ಮಂಗಳವಾರ, ಜನವರಿ 18, 2022
15 °C
ಮಾಂಸದ ಅಂಗಡಿಯಲ್ಲಿ ಜನಸಂದಣಿ, ಮಾಸ್ಕ್‌ ಧರಿಸದವರಿಗೆ ಪೊಲೀಸರಿಂದ ದಂಡ

ಶಿವಮೊಗ್ಗ | ವಾರಾಂತ್ಯ ಕರ್ಫ್ಯೂ: ಎರಡನೇ ದಿನವೂ ನಗರ ಸ್ತಬ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ವಾರಾಂತ್ಯ ಕರ್ಫ್ಯೂ ಎರಡನೇ ದಿನವಾದ ಭಾನುವಾರವೂ ಶಿವಮೊಗ್ಗ ನಗರ ಸ್ತಬ್ಧವಾಗಿತ್ತು. ನಗರದ ಪ್ರಮುಖ ರಸ್ತೆಗಳು ಜನ ಸಂಚಾರವಿಲ್ಲದೆ ಬಿಕೊ ಎನ್ನುತ್ತಿದ್ದವು. ಅದರಲ್ಲೂ ಸದಾ ಜನಜಂಗುಳಿಯಿಂದ ಇರುತ್ತಿದ್ದ ಎಎ ವೃತ್ತ, ನೆಹರೂ ರಸ್ತೆ, ಬಿ.ಎಚ್‌.ರಸ್ತೆ, ಖಾಸಗಿ ಮತ್ತು ಸರ್ಕಾರಿ ಬಸ್‌ ನಿಲ್ದಾಣಗಳಲ್ಲೂ ಜನಸಂದಣಿ ಕಡಿಮೆ ಇತ್ತು.

ಮೊದಲ ದಿನ ಬಸ್‌ ಸೌಲಭ್ಯ ಇದ್ದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದ ಕಾರಣ ಭಾನುವಾರ ಖಾಸಗಿ ಬಸ್‌ಗಳ ಸಂಚಾರ ವಿರಳವಾಗಿತ್ತು. ಇದರಿಂದ ಬೇರೆ ಊರುಗಳಿಗೆ ತೆರಳುವವರು, ಆಸ್ಪತ್ರೆಗಾಗಿ ನಗರಕ್ಕೆ ಬರುವವರು ಬಸ್‌ ಇಲ್ಲದೆ ಪರಡಾಡಿದರು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಇತ್ತು. ಆದರೆ, ‍ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಭಾನುವಾರ ಅಗತ್ಯ ಸೇವೆಗಷ್ಟೇ ಅವಕಾಶ ನೀಡಲಾಗಿತ್ತು. ಜನರಿಂದ ಗಿಜಿಗುಡುತ್ತಿದ್ದ ಬಿ.ಎಚ್‌.ರಸ್ತೆ, ಸವಳಂಗ, ಸಾಗರ ರಸ್ತೆಗಳು ಲಾಕ್‌ಡೌನ್‌ ಕಾರಣ ಭಾನುವಾರ ಬಿಕೊ ಎನ್ನುತ್ತಿದ್ದವು. ನೆಹರೂ ರಸ್ತೆ, ದುರ್ಗಿಗುಡಿ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟ ಸ್ಥಗಿತಗೊಂಡಿತ್ತು.

ಬೆಳಿಗ್ಗೆ 6ರಿಂದಲೇ ಪೊಲೀಸರು ವಾಹನಗಳಲ್ಲಿ ಗಸ್ತು ಸುತ್ತಿ ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ನೀಡಿದರು. 

ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ದ್ವಿಮುಖ ಸಂಚಾರವಿರುವ ನೆಹರೂ ರಸ್ತೆ, ಅಮೀರ್ ಅಹಮದ್ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ, ಸವಳಂಗ ರಸ್ತೆ, ಡಿವಿಎಸ್ ರಸ್ತೆಯ ಬ್ಯಾರಿಕೇಡ್‌ ಹಾಕಲಾಗಿತ್ತು.

ಬೆಳಿಗ್ಗೆ ಜನಜಂಗುಳಿ: ಭಾನುವಾರ ಬೆಳಿಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದ ಕಾರಣ ನಗರದಲ್ಲಿ ಸಂಚಾರ ದಟ್ಟಣೆ ಇತ್ತು. ಗಾಂಧಿಬಜಾರ್‌, ವಿನೋಬನಗರ, ದುರ್ಗಿಗುಡಿ, ಜೈಲು ರಸ್ತೆ ಮುಂತಾದ ಕಡೆ ವಾಹನ ಸಂಚಾರ ಹೆಚ್ಚಿತ್ತು. ಬೆಳಿಗ್ಗೆ 10ರ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ, ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು. ಬೆಳಿಗ್ಗೆ ವೇಳೆ ಗಿಜಿಗುಡುತ್ತಿದ್ದ ರಸ್ತೆಗಳು, ಮಧ್ಯಾಹ್ನದ ವೇಳೆ ಜನರಿಲ್ಲದೇ ಬಿಕೊ ಎನ್ನುತ್ತಿದ್ದವು.

ಮಾಂಸದ ಅಂಗಡಿಯಲ್ಲಿ ಜನಸಂದಣಿ: ಕರ್ಫ್ಯೂ ನಡುವೆಯೂ ಮಾಂಸ, ಚಿಕನ್ ಮತ್ತು ಮೀನು ಮಾರಾಟ ಜೋರಾಗಿತ್ತು. ನಗರದ ವಿವಿಧೆಡೆ ಮಾಂಸ, ಮೀನು ಮಾರಾಟ ಮಳಿಗೆಗಳಲ್ಲಿ ಗ್ರಾಹಕರು ಸಂಖ್ಯೆ ಹೆಚ್ಚಿತ್ತು. ಕೋಳಿ ಮಾಂಸಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು.

ಬೀದಿ ಬದಿ ವ್ಯಾಪಾರಿಗಳು ಕಂಗಾಲು
ಶಿವಮೊಗ್ಗ ನಗರದ ಬಿ.ಎಚ್. ರಸ್ತೆ, ಖಾಸಗಿ ಬಸ್ ನಿಲ್ದಾಣ, ವಾರಂತ್ಯ ಕರ್ಫ್ಯೂವಿನಿಂದ ಬೀದಿ ಬದಿ ವ್ಯಾಪಾರಸ್ಥರು ಕಂಗೆಟ್ಟರು.

ಬೆಳಿಗ್ಗೆ ತಿಂಡಿ ಗಾಡಿಯಲ್ಲಿ ಪಾರ್ಸೆಲ್ ನೀಡಲು ಅವಕಾಶವಿತ್ತು. ಹೀಗಾಗಿ ವಿಧ ವಿಧವಾದ ತಿಂಡಿ ಮಾಡಿಕೊಂಡು ಗ್ರಾಹಕರಿಕೆ ಕಾದು ಸಾಕಾದ ಬೀದಿ ಬದಿ ವ್ಯಾಪಾರಿಗಳು ಮಾಡಿದ ತಿಂಡಿಗಳನ್ನು ಚೆಲ್ಲಿದರು. ಹಣ್ಣು, ತರಕಾರಿ, ಸೊಪ್ಪು, ಮಾರುವ ವ್ಯಾಪಾರಿಗಳು ವ್ಯಾಪಾರವಿಲ್ಲ ಎಂದು ಅಳಲು ತೋಡಿಕೊಂಡರು.

ದಂಡ ಹಾಕಲು ಬಂದ ಅಧಿಕಾರಿಗಳಿಗೆ ತರಾಟೆ
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಭಾನುವಾರ ಬೆಳಿಗ್ಗೆ ಮಾಸ್ಕ್ ಧರಿಸದವರಿಗೆ ದಂಡ ಹಾಕಲು ಬಂದ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ. ಜನ ರೊಚ್ಚಿಗೇಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಸ್ಥಳದಿಂದ ಹೊರಟರು.

ವಾರಾಂತ್ಯ ಕರ್ಫ್ಯೂ ವೇಳೆ ಮಹಾನಗರ ಪಾಲಿಕೆ ಅಧಿಕಾರಿಗಳು ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಕಾರ್ಯವನ್ನು ಪುನರಾರಂಭ ಮಾಡಿದರು. ನಗರದ ಪ್ರಮುಖ ಕಡೆಗಳಲ್ಲಿ ಮಾಸ್ಕ್ ಧರಿಸಿದವರನ್ನು ತಡೆದು, ದಂಡ ವಿಧಿಸಿದರು. ಗಾಂಧಿ ಬಜಾರ್‌ನಲ್ಲಿ ಪಾಲಿಕೆ ಅಧಿಕಾರಿಗಳು ದಂಡ ವಿಧಿಸಲು ತೆರಳಿದಾಗ, ಜನ ತಿರುಗಿಬಿದ್ದರು.

ತರಕಾರಿ ಮಾರುಕಟ್ಟೆ ಬಳಿ ವ್ಯಕ್ತಿಯೊಬ್ಬರನ್ನು ತಡೆದು ಮಾಸ್ಕ್ ಧರಿಸದ್ದಕ್ಕೆ ದಂಡ ವಸೂಲಿ ಮಾಡುತ್ತಿದ್ದಾಗ ಸಿಟ್ಟಾದ ಅವರು, ‘ತರಕಾರಿ ತರಲು ನೂರಿನ್ನೂರು ರೂಪಾಯಿ ತಂದಿರುತ್ತೇವೆ. ಅದನ್ನೂ ಇವರು ಕಿತ್ತುಕೊಂಡರೆ ನಾವೇನು ಮಾಡಬೇಕು? ರಾಜಕಾರಣಿಗಳೆಲ್ಲ ಆರಾಮಾಗಿ ಓಡಿಕೊಂಡಿದ್ದಾರೆ. ಅವರಿಗೆ ದಂಡ ಹಾಕಿ’ ಎಂದು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಅಧಿಕಾರಿಗಳು ಮತ್ತು ತರಕಾರಿ ಕೊಳ್ಳಲು ಬಂದಿದ್ದ ವ್ಯಕ್ತಿ ನಡುವಿನ ಮಾತಿನ ಚಕಮಕಿ ಕಾರಣ ಜನ ಸೇರಿದರು. ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಹೊರಟರು.

₹ 63,200 ದಂಡ ವಸೂಲಿ
ಶಿವಮೊಗ್ಗ: ವಾರಾಂತ್ಯ ಕರ್ಫ್ಯೂ ವೇಳೆ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಹಾಗೂ ಮಾಸ್ಕ್‌ ಹಾಕದೆ ತಿರುಗಾಡುತ್ತಿದ್ದವರಿಗೆ ಪೊಲೀಸರು ದಂಡ ವಿಧಿಸಿ ಬಿಸಿ ಮುಟ್ಟಿಸಿದರು.

ಶನಿವಾರ ಮಾಸ್ಕ್‌ ಹಾಕದೆ ತಿರುಗಾಡುತ್ತಿದ್ದವರಿಗೆ ಹಾಗೂ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದ ಪೊಲೀಸರು ಭಾನುವಾರ ದಂಡ ವಿಧಿಸಿದರು.

ಮಾಸ್ಕ್‌ ಹಾಕದೆ ತಿರುಗಾಡುತ್ತಿದ್ದ 137 ಮಂದಿಯಿಂದ ₹ 18,200, ಅನಗತ್ಯವಾಗಿ ಬೈಕಿನಲ್ಲಿ ತಿರುಗಾಡುತ್ತಿದ್ದ 67 ಮಂದಿಯಿಂದ ₹ 35,500, ಕಾರಿನಲ್ಲಿ ತಿರುಗಾಡುತ್ತಿದ್ದ 16 ಮಂದಿಯಿಂದ ₹ 9,500 ಸೇರಿ ಒಟ್ಟು ₹ 63,200 ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.