ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊರಬ: ನದಿಗಳ ಒಡಲು ಬರಿದಾಯ್ತು.. ಕುಡಿಯುವ ನೀರಿಗೆ ಹೆಚ್ಚಿತು ಹಾಹಾಕಾರ

ಸೊರಬ ತಾಲ್ಲೂಕಿನ 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ‌ ಸಮಸ್ಯೆ
Published 7 ಮಾರ್ಚ್ 2024, 6:49 IST
Last Updated 7 ಮಾರ್ಚ್ 2024, 6:49 IST
ಅಕ್ಷರ ಗಾತ್ರ

ಸೊರಬ: ತಾಲ್ಲೂಕಿನಲ್ಲಿ ದಶಕಗಳ ಹಿಂದೆ ಬಿರು ಬೇಸಿಗೆಯಲ್ಲೂ ಹರಿಯುತ್ತಿದ್ದ ನದಿ, ಹಳ್ಳ, ಕೊಳ್ಳಗಳ ఒಡಲು ಬರಿದಾಗಿವೆ. ಸದಾ ಒರತೆ ಕಾಣುತ್ತಿದ್ದ ಮಲೆನಾಡಿನ ಹೊಲಗದ್ದೆಗಳು ಈಗ ಪಾಳು ಬಿದ್ದಿವೆ. ವರದಾ ಹಾಗೂ ದಂಡಾವತಿ‌‌‌ ನದಿಗಳ ಎಡಬಲ ಕಂಗೊಳಿಸುತ್ತಿದ್ದ ಪೈರು ಕಣ್ಮರೆಯಾಗಿ ಕುಡಿಯುವ ನೀರಿಗೂ ಹಾಹಾಕಾರ ಎದುರಾಗಿದೆ.

ತಾಲ್ಲೂಕಿನ ಚಂದ್ರಗುತ್ತಿ, ಕಸಬಾ, ಜಡೆ ಹೋಬಳಿ ಭಾಗದಲ್ಲಿ ನದಿಯ ನೀರನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಿದ್ದ ರೈತರು ಇದೀಗ ಕೊಳವೆಬಾವಿ ಅವಲಂಬಿಸಿ ಕೃಷಿ ಮಾಡಬೇಕಿದೆ. ಕೆಲವು ವರ್ಷಗಳಿಂದ ವಾಡಿಕೆಯಷ್ಟು ಮಳೆ ಬೀಳದ ಪರಿಣಾಮ ತಾಲ್ಲೂಕಿನಲ್ಲಿ ಕೊಳವೆ ಬಾವಿಗಳಲ್ಲಿ ನೀರು ಬರಿದಾಗುತ್ತಿದೆ. ಇದರಿಂದ ತಾಲ್ಲೂಕಿನಲ್ಲಿ ನೀರಿಗೆ ಬವಣೆ ಎದುರಾಗಿದೆ.

ತಾಲ್ಲೂಕಿನ ಸುಮಾರು 20 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ‌ ಸಮಸ್ಯೆ ತಲೆದೋರಿದೆ. 75ಕ್ಕೂ ಅಧಿಕ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ತಾಲ್ಲೂಕಿನ ಪುರಾಣ ಪ್ರಸಿದ್ಧ ರೇಣುಕಾಂಬಾ ದೇವಸ್ಥಾನಕ್ಕೆ ಪ್ರತಿದಿನ ಬರುವ ಸಾವಿರಾರು ಭಕ್ತರು ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಮಾರ್ಚ್ 15ರಂದು ಜಾತ್ರಾ ಮಹೋತ್ಸವ ಜರುಗಲಿದ್ದು, ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗಲಿದೆ. 

ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮನವಳ್ಳಿ, ಎಣ್ಣೆಕೊಪ್ಪ, ಹಿರೇಇಡಗೋಡು, ಗೆಂಡ್ಲ ಗ್ರಾಮ ಪಂಚಾಯಿತಿಯ ತಾಳಗುಪ್ಪ, ಹೊಸೂರು, ಹುರಳಿ‌ ಗ್ರಾಮ ಪಂಚಾಯತಿಯ ಚಿಕ್ಕಚೌಟಿ, ಹರಳಿಕೊಪ್ಪ, ಕೋಡಿಹಳ್ಳಿ, ನ್ಯಾರ್ಶಿ ಗ್ರಾಮ ಪಂಚಾಯಿತಿಯ ಚನ್ನಪಟ್ಟಣ, ನ್ಯಾರ್ಶಿ, ತತ್ತೂರು ಪಂಚಾಯಿತಿಯ ವಡ್ಡಿಗೆರೆ, ತತ್ತೂರು, ನೆಗವಾಡಿ, ಗುಡುಗಿನಕೊಪ್ಪ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು‌ ಸರಬರಾಜು ಮಾಡಲಾಗುತ್ತಿದೆ.

ಅಂತರ್ಜಲ ಕುಸಿತದಿಂದಾಗಿ ರೈತರ ಅಡಿಕೆ, ಬಾಳೆ ತೋಟ, ಶುಂಠಿ ಬೆಳೆಗಳೂ ಒಣಗುತ್ತಿವೆ. ತಾಲ್ಲೂಕಿನ ಜೀವನದಿಗಳಾದ ವರದಾ ಹಾಗೂ ದಂಡಾವತಿ ತಮ್ಮ ಜೀವಜಲ ಕಳೆದುಕೊಂಡು 4 ತಿಂಗಳು ಕಳೆದಿವೆ. ಈ ಭಾಗದಲ್ಲಿ ಕೊಳವೆಬಾವಿಗಳಲ್ಲಿ ಅಷ್ಟೊಂದು ನೀರು ಬರದ ಕಾರಣ ಇಲ್ಲಿಯವರೆಗೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ ಎನ್ನುವುದು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಸ್ಥರ ಆಕ್ರೋಶವಾಗಿದೆ.

ಕೈಗೂಡದ ನೀರಾವರಿ ಯೋಜನೆಗಳು:

ಮಲೆನಾಡಿನ ಕೇಂದ್ರ ಬಿಂದುವಾಗಿರುವ ತಾಲ್ಲೂಕು ಭೌಗೋಳಿಕವಾಗಿ ವಿಶಿಷ್ಟ ಲಕ್ಷಣಗಳನ್ನು ಹೊಂದಿದ್ದು, ಕೆಲವು ವರ್ಷಗಳ ಈಚೆಗೆ ಈಗ ಸಂಪೂರ್ಣ ಅರೆಮಲೆನಾಡಾಗಿ ಬದಲಾವಣೆ ಹೊಂದಿದೆ. ದಟ್ಟ ಕಾಡು ಮಾಯವಾಗಿ ಬಯಲು ಸೀಮೆಯಂತೆ ಭಾಸವಾಗುತ್ತದೆ. ಮೂಡಿ, ಮೂಗೂರು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಂಡರೂ, ಆನವಟ್ಟಿ ಭಾಗದ ರೈತರ ಜಮೀನಿಗೆ ನೀರುಣಿಸುವ ಭಾಗ್ಯ ಈಡೇರಿಲ್ಲ. ಅಸಮರ್ಪಕ ವಿದ್ಯುತ್ ಹಾಗೂ ತಾಂತ್ರಿಕ ಸಮಸ್ಯೆಯಿಂದಾಗಿ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು‌ ತುಂಬಿಸಲು ಸಾಧ್ಯವಾಗಿಲ್ಲ.

ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ವರದಾ ನದಿಗೆ ಅಡ್ಡಲಾಗಿ‌ ಬ್ಯಾರೇಜ್‌ ನಿರ್ಮಾಣಕ್ಕೆ ಅನುದಾನ ಘೋಷಿಸಿದೆ. ಚಂದ್ರಗುತ್ತಿ ಸಮೀಪ ಬ್ಯಾರೇಜ್ ನಿರ್ಮಾಣವಾದರೆ ಇತಿಹಾಸ ಪ್ರಸಿದ್ಧ ರೇಣುಕಾಂಬಾ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ಜೊತೆಗೆ ಆ ಭಾಗದ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ‌ಸಮಸ್ಯೆ‌ ಬಗೆ ಹರಿಯಬಲ್ಲದು.

ಈಶ್ವರಪ್ಪ ಕೊಡಕಣಿ
ಈಶ್ವರಪ್ಪ ಕೊಡಕಣಿ
ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಬರಪೀಡಿತ ಪ್ರದೇಶ ಎಂದು ತಾಲ್ಲೂಕು ಘೋಷಣೆ ಆಗಿದ್ದು ಪರಿಹಾರ ಒದಗಿಸಲು ಅನುದಾನ ಬಿಡುಗಡೆ ಮಾಡಬೇಕು
–ಈಶ್ವರಪ್ಪ‌ ಕೊಡಕಣಿ ಅಧ್ಯಕ್ಷ ತಾಲ್ಲೂಕು ರೈತ ಸಂಘ ಸೊರಬ
ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಶೀಘ್ರದಲ್ಲಿ ಕುಡಿಯುವ ನೀರು ಕಲ್ಪಿಸಲು ₹ 45 ಲಕ್ಷ‌ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ
ಪ್ರದೀಪಕುಮಾರ್ ಇ.ಒ. ತಾಲ್ಲೂಕು ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT