ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವ್ಯಾಕ್ಸಿನ್ ಖಾಲಿ; 2,540 ಡೋಸ್‌ ಕೋವಿಶೀಲ್ಡ್‌ ಲಭ್ಯ

ಜಿಲ್ಲೆಯ ಕೋವಿಡ್‌ ಸ್ಥಿತಿಗತಿ ಬಿಚ್ಚಿಟ್ಟ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ
Last Updated 14 ಮೇ 2021, 5:17 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ 2,540 ಡೋಸ್‌ ಕೋವಿಶೀಲ್ಡ್‌ ಸಂಗ್ರಹವಿದೆ. ಕೋವ್ಯಾಕ್ಸಿನ್‌ ಸಂಪೂರ್ಣ ಖಾಲಿಯಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

‘2,69,600 ಕೋವಿಶೀಲ್ಡ್ ಹಾಗೂ 20,460 ಕೋವ್ಯಾಕ್ಸಿನ್ ಡೋಸ್‌ಗಳು ಬಂದಿವೆ. ಇದುವರೆಗೆ 2,67,060 ಕೋವಿಶೀಲ್ಡ್, 2,460 ಕೋವ್ಯಾಕ್ಸಿನ್ ಡೋಸ್ ನೀಡಲಾಗಿದೆ. 2,41,578 ಜನರು ಮೊದಲ ಡೋಸ್‌ ಪಡೆದಿದ್ದಾರೆ. 54,358 ಜನರಿಗೆ ಎರಡನೇ ಡೋಸ್‌ ಲಭ್ಯವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ 32 ಕೆಎಲ್, ಸರ್ಕಾರಿ ಆಸ್ಪತ್ರೆಯಲ್ಲಿ 19 ಕೆಎಲ್ ಸೇರಿ ಒಟ್ಟು 51 ಕೆಎಲ್ ಆಮ್ಲಜನಕ, 585ಜಂಬೋ ಸಿಲಿಂಡರ್‌ಗಳು ಲಭ್ಯ ಇವೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿರುವ 98 ಕಂಟೈನ್‌ಮೆಂಟ್ ಜೋನ್‌ಗಳಲ್ಲಿ 10 ಸ್ಥಗಿತಗೊಂಡಿವೆ. 88 ಕಂಟೈನ್‌ಮೆಂಟ್ ಜೋನ್‌ಗಳು ಸಕ್ರಿಯವಾಗಿವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ 552 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 383 ಸೇರಿ 935 ರೆಮ್‌ಡಿಸಿವರ್ ಲಸಿಕೆ ಲಭ್ಯವಿದೆ. ಮಾಸ್ಕ್ ಹಾಕದೆ ಮಾರ್ಗಸೂಚಿ ಉಲ್ಲಂಘಿಸಿದ 9,207 ಪ್ರಕರಣಗಳನ್ನು ದಾಖಲಿಸಿ, ₹ 12,76,850 ದಂಡ ವಿಧಿಸಲಾಗಿದೆ’ ಎಂದರು.

ಕೋವಿಡ್‌ಗೆ ಒಳಗಾದವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 776, ಖಾಸಗಿ ಆಸ್ಪತ್ರೆಗಳಲ್ಲಿ 999 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. 216 ಐಸಿಯು ಹಾಸಿಗೆಗಳಿವೆ. 964 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯವಿದೆ. ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ಗುರುತಿಸಲಾಗಿದೆ. ಪ್ರಸ್ತುತ ಶಿವಮೊಗ್ಗ, ಶಿಕಾರಿಪುರ, ಸಾಗರದಲ್ಲಿ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ವಿವರ ನೀಡಿದರು.

ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಕಾಂಗ್ರೆಸ್ ಆರೋಪ ಆಧಾರರಹಿತ. ನಿಯಂತ್ರಣಕ್ಕೆ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್,ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ ಉಪಸ್ಥಿತರಿದ್ದರು.

ಉದ್ಯೋಗ ಖಾತ್ರಿಗೆ ಮತ್ತೆ ಚಾಲನೆ

ಶಿವಮೊಗ್ಗ: ಕೋವಿಡ್ ಮಾರ್ಗಸೂಚಿ ಅಡಿಯಲ್ಲೇ ಉದ್ಯೋಗ ಖಾತ್ರಿ ಕೆಲಸಗಳು ಆರಂಭಗೊಳ್ಳಲಿವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ನೀಡಿದರು.

ಕೋವಿಡ್ ಸಂಕಷ್ಟದಿಂದ ಉದ್ಯೋಗಾವಕಾಶಗಳು ಕಡಿಮೆಯಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಒಂದು ಸ್ಥಳದಲ್ಲಿ ಕನಿಷ್ಠ 40 ಕೂಲಿ ಕಾರ್ಮಿಕರನ್ನು ಬಳಸಿಕೊಂಡು ನರೇಗಾ ಕೆಲಸ ಕೈಗೊಳ್ಳಲು ಅನುಮತಿ ನೀಡಿದೆ. 2020– 21ನೇ ಸಾಲಿನಲ್ಲಿ ರಾಜ್ಯಕ್ಕೆ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ನೀಡಲಾಗಿತ್ತು. ಈಗಾಗಲೇ 14.87 ಕೋಟಿ ಮಾನವದಿನಗಳನ್ನು ಸೃಜಿಸಿ ಶೇ 114ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರಗತಿ ಸಾಧನೆಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ₹ 800 ಕೋಟಿ ನೀಡಿದೆ ಎಂದರು.

ಪ್ರಸಕ್ತ ಸಾಲಿಗೆ 13 ಕೋಟಿ ಮಾನವ ದಿನಗಳ ಗುರಿ ನಿಗದಿಯಾಗಿದೆ. ಪ್ರತಿ ದಿನಕ್ಕೆ ಸರಾಸರಿ 9 ಲಕ್ಷ ಮಾನವ ದಿನಗಳಂತೆ ಈಗಾಗಲೇ 1.98 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ. 2021ರ ಏಪ್ರಿಲ್‌ನಿಂದ ಕೂಲಿ ಮೊತ್ತ ಹೆಚ್ಚಳವಾಗಿದೆ. ಪ್ರತಿದಿನ ₹ 289 ಹಾಗೂ ಸಲಕರಣಾ ವೆಚ್ಚ ₹ 10 ನೀಡಲಾಗುತ್ತಿದೆ. 100 ದಿನಗಳು ಕೆಲಸ ಮಾಡಿದರೆ ಪ್ರತಿ ಕಾರ್ಮಿಕ ₹ 29,900 ಆದಾಯ ಗಳಿಸಬಹುದಾಗಿದೆ ಎಂದು ವಿವರ ನೀಡಿದರು.

ಪ್ರಸಕ್ತ ಸಾಲಿನಲ್ಲಿ 87,453 ಕುಟುಂಬಗಳಿಗೆ ಹೊಸ ಜಾಬ್‌ ಕಾರ್ಡ್‌ ನೀಡಲಾಗಿದೆ. 2,29,089 ಜನರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕೋವಿಡ್‌ನಿಂದ ಸಾಕಷ್ಟು ಜನರು ನಗರ ತೊರೆದು ಗ್ರಾಮೀಣ ಪ್ರದೇಶಕ್ಕೆ ಹಿಂದಿರುಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT