ್‌ಗೆ ನೀಡುತ್ತಿದ್ದ ಸಬ್ಸಿಡಿಯನ್ನೂ 6 ತಿಂಗಳಿನಿಂದ ನಿಲ್ಲಿಸಲಾಗಿದೆ. ದರ ಏರಿಕೆ ಗಗನ ಮುಖಿಯಾಗಿದೆ ಎಂದು ದೂರಿದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಪರಿಣಾಮ ವಾಹನ ಸವಾರರಿಗೆ, ಲಾರಿ, ಬಸ್, ಟ್ಯಾಕ್ಸಿ ಮಾಲೀಕರಿಗೆ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳಾದ ಅಡುಗೆ ಎಣ್ಣೆ, ಬೇಳೆಕಾಳುಗಳು ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಯೂ ಹೆಚ್ಚಳವಾಗಿವೆ. ಬಡವರು ಅರೆಹೊಟ್ಟೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಧನ ತೆರಿಗೆ ರದ್ದು ಪಡಿಸಬೇಕು ಎಂದು ಒತ್ತಾಯಿಸಿದರು.

‘ಸೂಡಾ’ ಮಾಜಿ ಅಧ್ಯಕ್ಷರಾದ ಎನ್.ರಮೇಶ್‌, ಇಸ್ಮಾಯಿಲ್‌ಖಾನ್, ಜೀವ ವೈವಿಧ್ಯಮಂಡಳಿ ಮಾಜಿ ಅಧ್ಯಕ್ಷ  ಎಸ್.ಪಿ.ಶೇಷಾದ್ರಿ, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ಯಮುನಾರಂಗೇಗೌಡ, ಮಂಜುಳಾ ಶಿವಣ್ಣ, ಪಕ್ಷದ ಮುಖಂಡರಾದ ಸೌಗಂಧಿಕಾ, ಎಲ್.ರಾಮೇಗೌಡ, ವೈ.ಎಚ್.ನಾಗರಾಜ್, ಪಂಡಿತ್‌ ವಿ. ವಿಶ್ವನಾಥ (ಕಾಶಿ), ವಿಜಯಲಕ್ಷ್ಮೀ ಪಾಟೀಲ್, ಸಿ.ಎಸ್.ಚಂದ್ರಭೂಪಾಲ್, ಎನ್.ಡಿ.ಪ್ರವೀಣ್ ಕುಮಾರ್, ಚಂದನ್, ಎಚ್.ಪಿ.ಗಿರೀಶ್ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು