ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಖಾತೆಗೆ ಪರಿಹಾರದ ಹಣ ಜಮಾ ಬೇಡ

ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚನೆ
Last Updated 16 ಸೆಪ್ಟೆಂಬರ್ 2022, 4:20 IST
ಅಕ್ಷರ ಗಾತ್ರ

ಶಿವಮೊಗ್ಗ: ನೆರೆ ಸಂತ್ರಸ್ತರಿಗೆ ನೀಡುವ ಪರಿಹಾರದ ಮೊತ್ತ ಸಾಲದ ಖಾತೆಗೆ ಜಮಾ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ (ಡಿಸಿಸಿ, ಡಿಎಲ್‌ಆರ್‌ಸಿ) ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಬಿದ್ದಿದೆ. ಇದರಿಂದಾಗಿ ಗ್ರಾಮೀಣ ರೈತರ ಅಸಂಖ್ಯಾತ ಮನೆಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂತ್ರಸ್ತರ ಖಾತೆಗಳಿಗೆ ನೇರವಾಗಿ ಸಹಾಯಧನ ನೀಡುತ್ತಿದೆ ಎಂದರು.

ಸಂತ್ರಸ್ತರ ಪರಿಹಾರ ಹಣ ಸಾಲದ ಖಾತೆಗೆ ಜಮಾ ಮಾಡಬಾರದು. ಜತೆಗೆ ಬ್ಯಾಂಕುಗಳ ಸಿಬ್ಬಂದಿ ಗ್ರಾಹಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಎಂದರು.

ಕೃಷಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆ ಮುಂತಾದ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಕೇಂದ್ರವು ಶೇ 35ರಷ್ಟು ಹಾಗೂ ರಾಜ್ಯ ಸರ್ಕಾರವು ಶೇ 15ರಷ್ಟು ಸಹಾಯಧನ ನೀಡುತ್ತಿದೆ. ಈ ಯೋಜನೆಗಳಡಿಯಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿ, ಸ್ವತಂತ್ರ ಉದ್ಯಮ ಆರಂಭಿಸಲು ಅನುವು ಮಾಡಿಕೊಡುವಂತೆ ಬ್ಯಾಂಕುಗಳ ವ್ಯವಸ್ಥಾಪಕರಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ
ವಿವಿಧ ಬ್ಯಾಂಕ್‌ಗಳಿಂದ ಸಾಲ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಸೌಲಭ್ಯದ ಚೆಕ್‌ ಸಾಂಕೇತಿಕವಾಗಿ ವಿತರಿಸಿದರು.

ಜಿಲ್ಲೆಯ ಕೆಲವು ಬ್ಯಾಂಕುಗಳ ಪ್ರಗತಿ ತೃಪ್ತಿಕರವಾಗಿಲ್ಲ. ಅಲ್ಲದೇ ಶಿಶು, ಕಿಶೋರ್ ಮತ್ತು ತರುಣ್ ಯೋಜನೆಗಳಲ್ಲಿನ ಪ್ರಗತಿ ಆಶಾದಾಯಕವಾಗಿಲ್ಲ. ಮುಂದಿನ ದಿನಗಳಲ್ಲಿ ಈ ಯೋಜನೆಗಳಡಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುವಂತೆ, ಸಣ್ಣ ಮತ್ತು ಮದ್ಯಮ ಕೈಗಾರಿಕಾ ವಲಯ ಹಾಗೂ ಕೃಷಿ ಕ್ಷೇತ್ರಕ್ಕೂ ಆದ್ಯತೆ ನೀಡುವಂತೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಡಿ.ಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸಂದೀಪ್‍ರಾವ್, ಆರ್‌ಬಿಐ ಪ್ರತಿನಿಧಿ ಸುಪ್ರಿಯಾ ಬ್ಯಾನರ್ಜಿ, ಎಸ್‌ಬಿಐ ಡಿವಿಜನಲ್ ಮ್ಯಾನೇಜರ್ ಬಿ.ರವಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಯತೀಶ್ ಇದ್ದರು.

***

ಡಿಜಿಟಲ್ ಬ್ಯಾಂಕಿಂಗ್; ಶೇ 40ರಷ್ಟು ಪ್ರಗತಿ

ನೋಟುಗಳ ಅಮಾನ್ಯೀಕರಣದ ನಂತರ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗೆ ಜನ ಹೊಂದಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ಗಳು ಸಕ್ರಿಯವಾಗಿದ್ದು, ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ವಿಶ್ವದ ಬೇರೆ ಬೇರೆ ದೇಶ ಗಮನಿಸಿದಾಗ ಭಾರತ ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶೇ 40ರಷ್ಟು ಪ್ರಗತಿ ಸಾಧಿಸಿದೆ ಎಂದು ರಾಘವೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT