ಸೋಮವಾರ, ಮಾರ್ಚ್ 27, 2023
32 °C
ಸೌಲಭ್ಯ ವಂಚಿತ ಗ್ರಾಮ ಶೆಟ್ಟಿಹಳ್ಳಿ; ಕಾಡು ಪ್ರಾಣಿಗಳ ಹಾವಳಿ

ಶಿವಮೊಗ್ಗ: 6 ದಶಕ ಕಳೆದರೂ ವಿದ್ಯುತ್‌ ಕಾಣದ ಶೆಟ್ಟಿಹಳ್ಳಿ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣ ಆರಂಭವಾದ ನಂತರ ಅಲ್ಲಿನ ಜನರನ್ನು ಲಾರಿಗಳಲ್ಲಿ ತುಂಬಿಕೊಂಡು ಬಂದು ಶೆಟ್ಟಿಹಳ್ಳಿ ಅರಣ್ಯದ ಮಧ್ಯೆ ಬಿಟ್ಟು ಹೋಗಿದ್ದರು. ಅಂದು ನಾನಿನ್ನೂ ಚಿಕ್ಕವನು. ಬೆಟ್ಟ, ಗುಡ್ಡ ಏರಿಳಿದು ಹಣಗೆರೆಕಟ್ಟೆ ಶಾಲೆಗೆ ಹೋಗಬೇಕಿತ್ತು. ಕಾಡು ಪ್ರಾಣಿಗಳ ಹಾವಳಿ. ರಸ್ತೆ ಇಲ್ಲ. ನೀರಿಲ್ಲ. ವಿದ್ಯುತ್ ಇಲ್ಲ. ಇಂತಹ ಸ್ಥಿತಿಯಲ್ಲೇ ಜೀವನ ಕಳೆದಿದ್ದೇವೆ. ಈಗಲೂ ಅದೇ ಸ್ಥಿತಿ ಇದೆ. ಮೂಲ ಸೌಲಭ್ಯ ಮರೀಚಿಕೆಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ಮಿತಿಮೀರಿದೆ. ಕಾಡಾನೆಗಳು ದಾಳಿ ಇಡುತ್ತಿವೆ. ಬೆಳೆ ನಾಶ ಮಾಡುತ್ತಿವೆ. ಯಾರೇ ಅಧಿಕಾರಕ್ಕೆ ಬಂದರೂ ಪರಿಹಾರ ಸಿಕ್ಕಿಲ್ಲ. ನಾವು ಬದುಕಿರುವುದಾದರೂ ಏಕೆ ಎನ್ನುವ ಪ್ರಶ್ನೆ ನಿತ್ಯವೂ ಕಾಡುತ್ತಿದೆ’..

–ಇದು ಶಿವಮೊಗ್ಗದಿಂದ 20 ಕಿ.ಮೀ. ದೂರದಲ್ಲಿ ಅಭಯಾರಣ್ಯದ ಮಧ್ಯೆ ಇರುವ ಶೆಟ್ಟಿಹಳ್ಳಿ–ಚಿತ್ರಶೆಟ್ಟಿ ಹಳ್ಳಿಯ ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಜೆ. ರಾಜಪ್ಪ ಅವರ ನೋವಿನ ನುಡಿ.

ಮಲೆನಾಡಿನ ಜೀವನದಿ ಶರಾವತಿಗೆ ಸ್ವಾತಂತ್ರ್ಯಪೂರ್ವದಲ್ಲೇ ಮಡೆನೂರು–ಹಿರೇಭಾಸ್ಕರ ಅಣೆಕಟ್ಟೆ ನಿರ್ಮಿಸಲಾಗಿತ್ತು. 1958–64ರ ಅವಧಿಯಲ್ಲಿ ಲಿಂಗನಮಕ್ಕಿ ನಿರ್ಮಾಣವಾದ ನಂತರ ಮುಳುಗಡೆ ಸಂತ್ರಸ್ತರ ಒಂದಷ್ಟು ಕುಟುಂಬಗಳು ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ ಕಾನನದಲ್ಲಿ ನೆಲೆ ನಿಂತಿದ್ದವು. ಪ್ರಸ್ತುತ ಈ ಗ್ರಾಮಗಳಲ್ಲಿ 103 ಕುಟುಂಬಗಳು ವಾಸವಾಗಿವೆ. 480 ಜನಸಂಖ್ಯೆ ಇದೆ.

ಸ್ವಾತಂತ್ರ್ಯಪೂರ್ವದಲ್ಲಿ ಗೌಳೇರು, ಮರಾಠಿಗರ ಐದಾರು ಕುಟುಂಬಗಳಿಗೆಂದು ಆಗ ಬ್ರಿಟಿಷರು ನಿರ್ಮಿಸಿಕೊಟ್ಟಿದ್ದ ಕಾಲು ದಾರಿಯೇ ಇಂದಿಗೂ ಶಿವಮೊಗ್ಗ ತಲುಪಲು ಇರುವ ಸಂಪರ್ಕ ರಸ್ತೆ. ನಿತ್ಯವೂ 20 ಕಿ.ಮೀ. ಹಾದಿಯಲ್ಲಿ ಶಾಲಾ ಮಕ್ಕಳು, ಗರ್ಭಿಣಿಯರು, ವೃದ್ಧರು ಓಡಾಡುತ್ತಿದ್ದಾರೆ. ಕಾಡುಪ್ರಾಣಿಗಳ ಹಾವಳಿ ಎದುರಿಸಿಯೇ ಬದುಕು ಕಟ್ಟಿಕೊಂಡಿದ್ದಾರೆ. ಜಲಾಶಯಕ್ಕೆ ನೆಲೆ ಬಿಟ್ಟುಕೊಟ್ಟು, ನಾಡಿಗೆ ಬೆಳಕು ನೀಡಲು ಕಾರಣರಾದ ಅವರ ಊರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ. ಸಣ್ಣಪುಟ್ಟ ಮೂಲ ಸೌಕರ್ಯಗಳಿಗೂ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಾ ಬಂದಿದೆ. ಗ್ರಾಮದ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. 

‘ನಾವು ಮುಳುಗಡೆ ಪ್ರದೇಶ ತೊರೆದಾಗ ಭೂ ಮಾಲೀಕರ ಬಳಿ ಗೇಣಿ ಮಾಡುತ್ತಿದ್ದೆವು. ಹಾಗಾಗಿ, ಪರಿಹಾರ ಸಿಗಲಿಲ್ಲ. ದಾಖಲೆ ಇದ್ದವರಿಗೆ ನೆರವು ಸಿಕ್ಕಿತು. ಓದು, ಬರಹ ಬಲ್ಲವರು ಶಾನುಭೋಗರ ಬಳಿ ಪಹಣಿ ಪಡೆದು ಪರಿಹಾರಕ್ಕೆ ಅರ್ಹತೆ ಪಡೆದುಕೊಂಡಿದ್ದರು. ನಮಗೆ ಅದ್ಯಾವುದೂ ಅರ್ಥವಾಗಲಿಲ್ಲ. ಸರ್ಕಾರ ಬಿಟ್ಟುಹೋದ ಜಾಗದಲ್ಲೇ ನೆಲೆ ಕಂಡುಕೊಂಡಿದ್ದೇವೆ. ಹಲವು ತಲೆಮಾರುಗಳು ನಶಿಸಿಹೋಗಿವೆ. ಇಂದಿಗೂ ವಿದ್ಯುತ್, ರಸ್ತೆ ಮತ್ತಿತರ ಮೂಲ ಸೌಕರ್ಯಗಳಿಲ್ಲದೇ ಬದುಕು ನಡೆಸುವ ದುಃಸ್ಥಿತಿ ನಮ್ಮದು’ ಎನ್ನುತ್ತಾರೆ ರಾಜಪ್ಪ.

ಉರುಳಾದ ಭೂ ಕಬಳಿಕೆ ಪ್ರಕರಣಗಳು: 

ಶೆಟ್ಟಿಹಳ್ಳಿ ಜನರಿಗೆ ಅರಣ್ಯ ನಿಯಮಗಳೇ ಉರುಳಾಗಿವೆ. ಅರಣ್ಯಾಧಿಕಾರಿಗಳೇ ಶತ್ರುಗಳಾಗಿದ್ದಾರೆ. ಶೆಟ್ಟಿಹಳ್ಳಿಯನ್ನು ಒಳಗೊಂಡ ಪಶ್ಚಿಮಘಟ್ಟದ ಈ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದು ಘೋಷಿಸಿತ್ತು. ಅಂದಿನಿಂದಲೂ ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ, ಅರಣ್ಯ ಇಲಾಖೆ ಯತ್ನಿಸಿದ್ದವಾದರೂ ಅಲ್ಲಿನ ಜನರು ಮಣಿದಿರಲಿಲ್ಲ. ಈಚೆಗೆ ಅವರ ಮೇಲೆ ಭೂಕಬಳಿಕೆ ಪ್ರಕರಣಗಳನ್ನು ದಾಖಲಿಸಿದ್ದಾರೆ.

‘ಭಾರಿ ಮಳೆಯಿಂದ ಹೆಂಚಿನ ಮನೆಗಳಿಗೆ ಧಕ್ಕೆಯಾಗಿತ್ತು. ಆರ್‌ಸಿಸಿ ಹಾಕಿದ ಮೂರು ಕುಟುಂಬಗಳ ವಿರುದ್ಧ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ಸಾಗುವಳಿ ಭೂಮಿಗೆ ಕಂದಾಯ ಇಲಾಖೆ ಮಂಜೂರಾತಿ ನೀಡಿದೆ. ಹಕ್ಕುಪತ್ರ, ಪಹಣಿ ದೊರೆತಿದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಭೂ ಕಬಳಿಕೆ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿರುವ ಭೂ ಕಬಳಿಕೆ ವಿಚಾರಣಾ ನ್ಯಾಯಾಲಯಕ್ಕೆ ಅಲೆದಾಡುವಂತಾಗಿದೆ’ ಎನ್ನುತ್ತಾರೆ ಹೆಬ್ಬೂರು ಕುಮಾರ್.

ಶಿಕ್ಷಣಕ್ಕೆ ವಸತಿ ಶಾಲೆಗಳೇ ಆಸರೆ: ಶೆಟ್ಟಿಹಳ್ಳಿ ಗ್ರಾಮದ ಮಕ್ಕಳು ಪ್ರಾಥಮಿಕ ಶಿಕ್ಷಣಕ್ಕೂ ಅವಕಾಶ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಈಚೆಗೆ 5ನೇ ತರಗತಿವರೆಗೆ ಶಾಲೆ ತೆರೆಯಲಾಗಿದೆ. ನಂತರ ಓದಲು ವಸತಿಶಾಲೆಗಳನ್ನು ಆಶ್ರಯಿಸಿದ್ದಾರೆ. ಇಲ್ಲವೇ ನೆಂಟರಿಷ್ಟರ ಮನೆಗಳು, ಹಾಸ್ಟೆಲ್‌ಗಳಲ್ಲಿ ಇದ್ದುಕೊಂಡು ಓದು ಮುಂದುವರಿಸಬೇಕಾದ ಅನಿವಾರ್ಯ ಇದೆ. ಇಲ್ಲವೇ ಶಾಲೆ ತೊರೆಯಬೇಕಿದೆ.

‘ಊರಲ್ಲಿ 5ನೇ ತರಗತಿವರೆಗೆ ಶಾಲೆ ಇದ್ದರೂ, ವಿದ್ಯುತ್‌ ಸೌಕರ್ಯ ಇಲ್ಲದ ಕಾರಣ ಓದಲು ಸಾಧ್ಯವಾಗುತ್ತಿರಲಿಲ್ಲ. ಈಗ ಮೊರಾರ್ಜಿ ವಸತಿ ಶಾಲೆಗೆ ಸೇರಿಸಿದ್ದಾರೆ. ಕೋವಿಡ್‌ ಸಮಯದಲ್ಲಿ ಓದಲು ವಿದ್ಯುತ್ ಇಲ್ಲದೇ ಸಮಸ್ಯೆಯಾಗಿತ್ತು. ಆನ್‌ಲೈನ್‌ ತರಗತಿಗೆ ನೆಟ್‌ವರ್ಕ್‌ ಇಲ್ಲದೇ ಕಲಿಯಲು ಸಾಧ್ಯವಾಗಲಿಲ್ಲ. ಬೇಸರವಾಗಿತ್ತು’ ಎನ್ನುತ್ತಾರೆ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಾ.

ಗ್ರಾಮ ತೊರೆಯಲು ಶೆಟ್ಟಿಹಳ್ಳಿ ಜನರ ನಿರ್ಧಾರ

ಜಲಾಶಯಕ್ಕೆ ನೆಲೆ ಬಿಟ್ಟುಕೊಟ್ಟು, ನಾಡಿಗೆ ಬೆಳಕು ನೀಡಲು ಕಾರಣರಾದ ಅವರ ಊರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಇಲ್ಲ. ಸಣ್ಣಪುಟ್ಟ ಮೂಲ ಸೌಕರ್ಯಗಳಿಗೂ ಅರಣ್ಯ ಇಲಾಖೆ ಅಡ್ಡಿ ಪಡಿಸುತ್ತಾ ಬಂದಿದೆ. ಗ್ರಾಮದ ಹಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಎಲ್ಲ ಕಾರಣಗಳಿಂದ ಗ್ರಾಮ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಮುಳುಗಡೆ ಸಂತ್ರಸ್ತರಿಗಾಗಿ ಮೀಸಲಿರುವ ಹಾಯ್‌ಹೊಳೆ ಸಮೀಪದ ಜಾಗವನ್ನು ನೀಡುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ. ಅದಕ್ಕೂ ಜನಪ್ರತಿನಿಧಿಗಳು, ಅಧಿಕಾರಿಗಳ ಸ್ಪಂದನ ದೊರೆತಿಲ್ಲ.

ಸರ್ಕಾರ ಅನುಮತಿ ಕೊಟ್ಟರೂ ಇಲ್ಲ ವಿದ್ಯುತ್‌

ನಾಡಿಗೆ ಬೆಳಕು ನೀಡಿದ ಮುಳುಗಡೆ ಸಂತ್ರಸ್ತರು ವಾಸಿಸುತ್ತಿರುವ ಪುರದಾಳು ಪಂಚಾಯಿತಿ ವ್ಯಾಪ್ತಿಯ ಈ ಗ್ರಾಮಗಳಲ್ಲಿ 6 ದಶಕಗಳಿಂದ ಚಿಮಣಿ ಬುಡ್ಡಿಗಳೇ ಆಧಾರ. ಈಚೆಗೆ ಒಂದೆರಡು ಮನೆಗಳು ಸೋಲಾರ್ ವಿದ್ಯುತ್ ಕಂಡಿವೆ. ಸರ್ಕಾರ ವಿದ್ಯುತ್ ಸಂಪರ್ಕ ಕಲ್ಪಿಸಲು ವರ್ಷದ ಹಿಂದೆ ಅನುಮತಿ ನೀಡಿದೆ. ಆದರೂ, ಮೆಸ್ಕಾಂ ಇದುವರೆಗೂ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ. ಕಂಬ ಹಾಕಲು ಗುರುತು ಮಾಡಿದ್ದರೂ, ಕಾರ್ಯ ಸಾಧುವಾಗಿಲ್ಲ. ಅರಣ್ಯ ಇಲಾಖೆ ಸಹಕಾರ ನೀಡುತ್ತಿಲ್ಲ ಎನ್ನುವುದು ಗ್ರಾಮಸ್ಥರ ಅಳಲು.

ಕಾಡಾನೆಗಳ ಹಾವಳಿಗೆ ಬೆಸ್ತು ಬಿದ್ದ ಜನರು

ಶೆಟ್ಟಿಹಳ್ಳಿ ವ್ಯಾಪ್ತಿಯಲ್ಲಿ ಈಚೆಗೆ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ದಿಢೀರನೆ ದಾಳಿ ನಡೆಸುವ ಆನೆಗಳು ಅಡಿಕೆ, ಬಾಳೆ, ಭತ್ತ, ಕಬ್ಬು ಬೆಳೆಗಳನ್ನು ನಾಶ ಮಾಡುತ್ತಿವೆ. ಇಂತಹ ಅವಘಡಗಳು ನಡೆದಾಗ ಬರುವ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹೋಗುತ್ತಾರೆ. ಆನೆ ಹಿಡಿಯುವ, ಬೆಳೆಗೆ ಪರಿಹಾರ ನೀಡುವ ಯಾವ ಕಾರ್ಯವನ್ನೂ ಮಾಡುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕರೆ ಮಾಡಿದರೆ ಆಂಬುಲೆನ್ಸ್‌ ಬರುವುದಿಲ್ಲ

‘ಶೆಟ್ಟಿಹಳ್ಳಿಗೆ ಹೋಗುವ ರಸ್ತೆ ಕಲ್ಲು ಮಣ್ಣಿನ ದಾರಿ. ಸಾಕಷ್ಟು ಗುಂಡಿ ಬಿದ್ದು ಹಾಳಾಗಿವೆ. ಹಳ್ಳಕೊಳ್ಳಗಳಿಗೆ ಒಳ್ಳೆಯ ಸೇತುವೆಗಳೂ ಇಲ್ಲ. ಹಾಗಾಗಿ, ಹೆರಿಗೆ ನೋವು, ಕಾಡು ಪ್ರಾಣಿಗಳ ಹಾವಳಿ, ವಿಷ ಜಂತು ಕಚ್ಚುವುದು ಮತ್ತಿತರ ತುರ್ತು ಸಮಯದಲ್ಲಿ ಕರೆ ಮಾಡಿದರೆ ಆಂಬುಲೆನ್ಸ್‌ಗಳೂ ಬರುವುದಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಸಮಯಕ್ಕೆ ಆಂಬುಲೆನ್ಸ್‌ ಸಿಗದೇ ಬೈಕ್‌ನಲ್ಲೇ ಸಾಗಿಸುತ್ತಾರೆ. ಇದರಿಂದ ಎರಡು ವರ್ಷಗಳಲ್ಲಿ ಎಂಟು ಜನರನ್ನು ಕಳೆದುಕೊಂಡಿದ್ದೇವೆ’ ಎಂದು ಧರ್ಮಪ್ಪ ಅಳಲು ತೋಡಿಕೊಂಡರು.

ಸಾಗುವಳಿ ಭೂಮಿಗೆ ಕಂದಾಯ ಇಲಾಖೆ ಮಂಜೂರಾತಿ ನೀಡಿದೆ. ಹಕ್ಕುಪತ್ರ, ಪಹಣಿ ದೊರೆತಿದೆ. ಆದರೂ, ಅರಣ್ಯ ಇಲಾಖೆ ಅಧಿಕಾರಿಗಳು ಭೂ ಕಬಳಿಕೆ ಪ್ರಕರಣ ದಾಖಲಿಸಿದ್ದಾರೆ. ಬೆಂಗಳೂರಿಗೆ ಅಲೆದಾಡುವಂತಾಗಿದೆ.
- ಹೆಬ್ಬೂರು ಕುಮಾರ್, ಶೆಟ್ಟಿಹಳ್ಳಿ ಗ್ರಾಮಸ್ಥ.

ಯಾರೇ ಅಧಿಕಾರಕ್ಕೆ ಬಂದರೂ ಪರಿಹಾರ ಸಿಕ್ಕಿಲ್ಲ. ಎಲ್ಲರೂ ನಮ್ಮನ್ನು ಮತಬ್ಯಾಂಕ್‌ ಎನ್ನುವಂತೆ ನೋಡುತ್ತಾರೆ. ಎಷ್ಟೋ ಬಾರಿ ಬದುಕೇ ಬೇಡವೆನಿಸಿದೆ. ಪರಿಹಾರ ಕೊಟ್ಟರೆ ಊರು ತೊರೆಯಲು ಸಿದ್ಧರಿದ್ದೇವೆ.
- ಎಂ.ಜೆ.ರಾಜಪ್ಪ, ಗ್ರಾಮದ ಮುಖಂಡ.

ಕೋವಿಡ್‌ ಸಮಯದಲ್ಲಿ ಓದಲು ವಿದ್ಯುತ್ ಇಲ್ಲದೇ ಸಮಸ್ಯೆಯಾಗಿತ್ತು. ಆನ್‌ಲೈನ್‌ ತರಗತಿಗೆ ನೆಟ್‌ವರ್ಕ್‌ ಇಲ್ಲದೇ ಕಲಿಯಲು ಸಾಧ್ಯವಾಗಲಿಲ್ಲ.
- ದೀಕ್ಷಾ, 9ನೇ ತರಗತಿ ವಿದ್ಯಾರ್ಥಿನಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು