ಮಂಗಳವಾರ, ಡಿಸೆಂಬರ್ 7, 2021
21 °C

ಡಿಸಿಸಿ ಬ್ಯಾಂಕ್ ನಿರ್ದೇಶಕರ ಅನರ್ಹತೆಗೆ ಮತ್ತೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಸೇರಿದಂತೆ ಏಳು ನಿರ್ದೇಶಕರನ್ನು ಅನರ್ಹಗೊಳಿಸಿ 2016ರಲ್ಲಿ ಆದೇಶ ನೀಡಿದ್ದ ಸಹಕಾರ ಇಲಾಖೆ ಜಂಟಿ ನಿಬಂಧಕರ ಆದೇಶಕ್ಕೆ ಗುರುವಾರ ಹೆಚ್ಚುವರಿ ನಿಬಂಧಕರು ತಡೆಯಾಜ್ಞೆ ನೀಡಿದ್ದಾರೆ.

ಹೆಚ್ಚುವರಿ ನಿಬಂಧಕರ ತಡೆಯಾಜ್ಞೆಯಿಂದಾಗಿ ಅಧಿಕಾರ ಕಳೆದುಕೊಳ್ಳಲಿದ್ದ ಅಧ್ಯಕ್ಷ, ನಿರ್ದೇಶಕರಿಗೆ ಮತ್ತೆ ಅಧಿಕಾರದಲ್ಲಿ ಮುಂದುವರಿಯುವ ಅವಕಾಶ ಲಭಿಸಿದೆ.

ಬ್ಯಾಂಕ್‌ನ ಗಾಂಧಿ ಬಜಾರ್‌ ಶಾಖೆಯಲ್ಲಿ 2014ರಲ್ಲಿ ನಡೆದಿದ್ದ ₹ 62.77 ಕೋಟಿ ನಕಲಿ ಬಂಗಾರ ಅಡಮಾನ ಸಾಲದ ಹಗರಣದ ಸಮಯದಲ್ಲಿ ಇದ್ದ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಹಾಗೂ 7 ನಿರ್ದೇಶಕರ ವಿರುದ್ಧ ವಿಚಾರಣೆ ನಡೆಸಿದ್ದ ಸಹಕಾರ ಇಲಾಖೆ ಜಂಟಿ ನಿಬಂಧಕರು, ಅವರನ್ನು ನಿರ್ದೇಶಕ ಸ್ಥಾನದಿಂದ ಅನರ್ಹಗೊಳಿಸಿ 2016ರಲ್ಲಿ ಆದೇಶ ಹೊರಡಿಸಿದ್ದರು.

ಜಂಟಿ ನಿಬಂಧಕರ ಆದೇಶದ ವಿರುದ್ಧ ಎಲ್ಲ ನಿರ್ದೇಶಕರೂ ಹೈಕೋರ್ಟ್‌ ಮೊರೆ ಹೋಗಿದ್ದರು. ಆಗ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇದೇ ನ.17 ರಂದು ಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿತ್ತು. ಪ್ರಾಧಿಕಾರದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತ್ತು. ಅನರ್ಹತೆ ಒಳಗಾಗಿದ್ದ ಈಗಿನ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ, ನಿರ್ದೇಶಕರಾದ ಜೆ.ಪಿ.ಯೋಗೇಶ್, ಕೆ.ಪಿ.ದುಗ್ಗಪ್ಪಗೌಡ, ಶ್ರೀಪಾದರಾವ್, ಎಂ.ಎಂ.ಪರಮೇಶ್, ವಿಜಯದೇವ್ ಮತ್ತು ಅಗಡಿ ಅಶೋಕ್ ಅವರು ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನಿಬಂಧಕರು 2016ರಲ್ಲಿ ಜಂಟಿ ನಿಬಂಧಕರು ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದಾರೆ. ಇದರಿಂದಾಗಿ ಅನರ್ಹತೆ ಭೀತಿ ಎದುರಿಸುತ್ತಿದ್ದ ಎಲ್ಲ ನಿರ್ದೇಶಕರು ಸದ್ಯಕ್ಕೆ ನಿರಾಳರಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು