ಶಿವಮೊಗ್ಗ: ಜಿಲ್ಲೆಯಾದ್ಯಂತ ದಸರಾ ಹಬ್ಬವನ್ನುಸಂಭ್ರಮದಿಂದ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವದ 9ನೇ ದಿನವಾದ ಗುರುವಾರ ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಕೊರೊನಾ ಹಾಗೂ ಬೆಲೆ ಏರಿಕೆ ನಡುವೆಯೂ ಹಬ್ಬ ಕಳೆಗಟ್ಟಿದೆ.
ಅಂಗಡಿಗಳು, ಕಚೇರಿಗಳು ಸೇರಿ ವಿವಿಧೆಡೆ ಆಯುಧ ಪೂಜೆ ನೆರವೇರಿಸಲಾಗುತ್ತಿದೆ. ಕೃಷಿಕರು ಗಾಡಿ ನೇಗಿಲು ಟ್ರ್ಯಾಕ್ಟರ್ ಮೊದಲಾದ ಸಲಕರಣೆಗಳನ್ನ ಪೂಜಿಸುತ್ತಾರೆ.
ಶಿವಮೊಗ್ಗ ನಗರದಲ್ಲಿ ಬುಧವಾರ ಮಳೆಯ ಕಿರಿಕಿರಿಯ ನಡುವೆಯೂ ನಾಡಹಬ್ಬ ದಸರಾಕ್ಕೆ ಕಳೆಕಟ್ಟಿದೆ. ಈಗಾಗಲೇ ಅಂತಿಮ ಸಿದ್ಧತೆಗಳು ನಡೆದಿದ್ದು, ಆಯುಧಪೂಜೆ ಹಾಗೂ ವಿಜಯದಶಮಿ ಅಂಗವಾಗಿ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಮತ್ತು ಇತರೆ ವಸ್ತುಗಳ ಮಾರಾಟ ಜೋರಾಗಿತ್ತು.
ಬೆಲೆ ಏರಿಕೆ ಬಿಸಿ: ಈ ಬಾರಿ ದಸರಾ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಸೇವಂತಿಗೆ, ಚೆಂಡು ಹೂ ಬೆಲೆಯೂ ಅಧಿಕವಾಗಿದೆ. ಸೇಬು, ಮೂಸಂಬಿ, ಕಿತ್ತಲೆ, ಬಾಳೆ ಹಣ್ಣು ಹೀಗೆ ವಿವಿಧ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ.
ನಗರದ ತುಂಬಾ ಬೂದುಕುಂಬಳ– ವ್ಯಾಪಾರ ಇಲ್ಲ: ಆಯುಧ ಪೂಜೆ ಪ್ರಯುಕ್ತ ನಗರಕ್ಕೆ ಬೂದುಕುಂಬಳ ಕಾಯಿ ರಾಶಿ ರಾಶಿ ಬಂದಿದೆ. ಎತ್ತ ನೋಡಿದರೂ ಕುಂಬಳಕಾಯಿ ರಾಶಿ ಕಾಣಿಸುತ್ತಿತ್ತು. ಆದರೆ, ಗ್ರಾಹಕರ ಸಂಖ್ಯೆ ಕಡಿಮೆ ಇತ್ತು.
ನಗರದ ದುರ್ಗಿಗುಡಿ, ಪ್ರವಾಸಿ ಮಂದಿರ, ಕುವೆಂಪು ರಸ್ತೆ, ಗೋಪಿ ಸರ್ಕಲ್, ಗಾಂಧಿ ಬಜಾರ್, ವಿನೋಬನಗರ, ವಿದ್ಯಾನಗರ, ಬಿಎಚ್ ರಸ್ತೆ ಹೀಗೆ ರಸ್ತೆ ಬದಿಗಳಲ್ಲಿ ಬೂದುಕುಂಬಳ ಕಾಯಿ ರಾಶಿ ಹಾಕಲಾಗಿದೆ.
ತಾಲ್ಲೂಕಿನ ವಿವಿಧೆಡೆಯಿಂದ ಬಂದಿದ್ದ ಜನರು ವಿವಿಧ ಅಂಗಡಿಗಳ ಪೂಜೆ, ದಿನಸಿ ಅಂಗಡಿ, ಕಾರ್ಖಾನೆ, ವಾಹನಗಳ ಪೂಜೆಗಾಗಿ ಬೂದುಕುಂಬಳ ಕಾಯಿಯನ್ನು
ಖರೀದಿಸಿದರು.
‘ನಮ್ಮಲ್ಲಿ ಕೆಲವರು ಈ ಕಾಯಿಯನ್ನು ಬೆಳೆಯುವವರಿದ್ದಾರೆ. ಆದರೆ, ನಾವು ರೈತರಿಂದ ಖರೀದಿಸಿ ತಂದು ಮಾರಾಟ ಮಾಡುತ್ತಿದ್ದೇವೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಕಾಯಿ ಮಾರುಕಟ್ಟೆಗೆ ಬಂದಿದೆ. ಕಾಯಿ ಕೇಳುವವರೇ ಇಲ್ಲ. ಕಡಿಮೆ ಬೆಲೆಗೆ ಕೇಳುತ್ತಾರೆ. ತಂದಿರುವ ಕಾಯಿ ಮಾರಿದರೆ ಸಾಕು. ಕೊನೆಯ ಪಕ್ಷ ಬಾಡಿಗೆ ಹಾಗೂ ಅಸಲಿನ ದುಡ್ಡು ಹುಟ್ಟಿದರೆ ಸಾಕು ಎನ್ನುವಂತಾಗಿದೆ’ ಎನ್ನುತ್ತಾರೆ ವ್ಯಾಪಾರಿ ಸುರೇಶ್.
‘ಜಂಬೂಸವಾರಿಗೆ ಅನುಮತಿ ಇಲ್ಲ’
ಮೈಸೂರು ಮಾದರಿಯಲ್ಲಿ ಶಿವಮೊಗ್ಗದ ದಸರಾ ಜಂಬೂಸವಾರಿಯ ಚಿಂತನೆ ಇತ್ತು. ಆದರೆ, ಈ ಬಾರಿ ಜಂಬೂಸವಾರಿಗೆ ಸರ್ಕಾರದ ಅನುಮತಿ ಇಲ್ಲ. ಹೀಗಾಗಿ ಈ ಬಾರಿ ಜಂಬೂಸವಾರಿ ಇಲ್ಲ. ದಸರಾ ಉತ್ಸವಕ್ಕೆ ಸಕ್ರೆಬೈಲು ಆನೆಗಳನ್ನು ಆಹ್ವಾನಿಸಲಾಗಿದ್ದು, ಅವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಅಂಬುಛೇದನ ಕಾರ್ಯಕ್ರಮದಲ್ಲಿ ಮುಜರಾಯಿ ದೇವರು ಮಾತ್ರ ಭಾಗವಹಿಸಲಿವೆ ಎಂದು ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.