ಬುಧವಾರ, ಜನವರಿ 19, 2022
28 °C
ವಿಧಾನಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಭಾಗಿ

ಶಿವಮೊಗ್ಗದಿಂದಲೇ ರಾಜಕೀಯ ಕಹಳೆ: ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ವಿಧಾನಪರಿಷತ್‌ ಚುನಾವಣೆ ಮುಗಿದ ಮೇಲೆ ಮತ್ತೆ ಬರುತ್ತೇವೆ. ಶಿವಮೊಗ್ಗದಿಂದಲೇ ರಾಜಕೀಯ ಕಹಳೆಯನ್ನು ಊದುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು.

ಇಲ್ಲಿನ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಈಶ್ವರಪ್ಪ ಅವರು ಸಿದ್ದರಾಮಯ್ಯರ ಬಗ್ಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಬಿಜೆಪಿ 40 ಪರ್ಸೆಂಟ್ ಸರ್ಕಾರ ಎಂದು ಜನರೇ ಹೇಳುತ್ತಿದ್ದಾರೆ. ತೀರ್ಥಹಳ್ಳಿ ಹಾಗೂ ಭದ್ರಾವತಿಯ ಸ್ಥಳೀಯ ಸಂಸ್ಥೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಬಹಳಷ್ಟು ಜನರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನಮ್ಮ ಪಕ್ಷ ಅಧಿಕಾರದಲ್ಲಿ ಇರದಿದ್ದರೂ ಜೆಡಿಎಸ್‌ನ ಮಧು ಬಂಗಾರಪ್ಪ ಮತ್ತಿತರರು ಕಾಂಗ್ರೆಸ್ ಸೇರಿದ್ದಾರೆ. ವಿಧಾನ ಪರಿಷತ್‌ ಚುನಾವಣೆಯಲ್ಲಿ ಆರ್‌.ಪ್ರಸನ್ನಕುಮಾರ್‌ ಅವರ ಗೆಲವು ನಿಶ್ಚಿತ ಎಂದರು.

ಕಾಂಗ್ರೆಸ್‌ ಅಧಿಕಾರಕ್ಕೆ ಆಸೆಪಟ್ಟ ಪಕ್ಷ ಅಲ್ಲ: ಕಾಂಗ್ರೆಸ್‌ ಅಧಿಕಾರಕ್ಕೆ ಆಸೆಪಡುವ ಪಕ್ಷವಲ್ಲ, ದೇಶದ ಅಭಿವೃದ್ಧಿಗಾಗಿ ದುಡಿಯುವ ಪಕ್ಷ. ಈ ಹಿಂದೆ ರಾಷ್ಟ್ರಪತಿಯಾಗಿದ್ದ ಅಬ್ದುಲ್‌ ಕಲಾಂ ಅವರು ದೇಶದ ಪ್ರಧಾನಿಯಾಗುವಂತಹ ಅವಕಾಶ ಸೋನಿಯಾ ಗಾಂಧಿಗೆ ನೀಡಿದ್ದಾಗ. ಅದನ್ನು ತಿರಸ್ಕರಿಸಿದ ಸೋನಿಯಾ ಗಾಂಧಿ ಅವರು ಆರ್ಥಿಕ ತಜ್ಞರಾದ ಮನಮೋಹನ್‌ಸಿಂಗ್‌ ಅವರನ್ನು ಪ್ರಧಾನಿಮಂತ್ರಿಯಾಗಿ ಮಾಡಿದರು. ಅವತ್ತು ಮನಮೋಹನ್‌ಸಿಂಗ್‌ ಜಾರಿಗೆ ತಂದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ಇವತ್ತಿಗೂ ಗ್ರಾಮೀಣ ಜನತೆಯ ಅನ್ನಕ್ಕೊಂದು ದಾರಿಯಾಗಿದೆ. ಹೀಗೆ ಕಾಂಗ್ರೆಸ್‌ ಪಕ್ಷ ಕೇವಲ ಅಧಿಕಾರಕ್ಕೆ ಆಸೆ ಪಟ್ಟ ಪಕ್ಷವಲ್ಲ. ದೇಶಕ್ಕಾಗಿ ದುಡಿಯುತ್ತಿರುವ ಪಕ್ಷ ಎಂದರು.

ಬಡ ವರ್ಗದ ಜನರಿಗೆ ಇವತ್ತು ಉಚಿತವಾಗಿ ಅಕ್ಕಿ ಸಿಗುತ್ತಿದೆ ಎಂದರೆ ಅದಕ್ಕೆ ಕಾಂಗ್ರೆಸ್‌ ಕಾರಣ. ಇಂತಹ ನೂರಾರು ಯೋಜನೆಗಳನ್ನು ಕಾಂಗ್ರೆಸ್‌ ಪಕ್ಷ ನೀಡಿದೆ. ಇಂತಹ ಒಂದೇ ಒಂದು ಯೋಜನೆಯನ್ನು ಬಿಜೆಪಿ ಕೊಟ್ಟಿಲ್ಲ. ಕೊಟ್ಟ ಕಾನೂನನ್ನೇ ಸರಿಯಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಲು ಬಿಜೆಪಿಗೆ ಆಗಲಿಲ್ಲ.

ಆಪರೇಶನ್‌ ಮಾಡಿ ಕಾಂಗ್ರೆಸ್‌ ಶಾಸಕರನ್ನು ಕೊಂಡು ಬಿಜೆಪಿಯವರು ಡಬಲ್‌ ಎಂಜಿನ್‌ ಸರ್ಕಾರ ಮಾಡಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು, ನಂತರ ಯಡಿಯೂರಪ್ಪ ಅವರೇ ಕಣ್ಣೀರು ಹಾಕಿ ರಾಜೀನಾಮೆ ನೀಡಿದರು. ರಾಷ್ಟ್ರ ಪಕ್ಷವಾಗಿ ಬಿಜೆಪಿ ದೇಶಕ್ಕೆ ಶಕ್ತಿ ನೀಡಬೇಕಿತ್ತು ಆಗಲಿಲ್ಲ. ಇಂಥ ಒಂದು ಸರ್ಕಾರವನ್ನು ನಾವು ನೊಡಲೇ ಇಲ್ಲ ಎಂದು ಕುಟುಕಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಶಾಸಕ ಸಂಗಮೇಶ್ವರ್ ಮಧುಬಂಗಾರಪ್ಪ, ಆರ್‌.ಎಂ.ಮಂಜುನಾಥ್ ಗೌಡ ಸೇರಿದಂತೆ ಮುಖಂಡರು, ಕಾರ್ಯಕರ್ತರು
ಇದ್ದರು.

ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಶಿವಮೊಗ್ಗ: ‘ನನ್ನ ಅವಧಿಯಲ್ಲಿ ಹಣ ಪಡೆದು ಇಲಾಖೆಗಳ ಎನ್‌ಒಸಿ ಕೊಟ್ಟಿದ್ದೇನೆ ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ಘೊಷಿಸುತ್ತೇನೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲೆಸೆದರು.

ಇಲ್ಲಿನ ಸವಳಂಗ ರಸ್ತೆಯಲ್ಲಿರುವ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಯೋಜಿಸಿದ್ದ ವಿಧಾನಪರಿಷತ್‌ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಶೇ 40ರಷ್ಟು ಪರ್ಸೆಂಟೇಜ್ ನೀಡಿದರೆ ಮಾತ್ರ ಹಣ ಬಿಡುಗಡೆ ಆಗಲಿದೆ ಎಂದು ನಾನು ಆರೋಪಿಸಿಲ್ಲ. ಇದನ್ನು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸಣ್ಣ ನೀರಾವರಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ದಿ ಪಿಡಬ್ಲೂಡಿ, ಎಲ್ಲಾ ಇಲಾಖೆಯಲ್ಲಿ ಪರ್ಸೆಂಟೇಜ್ ನೀಡಿದರೆ ಮಾತ್ರ ಕೆಲಸ ಆಗಲಿದೆ. ಬಿಜೆಪಿ ಸರ್ಕಾರದಲ್ಲಿ
ಶೇ 40ರಷ್ಟು ಹಣ ನೀಡಿದರೆ ಇನ್ನೆಲ್ಲಿ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಾಗುತ್ತದೆ’ ಎಂದು ಪ್ರಶ್ನಿಸಿದರು.

‘ಈ ತರಹ ಯಾವ ಕಾಲದಲ್ಲಿಯೂ ನಡೆದಿರಲಿಲ್ಲ. 12 ವರ್ಷ
ಹಣಕಾಸು ಮಂತ್ರಿ ಆಗಿ ಕೆಲಸ ಮಾಡಿದ್ದೇನೆ. ಎಲ್ಲಾ‌ ಇಲಾಖೆಯಲ್ಲಿ ಎನ್‌ಒಸಿ ನೀಡಿದ್ದೀನಿ. ನಾನು ಹಣ ತೆಗೆದುಕೊಂಡಿರುವುದಾಗಿ ಒಬ್ಬ ಸಾಬೀತು ಪಡಿಸಿದರೆ ನಾನು ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇನೆ’ ಎಂದು ಸವಾಲು ಎಸೆದರು.

‘ಈಶ್ವರಪ್ಪಗೆ ಸ್ವಾಭಿಮಾನವಿಲ್ಲ’

‘ಬಿಜೆಪಿ ದೇಶದಲ್ಲೇ ಭ್ರಷ್ಟಾಚಾರದ ದೊಡ್ಡ ಪಕ್ಷ. ಇದನ್ನು ಬಿಜೆಪಿಯವರೇ ಹೇಳುತ್ತಿದ್ದಾರೆ. ಈ ಹಿಂದೆ ಬಿಜೆಪಿ ಭ್ರಷ್ಟ ಆಡಳಿತದ ಬಗ್ಗೆ ಖುದ್ದು ಈಶ್ವರಪ್ಪ ಅವರೇ ಮುಖ್ಯಮಂತ್ರಿ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಅವತ್ತು ಈಶ್ವರಪ್ಪ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೆ. ಆದರೆ, ಈಶ್ವರಪ್ಪ ಅವರು ಸ್ವಾಭಿಮಾನ ಇಲ್ಲದೇ ಬದುಕುತ್ತಿದ್ದಾರೆ. ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಮುರುಗೇಶ್‌ ನಿರಾಣಿ ಮುಂದಿನ ಮುಖ್ಯಮಂತ್ರಿ ಎನ್ನುತ್ತಾರೆ. ಆದರೆ, ಅಮಿತ್‌ ಷಾ ಅವರು ಬೊಮ್ಮಾಯಿ ನಾಯಕತ್ವದಲ್ಲಿ ಮುಂದಿನ ಚುನಾವಣೆ ನಡೆಯುತ್ತದೆ ಎಂದಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿ ಏನೆಲ್ಲ ಆಟವಾಡುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕುಟುಕಿದರು.

‘ಸಚಿವ ಈಶ್ವರಪ್ಪ ಅವರು ತಾನು ಜವಾಬ್ದಾರಿ ಸ್ಥಾನದಲ್ಲಿ ಇದ್ದೇನೆ ಎಂಬುದನ್ನೇ ಮರೆತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಇರಬೇಕು ಎಂದರೆ ಬೊಮ್ಮಾಯಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು. ಇದೇ ಬಿಜೆಪಿಗೆ ಇರುವ ಮಾರ್ಗ’ ಎಂದು
ಹರಿಹಾಯ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು