ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮೆರವಣಿಗೆ: ಗಜ ಪಡೆಗೆ ಆಹ್ವಾನ

ತಾಲೀಮು ಇಲ್ಲದೇ ಅಂಬಾರಿ ಹೊರಲಿರುವ ಸಾಗರನ ಜೊತೆ ಹೆಜ್ಜೆ ಹಾಕಲಿದೆ ಭಾನುಮತಿ
Last Updated 13 ಅಕ್ಟೋಬರ್ 2021, 5:53 IST
ಅಕ್ಷರ ಗಾತ್ರ

ಶಿವಮೊಗ್ಗ: ಮೈಸೂರು ದಸರಾ ಮಾದರಿಯಲ್ಲಿ ನಡೆಯುತ್ತಿರುವ ಶಿವಮೊಗ್ಗ ದಸರಾ ಮೆರವಣಿಗೆಗೆ ಕೊನೆಗೂ ಆನೆಗಳು ಆಯ್ಕೆಯಾಗಿದ್ದು, ದಸರಾದಲ್ಲಿ ಭಾಗಿಯಾಗುವ ಸಕ್ರೆಬೈಲಿನ ಆನೆಗಳನ್ನು ಮಂಗಳವಾರ ಪಾಲಿಕೆ ವತಿಯಿಂದ ಆಹ್ವಾನಿಸಲಾಯಿತು.

ದಸರಾ ಮೆರವಣಿಗೆಗೆ ಇನ್ನೆರಡು ದಿನಗಳು ಬಾಕಿ ಉಳಿದಿರುವಾಗ ಎಚ್ಚೆತ್ತುಕೊಂಡಿರುವ ಪಾಲಿಕೆ ಆಡಳಿತ ಮೇಯರ್‌ ನೇತೃತ್ವದಲ್ಲಿ ಮಂಗಳವಾರ ಸಕ್ರೆಬೈಲಿನ ವನ್ಯಜೀವಿ ವಿಭಾಗಕ್ಕೆ ತೆರಳಿದ ದಸರಾ ಉತ್ಸವ ಸಮಿತಿ ಸದಸ್ಯರು ಗಜಪಡೆಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಿದರು.

ಮಾವುತರು ಇದಕ್ಕೆ ಸಹಕರಿಸಿದರು. ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸದಸ್ಯರಾದ ಚನ್ನಬಸಪ್ಪ, ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ವಿಶ್ವಾಸ್, ಧೀರರಾಜ್ ಹೊನ್ನವಿಲೆ, ಶಿವಕುಮಾರ್, ಜ್ಞಾನೇಶ್ವರ್, ನಾಗರಾಜ್, ಆರತಿ ಆ.ಮ. ಪ್ರಕಾಶ್, ಭಾನುಮತಿ ವಿನೋದ್, ಸಂಗೀತಾ, ಕಲ್ಪನಾ ರಾಮು ಹಾಗೂ ಡಾ. ವಿನಯ್ ಇದ್ದರು.

ಮೆರವಣಿಗೆಯಲ್ಲಿ ಈ ಬಾರಿ ಸಾಗರನ ಜೊತೆ ಭಾನುಮತಿ ಆನೆ ಹೆಜ್ಜೆಹಾಕಲಿದೆ. ಸಾಗರ ಆನೆ ಚಾಮುಂಡೇಶ್ವರಿ ದೇವಿಯ ಬೆಳ್ಳಿಯ ವಿಗ್ರಹವನ್ನೊಳಗೊಂಡ ಅಂಬಾರಿ ಹೊರಲಿದ್ದು, ದಸರಾ ಮೆರವಣಿಗೆಗೆ ಮೆರುಗು ನೀಡಲಿದೆ.

ತಾಲೀಮು ಇಲ್ಲದೇ ಜಂಬೂಸವಾರಿ: ಮೈಸೂರು ದಸರಾ ಮಾದರಿಯಲ್ಲಿ ಜಂಬೂಸವಾರಿ ಮಾಡಲು ಹೊರಟಿರುವ ಶಿವಮೊಗ್ಗ ಪಾಲಿಕೆಯು ಜಂಬೂಸವಾರಿಗೆ ಬೇಕಾದ ತಯಾರಿಯೇ ಮಾಡಿಕೊಂಡಿಲ್ಲ. ಮುಖ್ಯವಾಗಿ ಆನೆಗಳಿಗೆ ತಾಲೀಮು ಆಗಿಲ್ಲ.

ಶಿವಮೊಗ್ಗ ದಸರಾದ ಜಂಬೂಸವಾರಿಗೆ ಸಕ್ರೆಬೈಲು ಬಿಡಾರದಿಂದ ಆನೆಗಳು ಬರುತ್ತವೆ. ಪ್ರತಿ ಬಾರಿ ಬಿಡಾರದ ಅತ್ಯಂತ ಸೌಮ್ಯ ಸ್ವಭಾವದ ಸಾಗರ ಆನೆಯು ನಾಡದೇವಿ ಚಾಮುಂಡೇಶ್ವರಿ ಮೂರ್ತಿ ಮತ್ತು ಅಂಬಾರಿಯನ್ನು ಹೊರುತ್ತಿದೆ. ಈ ಬಾರಿಯೂ ಸಾಗರ ಆನೆಯೇ ಅಂಬಾರಿ ಹೊರಲಿದೆ. ಇದರ ಜೊತೆ ಭಾನುಮತಿ ಆನೆ ಪಾಲ್ಗೊಳ್ಳಲಿದೆ. ಕಡೆ ಕ್ಷಣದಲ್ಲಿ ಸರ್ಕಾರದಿಂದ ಅನುಮತಿ ದೊರೆತ ಕಾರಣ ಆನೆಗಳು ಶಿವಮೊಗ್ಗಕ್ಕೆ ಬರಲು ಸಜ್ಜಾಗಿವೆ.

ಶಿವಮೊಗ್ಗದ ದಸರಾ ಆರಂಭದಿಂದಲೂ ಒಂದಿಲ್ಲೊಂದು ಗೊಂದಲಗಳ ನಡುವೆಯೇ ಸಾಗಿಕೊಂಡು ಬರುತ್ತಿದೆ. ಇನ್ನೇನು ಹಬ್ಬಕ್ಕೆ ಒಂದು ವಾರವಿದೆ ಎನ್ನುವಾಗ ಆನೆಗಳನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದು ಸರ್ಕಾರದ ಹಂತದಿಂದ ದಾಟಿ ಬರುವ ಹೊತ್ತಿಗೆ ವಿಳಂಬವಾಗುತ್ತಿದೆ. ಈ ವರ್ಷವೂ ಅದೇ ಆಗಿದೆ.‌ ಈ ಬಾರಿ ಜಂಬೂಸವಾರಿಗೆ ಪೂರಕವಾದ ತಯಾರಿಯೇ ಆಗಿಲ್ಲ. ಪಾಲಿಕೆಯ ನಿಧಾನಗತಿ ಮತ್ತು ಗೊಂದಲದ ನಿರ್ಧಾರದಿಂದಾಗಿ ಅರಣ್ಯಾಧಿಕಾರಿಗಳೂ ಸಮಸ್ಯೆಗೆ ಸಿಲುಕಿದ್ದಾರೆ. ಕೊನೆ ಕ್ಷಣದವರೆಗೆ ಯಾವ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿವೆ ಎಂಬುದು ನಿರ್ಧಾರವಾಗಿರಲಿಲ್ಲ. ಹಾಗಾಗಿ ಈ ಬಾರಿ ತಾಲೀಮು ನಡೆದಿಲ್ಲ.
ಪ್ರತಿ ವರ್ಷ ಸಕ್ರೆಬೈಲು ಆನೆಬಿಡಾರದಲ್ಲಾದರೂ ಮರಳಿನ ಚೀಲ ತುಂಬಿ ತಾಲೀಮು ನೀಡಲಾಗುತ್ತಿತ್ತು. ಆದರೆ, ಈ ಸಲ ವಿಜಯದಶಮಿಗೆ ಎರಡು ದಿನವಿರುವಾಗ ಆನೆಗಳ ಆಯ್ಕೆಯಾಗಿದೆ ಎಂದು ದೂರುತ್ತಾರೆನಾಗರಿಕ ಹಿತರಕ್ಷಣಾ ವೇದಿಕೆ ಪ‍್ರಧಾನ ಕಾರ್ಯದರ್ಶಿ ಕೆ.ವಿ. ವಸಂ‌ತ ಕುಮಾರ್.

ಸಾಕಾನೆಗಳಾದರೂ ನಿತ್ಯ ಕಾಡಿನಲ್ಲೇ ಇರುತ್ತವೆ. ಈ ಆನೆಗಳು ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳಬೇಕು. ವಾಹನಗಳ ಶಬ್ದ, ಕಲಾ ತಂಡಗಳ ತಮಟೆ, ಡೊಳ್ಳು ವಾದ್ಯಗಳ ಶಬ್ದ, ಪಟಾಕಿಗಳ ಶಬ್ದಗಳು ಅಭ್ಯಾಸವಾಗಬೇಕು. ಇದೇ ಕಾರಣಕ್ಕೆ ಮೈಸೂರಿನಲ್ಲಿ ವಾರಗಟ್ಟಲೇ ತಾಲೀಮು ನಡೆಸಲಾಗುತ್ತದೆ. ಹೀಗಿದ್ದೂ ಶ್ರೀರಂಗಪಟ್ಟಣ ದಸರಾದಲ್ಲಿ ಪಟಾಕಿ ಶಬ್ದಕ್ಕೆ ಆನೆ ಬೆದರಿದ ಘಟನೆ ಇನ್ನೂ ಹಸಿರಾಗಿದೆ.

ಮತ್ತೊಂದೆಡೆ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯವೂ ಮುಖ್ಯ. 2016ರ ದಸರಾ ವೇಳೆ ಅಂಬಾರಿ ಹೊರುತ್ತಿದ್ದಂತೆ ಸಾಗರ ಆನೆಯ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಚಿಕಿತ್ಸೆ ನೀಡಿದರೂ ಸಾಗರ ಅಂಬಾರಿ ಹೊರುವುದು ಕಷ್ಟ ಎಂದು ವೈದ್ಯರು ತಿಳಿಸಿದರು. ಹಾಗಾಗಿ ಅಂಬಾರಿಯನ್ನು ಲಾರಿಯಲ್ಲಿ ಇರಿಸಿ ಮೆರವಣಿಗೆ ನಡೆಸಲಾಗಿತ್ತು.ಇವೆಲ್ಲವೂ ಆಡಳಿತ ಪಕ್ಷದವರಿಗೆ ಚೆನ್ನಾಗಿ ನೆನಪಿದೆ.ಆದರೂ ಪಟ್ಟು ಬಿಡದೆ ಆನೆಗಳನ್ನು ಬಂಜೂಸವಾರಿಗೆ ಕರೆಸುತ್ತಿದ್ದಾರೆ. ತಾಲೀಮು ಇಲ್ಲದೆಯೇ ಅಂಬಾರಿ ಹೊರಿಸಲು ಸಿದ್ಧತೆ ನಡೆಸಿದ್ದಾರೆ. ಇಷ್ಟೆಲ್ಲಾ ಗೊಂದಲದ ನಡುವೆ ದಸರಾಗೆ ದುಂದುವೆಚ್ಚ ಮಾಡುವುದು ಸರಿಯೇ ಎಂದು ಪಾಲಿಕೆ ಸದಸ್ಯರೊಬ್ಬರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT