ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ನೋಟಿಸ್ ನೀಡುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ

ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಎಚ್ಚರಿಕೆ
Last Updated 30 ಸೆಪ್ಟೆಂಬರ್ 2018, 18:44 IST
ಅಕ್ಷರ ಗಾತ್ರ

ಸೊರಬ: ಕೆಎಸ್‍ಆರ್‌ಟಿಸಿ ನೌಕರರಿಗೆ ಹಿರಿಯ ಅಧಿಕಾರಿಗಳು ಸಣ್ಣ ವಿಷಯಗಳಿಗೆ ನೋಟಿಸ್ ನೀಡುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಹೇಳಿದರು.

ಭಾನುವಾರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರಿಗೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿ ಅವರ ಉತ್ಸಾಹವನ್ನು ಕುಗ್ಗಿಸಬಾರದು. ಹೊಂದಾಣಿಕೆಯಿಂದ ನಡೆದುಕೊಳ್ಳಬೇಕು. ಇದರಿಂದ ಸಂಸ್ಥೆ ಪ್ರಗತಿ ಹೊಂದಲು ಸಾಧ್ಯವಿದೆ’ ಎಂದರು.

ಕೆಎಸ್‌ಆರ್‌ಟಿಸಿ ಲಾಭ ನಷ್ಟದ ಬಗ್ಗೆ ತಿಳಿದುಕೊಳ್ಳಲು ಶೀಘ್ರದಲ್ಲಿಯೇ ತಂತ್ರಜ್ಞಾನ ಕಂಡು ಹಿಡಿಯಲಾಗುವುದು ಎಂದ ಅವರು, ಪ್ರಸ್ತುತ ಸಂಸ್ಥೆಯು ₹600 ಕೋಟಿ ನಷ್ಟದಲ್ಲಿದೆ. ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ 1.20ಲಕ್ಷ ಸಿಬ್ಬಂದಿಯಲ್ಲಿ ಕನ್ನಡಿಗರ ಸಂಖ್ಯೆ ಶೇ 90ರಷ್ಟಿದೆ ಎಂದ ಅವರು, ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ನೀಡಿದ ಇಲಾಖೆ ಸಾರಿಗೆ ಸಂಸ್ಥೆ ಮಾತ್ರ ಎಂದರು.

ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಹಾಗೂ ಶಾಂತವೇರಿ ಗೋಪಾಲಗೌಡ ಅವರನ್ನು ಮರೆಯಲು ಸಾಧ್ಯವಿಲ್ಲ. ರಾಜಕೀಯವಾಗಿ ಬೆಳೆದಿರುವ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಮಧು ಬಂಗಾರಪ್ಪ ಅವರನ್ನು ತಾಲ್ಲೂಕಿನ ಜನರ ಒಂದುಗೂಡಿಸಿದರೆ ಬಂಗಾರಪ್ಪ ಅವರು ಇಲ್ಲದ ಹೊತ್ತಿನಲ್ಲಿ ಅವರ ಹೆಸರಿಗೆ ಮತ್ತಷ್ಟು ಮನ್ನಣೆ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

ದೂರದೃಷ್ಟಿವುಳ್ಳ ನಾಯಕ ಬಂಗಾರಪ್ಪ ಅವರು ಪಟ್ಟಣದಲ್ಲಿ ಎಲ್ಲ ಸರ್ಕಾರಿ ಕಚೇರಿಗಳು ಒಂದೆಡೆ ಕಾರ್ಯ ನಿರ್ವಹಿಸುವ ಹಿತದೃಷ್ಟಿಯಿಂದ 50ಎಕರೆ ಜಾಗವನ್ನು ಮೀಸಲಿಟ್ಟಿರುವುದು ಅವರ ಪ್ರಗತಿಪರ ಚಿಂತನೆಗೆ ಸಾಕ್ಷಿಯಾಗಿದೆ ಎಂದರು.

ಸಾರ್ವಜನಿಕರ ಅನುಕೂಲಕ್ಕಾಗಿ ತಾಲ್ಲೂಕು ಕೇಂದ್ರಗಳಲ್ಲಿರುವ ಬಸ್ ನಿಲ್ದಾಣದ ಮಳಿಗೆಗೆಳಲ್ಲಿ ಸರ್ಕಾರಿ ಕಚೇರಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳನ್ನು ಬಸ್ ನಿಲ್ದಾಣದ ಮಳಿಗೆಗಳಲ್ಲಿ ಸ್ಥಳಾಂತರ ಮಾಡಲಾಗಿದೆ. ಸಂಘ ಸಂಸ್ಥೆಗಳು ಬಂದ್‍ಗೆ ಕರೆ ನೀಡುವ ಸಂದರ್ಭ ಸಾರ್ವಜನಿಕರು ಬಸ್ ಸಂಚಾರ ಸ್ಥಗಿತಗೊಳಿಸಲು ಬಿಡದಂತೆ ನೋಡಿಕೊಳ್ಳಬೇಕು ಇದರಿಂದ ಸಂಸ್ಥೆ ಲಾಭ ಜೊತೆಗೆ ಜನರಿಗೂ ಅನುಕೂಲವಾಗಲಿದೆ ಎಂದರು.

ಶಾಸಕ ಕುಮಾರ್ ಬಂಗಾರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದಯಾನಂದ್, ಸಾರಿಗೆ ಇಲಾಖೆ ಅಧಿಕಾರಿ ಅಶೋಕ್, ಜಿಲ್ಲಾ ಪಂಚಾಯಿತಿ ಸಿಒ ಶಿವರಾಮೇಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಹೆಗಡೆ, ಸದಸ್ಯ ನಾಗರಾಜ ಚಿಕ್ಕಸವಿ, ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಅರ್ಜುನಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೀಬಿ ಜುಲೇಖಾ, ಸದಸ್ಯರಾದ ಎಂ.ಡಿ. ಉಮೇಶ್, ಮಹೇಶಗೌಳಿ, ಮಂಚಿ ಹನುಮಂತಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT