ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ 9ರಿಂದ ಬೆಳಿಗ್ಗೆ 6ವರೆಗೆ ರಾತ್ರಿ ಕರ್ಫೂ ಜಾರಿ

ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ: ಜಿಲ್ಲಾಧಿಕಾರಿ ಶಿವಕುಮಾರ್
Last Updated 21 ಏಪ್ರಿಲ್ 2021, 17:01 IST
ಅಕ್ಷರ ಗಾತ್ರ

ಶಿವಮೊಗ್ಗ: ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಜಿಲ್ಲೆಯಲ್ಲೂ ಕರ್ಫೂ ಜಾರಿಯಾಗಿದೆ. ಈ ಅವಧಿಯಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ. ಕೊರೊನಾ ಹರಡುವಿಕೆ ತಡೆಯಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಜಾರಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಹೇಳಿದರು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಬುಧವಾರ ಕೊರೊನಾ ಪೀಡಿತರ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರ ಜತೆ ಮಾತನಾಡಿದರು.

ರಾತ್ರಿ ಕರ್ಫೂ, ವಾರಾಂತ್ಯದ ಲಾಕ್‌ಡೌನ್‌ ಜಾರಿಗೆ ಕಟ್ಟುನಿಟ್ಟಿನ ಜಾರಿಗೊಳಿಸುವ ಕುರಿತು ಈಗಾಗಲೇ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಜನರು ಮನೆಯ ಒಳಗೆ ಇದ್ದು, ಕೊರೊನಾ ನಿಯಂತ್ರಣದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ತಾಲೂಕು ಮಟ್ಟದಲ್ಲಿ ಕಣ್ಗಾವಲು ತಂಡಗಳನ್ನು ಈಗಾಗಲೇ ರಚಿಸಲಾಗಿದೆ. ಜನರು ಮನೆಯಿಂದ ಹೊರಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಪಾಲಿಸಬೇಕು. ತಹಶೀಲ್ದಾರ್‌ಗಳು ನಿಗಾವಹಿಸಬೇಕು. ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದೇಹದ ತಾಪಮಾನ ಪರೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಕೊರೊನಾ ನಿಯಂತ್ರಣಕ್ಕೆ ವ್ಯವಸ್ಥಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಲವು ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ನೋಡಲ್ ಅಧಿಕಾರಿಗಳು ಪ್ರತಿ ದಿನ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಾರೆ ಎಂದರು.

ವ್ಯವಸ್ಥೆ ಸುಧಾರಣೆ: ಚಿಕಿತ್ಸೆ ಅಗತ್ಯವಿರುವ ಕೋವಿಡ್‌ ರೋಗಿಗಳನ್ನು ಮೆಗ್ಗಾನ್‍ನಲ್ಲಿ ದಾಖಲು ಮಾಡಲಾಗುತ್ತಿದೆ. ವೈದ್ಯಕೀಯ ನಿಗಾ ಅಗತ್ಯವಿರುವ ವ್ಯಕ್ತಿಗಳಿಗಾಗಿ ಪ್ರಸ್ತುತ ಗಾಜನೂರಿನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಇಲ್ಲಿ ವೈದ್ಯರ ನೇತೃತ್ವದ ತಂಡ ರೋಗಿಗಳ ಆರೋಗ್ಯದ ಮೇಲೆ ನಿಗಾ ಇರಿಸಲಿದೆ. ಹೋಂ ಐಸೋಲೇಷನ್‍ನಲ್ಲಿರುವವರ ಮೇಲೆ ನಿಗಾ ಇರಿಸಲು ಮನೆಗಳಿಗೆ ಭೇಟಿ ನೀಡಲು ಆರೋಗ್ಯ ಕಾರ್ಯಕರ್ತರ ತಂಡಗಳನ್ನು ರಚಿಸಲಾಗಿದೆ. ಪಾಸಿಟಿವ್ ವ್ಯಕ್ತಿಗಳ ತಪಾಸಣೆ ನಡೆಸಲು ಆಯುರ್ವೇದ ಮಹಾವಿದ್ಯಾಲಯ, ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ ಮತ್ತು ಸಾಗರದಲ್ಲಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಬೆಡ್‍ಗಳನ್ನು ಕಾಯ್ದಿರಿಸಲು ಸೂಚನೆ ನೀಡಲಾಗಿದೆ. ಪ್ರಸ್ತುತ ಸುಬ್ಬಯ್ಯ ವೈದ್ಯಕೀಯ ಕಾಲೇಜಿನಲ್ಲಿ 80 ಹಾಸಿಗೆಗಳ ಸೌಲಭ್ಯ ಬಳಸಿಕೊಳ್ಳಲಾಗುತ್ತಿದೆ ಎಂದರು.

ಚುನಾವಣಾ ಪ್ರಚಾರ: ತೀರ್ಥಹಳ್ಳಿ ಮತ್ತು ಭದ್ರಾವತಿ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕೆ ಸೂಚನೆಗಳನ್ನು ನೀಡಲಾಗಿದೆ. ಮನೆ ಮನೆ ಪ್ರಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಗುಂಪು ಸೇರಲು ಅವಕಾಶವಿಲ್ಲ. ಕರ್ಫೂ ಅವಧಿಯಲ್ಲಿ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ಇಲ್ಲ ಎಂದು ಪ್ರತಿಕ್ರಿಯಿಸಿದರು.

ಪ್ರತಿ ದಿನ 3 ಸಾವಿರ ಮಂದಿಯ ಕೊರೊನಾ ತಪಾಸಣೆ ನಡೆಸಬೇಕು. ತಪಾಸಣಾ ವರದಿ ಗರಿಷ್ಠ 36 ತಾಸು ಒಳಗಾಗಿ ಲಭಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ವೈದ್ಯಕೀಯ ಕಾಲೇಜು ನಿರ್ದೇಶಕ ಡಾ.ಸಿದ್ದಪ್ಪ, ಡಾ.ಶ್ರೀಧರ್, ಡಿಎಚ್‍ಒ ಡಾ.ರಾಜೇಶ ಸುರಗಿಹಳ್ಳಿ, ಡಾ.ಶಂಕ್ರಪ್ಪ, ಡಾ.ಮಹೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT