ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಘನತೆಗಾಗಿ ದಲಿತ ಚಳವಳಿ: ಪ್ರಾಧ್ಯಾಪಕ ಬಿ.ಎಲ್. ರಾಜು ಅನಿಸಿಕೆ

ದಲಿತ ಚಳವಳಿ ಏಕತಾ ಸಮಾವೇಶ
Last Updated 16 ನವೆಂಬರ್ 2021, 6:02 IST
ಅಕ್ಷರ ಗಾತ್ರ

ಶಿವಮೊಗ್ಗ: ಎಲ್ಲಿಯವರೆಗೆ ಒಂದು ಸಮಾಜವು ತನ್ನ ಜಾತಿಶ್ರೇಷ್ಠತೆಯನ್ನು ಪ್ರತಿಪಾದಿಸುತ್ತದೆಯೋ ಅಲ್ಲಿಯವರೆಗೆ ಅದು ನಾಗರಿಕ ಸಮಾಜವೆಂದು ಕರೆದುಕೊಳ್ಳಲು ಸಾಧ್ಯವಿಲ್ಲ ಎಂದು ಸಾಗರದ ಇಂದಿರಾಗಾಂಧಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕ ಬಿ.ಎಲ್. ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಗಾಜನೂರಿನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದಲಿತ ಚಳವಳಿ ಏಕತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತಿನ ಚೆರಿತ್ರೆಯಲ್ಲಿ ಹಕ್ಕು, ಸ್ವಾತಂತ್ರ್ಯಗಳಿಗೆ ಸಾವಿರಾರು ಚಳವಳಿಗಳು ನಡೆದುಹೋಗಿವೆ. ಆದರೆ, ಮನುಷ್ಯರ ಸಾಮಾಜಿಕ ಘನತೆಗಾಗಿ ಒಂದು ಶತಮಾನದಿಂದ ನಡೆಯುತ್ತಿರುವ ಏಕೈಕ ಚಳವಳಿ ಎಂದರೆ ದಲಿತ ಚಳವಳಿ ಮಾತ್ರ ಎಂದರು.

ಭಾರತವು ಅಮಾನವೀಯವಾದ ಜಾತಿವ್ಯವಸ್ಥೆ, ಪುರೋಹಿತಶಾಹಿ, ಭೂಮಾಲೀಕ ವ್ಯವಸ್ಥೆಗಳನ್ನು ಕಾಪಾಡಿಕೊಂಡಷ್ಟು ಕಾಲ ದಲಿತ ಚಳವಳಿ ಕೂಡ ನಡೆಯಬೇಕಾದ್ದು ಅನಿವಾರ್ಯ ಆಗಬಹುದೇನೋ ಅನ್ನಿಸುತ್ತಿದೆ. ಭೂಮಿ, ಬಂಡವಾಳ, ಅಧಿಕಾರಗಳು ದಲಿತರಿಗೆ ಶಾಶ್ವತವಾಗಿ ಸಿಗದಂತೆ ವಂಚಿಸಿರುವ ಚರಿತ್ರೆ ಇಲ್ಲಿದೆ ಎಂದು ತಿಳಿಸಿದರು.

ದಲಿತರು ಎಂದೆಂದಿಗೂ ಸಮಾನತೆ ಸಾಧಿಸಲಾಗದಂತೆ ಮಾಡುವ ಹುನ್ನಾರದ ಭಾಗವಾಗಿ ಅಸ್ಪೃಶ್ಯತೆಯನ್ನು ಈ ಹೊತ್ತಿಗೂ ಜತನದಿಂದ ಕಾಪಾಡಿಕೊಂಡು ಬರಲಾಗುತ್ತಿದೆ. ದಲಿತರ ಏಳಿಗೆಗಾಗಿ ಇದ್ದ ಸಾಂವಿಧಾನಿಕ ಹಕ್ಕು, ಅವಕಾಶಗಳನ್ನು ನಾಶಮಾಡುವ ಸಂಚುಗಳು ಕಾರ್ಯಾಚರಣೆಯಲ್ಲಿವೆ. ಅದರ ವಿರುದ್ಧ ದಲಿತ ಚಳವಳಿ ಗಟ್ಟಿಯಾಗಿ ನಿಂತು ಸಾಂವಿಧಾನಿಕವಾಗಿ ಹೋರಾಡದೆ ಬೇರೆ ದಾರಿಯಿಲ್ಲ ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ. ಗುರುಮೂರ್ತಿಯವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಕಾರವಾರದ ಫಕೀರಪ್ಪ, ಎಂ. ಏಳುಕೋಟಿ, ಮಂಗಳೂರಿನ ದೇವಿದಾಸ್, ರಾಯಚೂರಿನ ಹನುಮಂತಪ್ಪ ಮುಂಡಗೋಡು, ಕಾಕರಗಲ್, ಚಿಕ್ಕಬಳ್ಳಾಪುರದ ಬಿ.ಎನ್. ಗಂಗಾಧರಪ್ಪ, ಮಂಡ್ಯದ ಅಂದಾನಿ, ತುಮಕೂರಿನ ಕುಂದೂರು ತಿಮ್ಮಣ್ಣ, ಕೋಲಾರದ ವಿ. ನಾರಾಯಣಸ್ವಾಮಿ, ಹಾಸನದ ಸೋಮಶೇಖರ್ ಅವರೂ ಇದ್ದರು.

ಮಹತ್ವದ ಗುರಿ ಸಾಧಿಸಿದ ದಲಿತ ಚಳವಳಿ

ಅಂಬೇಡ್ಕರ್ ಆತಂಕ ಹಾಗೂ ಅಂಬೇಡ್ಕರ್ ನಿರೀಕ್ಷೆಗಳ ಸಾಕಾರ ಎರಡನ್ನೂ ಆನಂತರದ ಕಾಲ ಕಂಡಿದೆ. ಅಂಬೇಡ್ಕರ್‌ ವಿಚಾರ ಮತ್ತು ಹೋರಾಟದ ಬೀಜಗಳನ್ನು ಕರ್ನಾಟಕದ ನೆಲದಲ್ಲಿ ಬಿತ್ತಿ ಬಲಿಷ್ಠಗೊಳಿಸಿದ ಪ್ರೊ.ಬಿ. ಕೃಷ್ಣಪ್ಪ ಅವರು ಮುನ್ನಡೆಸಿದ ದಲಿತ ಚಳವಳಿಯು ಶಿಕ್ಷಣ, ಸಂಘಟನೆ, ಹೋರಾಟಗಳ ದಿಕ್ಕಿನಲ್ಲಿ ಮಹತ್ವದ ಗುರಿಗಳನ್ನು ಸಾಧಿಸಿದೆ. ಸಂವಿಧಾನ ಕೊಟ್ಟ ದಲಿತರ ಹಕ್ಕುಗಳನ್ನು ರಕ್ಷಿಸುವ ಕರ್ತವ್ಯವನ್ನು ದಲಿತ ರಾಜಕಾರಣಿಗಳು, ದಲಿತ ಚಳವಳಿಗಾರರು, ದಲಿತ ವಿದ್ಯಾವಂತರ ಜೊತೆಗೆ ಸಮಾನತೆಯಲ್ಲಿ ನಂಬಿಕೆಯಿಟ್ಟ ದಲಿತೇತರ ವರ್ಗವೂ ಮಾಡಿದೆ. ಇವರೆಲ್ಲರೂ ಅಂಬೇಡ್ಕರ್ ತೋರಿದ ಗುರಿಯತ್ತ ದೇಶವನ್ನು ನಡೆಸಲೆತ್ನಿಸಿದ್ದಾರೆ. ಹಾಗೆಯೇ ಗುರಿಯನ್ನು ತಪ್ಪಿಸಿದ ಖಳರೂ ಇದ್ದಾರೆ. ಕಳೆದ ದಶಕಗಳಲ್ಲಂತೂ ಅಂಬೇಡ್ಕರ್ ಹೋರಾಟದ ಫಲಗಳನ್ನು ಕಾರ್ಪೊರೇಟ್ ವಲಯ ಹಾಗೂ ಕೋಮುಶಕ್ತಿಗಳು ನಾಶ ಮಾಡಲೆತ್ನಿಸುತ್ತಾ, ದಲಿತ ಸಮುದಾಯವನ್ನೂ ಹಿನ್ನಡೆಯತ್ತ ದೂಡುತ್ತಿವೆ.

–ಎಂ. ಗುರುಮೂರ್ತಿ, ಡಿಎಸ್‌ಎಸ್‌ ರಾಜ್ಯ ಸಂಚಾಲಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT