ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿ: ಇಳಿಕೆ ಕಾಣದ ಡೆಂಗಿ ಪ್ರಕರಣ

ಕಿರಣ್‌ಕುಮಾರ್‌
Published 11 ನವೆಂಬರ್ 2023, 6:29 IST
Last Updated 11 ನವೆಂಬರ್ 2023, 6:29 IST
ಅಕ್ಷರ ಗಾತ್ರ

ಭದ್ರಾವತಿ: ತಾಲೂಕಿನಾದ್ಯಂತ ಡೆಂಗಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದ್ದು, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಮನೆಗಳ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಜಾಗೃತರಾಗಿ ಇರುವಂತೆ ನಗರಸಭೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಪ್ರಸಕ್ತ ವರ್ಷದ ಜನವರಿಯಿಂದ ಅಕ್ಟೋಬರ್ 31ರವರೆಗೆ 82 ಡೆಂಗಿ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ ಇದೇ ಸಮಯದಲ್ಲಿ 72 ಪ್ರಕರಣಗಳು ಹಾಗೂ 2021ರಲ್ಲಿ 78 ಪ್ರಕರಣಗಳು ಪತ್ತೆಯಾಗಿದ್ದವು.

ಪ್ರಸಕ್ತ ವರ್ಷ ನಗರ ಪ್ರದೇಶದಲ್ಲಿ ಡೆಂಗಿ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ನಗರದ ಭೂತನಗುಡಿ, ಗಾಂಧಿನಗರ, ಹೊಸಮನೆ, ಅನ್ವರ್ ಕಾಲೊನಿ, ಉಜ್ಜನಿಪುರ, ಜನ್ನಾಪುರ, ಹುತ್ತ ಕಾಲೊನಿ, ಭದ್ರಾ ಕಾಲೋನಿ, ಕಾಜಿಮೊಲ್ಲ, ವಿದ್ಯಾ ಮಂದಿರ, ಗಣೇಶ ಕಾಲೊನಿ ಸೇರಿ ಇನ್ನಿತರ ಕಾಲೊನಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. 

ಸೊಳ್ಳೆಗಳ ಕಾಟ ವಿಪರೀತವಾಗಿದೆ. ನೂತನವಾಗಿ ನಿರ್ಮಿಸಿರುವ ಚರಂಡಿ ಕಾಮಗಾರಿ ಕಳಪೆಯಾಗಿದ್ದು ಚರಂಡಿ ನೀರು ಮುಂದೆ ಹೋಗದೇ ಅಲ್ಲೇ ನಿಲ್ಲುತ್ತದೆ. ನಿತ್ಯ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ.
ನಾಗರತ್ನಮ್ಮ, ಭೂತನಗುಡಿ ನಿವಾಸಿ

‘ಅಡಿಕೆ ತೋಟಗಳಲ್ಲಿ ಬಿದ್ದಿರುವ ಮತ್ತು ಸಂಗ್ರಹಿಸಿಟ್ಟ ಅಡಿಕೆ ಹಾಳೆಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಮಳೆ ನೀರಿನಿಂದ ಹಳ್ಳ– ಕೊಳ್ಳಗಳಲ್ಲಿ ನೀರು ಶೇಖರಣೆಗೊಂಡು ಸೊಳ್ಳೆಗಳ ಉತ್ಪತ್ತಿ ಅಧಿಕವಾಗುತ್ತಿದೆ ಎಂದು ಸಮೀಕ್ಷೆಯ ಮೂಲಕ ತಿಳಿದು ಬಂದಿದೆ. ಗ್ರಾಮೀಣ ಭಾಗದಲ್ಲಿ ಅಡಿಕೆ ಹಾಳೆಯಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವಂತೆ ಅಡಿಕೆ ತೋಟದ ಮಾಲೀಕರಿಗೆ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ. ಅಶೋಕ್ ತಿಳಿಸಿದರು.

‘ಈಗಾಗಲೇ ಡೆಂಗಿ ಹರಡಲು ಇರುವ ಕಾರಣವನ್ನು ತಿಳಿಸಲು ತಾಲ್ಲೂಕಿನಾದ್ಯಂತ ಜಾಗೃತಿ ಕಾರ್ಯಕ್ರಮ ಏರ್ಪಡಿಸುತ್ತಿದ್ದೇವೆ. ನಗರಗಳಲ್ಲಿ ಕಸ ಸಂಗ್ರಹಿಸುವ ಗಾಡಿಯ ಮೂಲಕವೂ ಲೌಡ್‌ ಸ್ಪೀಕರ್‌ಗಳಲ್ಲಿ ಈ ಕುರಿತು ಪ್ರಕಟಿಸಲಾಗುತ್ತಿದೆ. ಸೋಂಕು ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಆರೋಗ್ಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಸೊಳ್ಳೆಗಳ ನಿಯಂತ್ರಣಕ್ಕೆ ಚರಂಡಿ ಮತ್ತು ಮನೆಗಳಲ್ಲಿ ಫಾಗಿಂಗ್‌ ಮಾಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಇದರಿಂದ ಡೆಂಗಿ ಹರಡುವ ಏಡಿಸ್‌ ಈಜಿಪ್ಟ್ಐ ಸೊಳ್ಳೆಯನ್ನು ನಿಯಂತ್ರಿಸಬಹುದು’ ಎಂದು ನಗರಸಭೆ ಆಯುಕ್ತ ಮನುಕುಮಾರ್ ‘ಪ್ರಜಾವಾಣಿ’ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಲಕ್ಷಣಗಳು

ಜ್ವರ, ತಲೆನೋವು, ಕಣ್ಣುಗಳ ಹಿಂಬದಿಯಲ್ಲಿ ತೀವ್ರ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು ಹಾಗೂ ಇತರೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಉಳಿದಂತೆ ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2ರಿಂದ 7 ದಿನಗಳವರೆಗೆ ಇರುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ.

‘ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಿ’

ನಿಂತಿರುವ ಶುದ್ಧ ನೀರಿನಲ್ಲಿ ಡೆಂಗೆ ಚಿಕೂನ್‌ಗುನ್ಯಾ ಹರಡುವ ಏಡಿಸ್ ಈಜಿಪ್ಟೈ ಸೊಳ್ಳೆ ಮೊಟ್ಟೆ ಇಟ್ಟು ತನ್ನ ಸಂತಾನೋತ್ಪತ್ತಿ ಹೆಚ್ಚಿಸುತ್ತದೆ. ಸೊಳ್ಳೆ ಉತ್ಪತ್ತಿಯ ತಾಣಗಳನ್ನು ಗುರುತಿಸಿ ಶುದ್ಧ ನೀರನ್ನು ನೆಲಕ್ಕೆ ಸುರಿಯುವುದು ಮನಿಯಂತ್ರಣದ ಪ್ರಮುಖ ವಿಧಾನ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕಚ್ಚುತ್ತವೆ. ಅದಕ್ಕೆಂದೇ ಮನೆಯ ಒಳಾಂಗಣ ಮತ್ತು ಹೊರಾಂಗಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನೀರು ಸಂಗ್ರಹಣಾ ಪರಿಕರಗಳನ್ನು ವಾರಕ್ಕೊಮ್ಮೆ ಸ್ವಚ್ಛ ಮಾಡಬೇಕು ಮತ್ತು ಮುಚ್ಚಳದಿಂದ ಮುಚ್ಚಬೇಕು ಎಂದು ನಿರ್ಮಲ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಗ್ಲಾಡಿಸ್ ಪಿಂಟೋ ಸಲಹೆ ನೀಡಿದರು.

ನಗರಸಭೆಯಿಂದ ಚರಂಡಿಗಳಿಗೆ ಕೀಟನಾಶಕ ಸಿಂಪಡಣೆ
ನಗರಸಭೆಯಿಂದ ಚರಂಡಿಗಳಿಗೆ ಕೀಟನಾಶಕ ಸಿಂಪಡಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT