ಶಿವಮೊಗ್ಗ: ‘ನಮ್ಮ ಋಣದಿಂದ ನೀನು ಗೆದ್ದಿರುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬಿ.ವೈ. ವಿಜಯೇಂದ್ರ ಅವರನ್ನು ಉದ್ದೇಶಿಸಿ ಹೇಳಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಿಕಾರಿಪುರ ಕ್ಷೇತ್ರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ಒಳಒಪ್ಪಂದ ಆಗಿತ್ತು ಎಂಬ ನನ್ನ ಆರೋಪಕ್ಕೆ ಇದರಿಂದ ಪುರಾವೆ ಸಿಕ್ಕಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನೈತಿಕ ರಾಜಕಾರಣ ಮಾಡುವ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು. ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಅಧಿಕಾರ ಹಿಡಿಯುವ ಇವರ ಕೃತ್ರಿಮತೆ ರಾಜ್ಯಕ್ಕೆ ಗೊತ್ತಾಗಿದೆ’ ಎಂದರು.
‘ಡಿ.ಕೆ.ಶಿವಕುಮಾರ್ ಅವರು ಹೇಳಿದ ಮಾತು ಸುಳ್ಳಾಗಿದ್ದರೆ, ವಿಜಯೇಂದ್ರ ಅವರು ಸ್ಪಷ್ಟನೆ ಕೊಡಬೇಕಿತ್ತು. ನಾನು ಸ್ವಂತ ಶಕ್ತಿಯ ಮೇಲೆ ಗೆದ್ದಿದ್ದೇನೆ. ಯಾರ ಋಣದಿಂದ ಗೆದ್ದಿಲ್ಲ ಎಂದು ಹೇಳಿಯೇ ಇಲ್ಲ. ಈ ಕಾರಣದಿಂದ ನಾನು ಮಾಡಿದ್ದ ಆರೋಪ ನಿಜವಾಗಿದೆ’ ಎಂದು ಹೇಳಿದರು.
ಸಿಬಿಐಗೆ ಒಪ್ಪಿಸಲಿ: ಮುಡಾ ಹಗರಣದ ಹೆಸರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿಕೂಟ ನಡೆಸುತ್ತಿರುವ ಮೈಸೂರು ಚಲೊ ಒಂದು ಮೂಢರ ಹೋರಾಟ. ಪಕ್ಷದ ರಾಜ್ಯ ನಾಯಕರು, ಕೇಂದ್ರ ಮಂತ್ರಿಗಳು ಪರಸ್ಪರ ಏಕವಚನದಲ್ಲಿ ನಿಂದಿಸಿಕೊಳ್ಳುತ್ತಿದ್ದಾರೆ. ಇವರ ವರ್ತನೆಯಿಂದ ರಾಜಕಾರಣಿಗಳು ಜನರ ಮುಂದೆ ನಗ್ನವಾಗುತ್ತಿದ್ದಾರೆ. ಪರಸ್ಪರ ಕೆಸರೆರೆಚಾಟ ನಿಲ್ಲಿಸಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
‘ಆಶ್ರಯ ಮನೆ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ತೋರುತ್ತಿದೆ. ಕಳೆದ ವಾರ ಸ್ಥಳ
ಪರಿಶೀಲನೆ ಮಾಡಿರುವ ವಸತಿ ಇಲಾಖೆ ಅಧಿಕಾರಿಗಳು, ಯಾವುದೇ ಮೂಲಸೌಕರ್ಯ ಇಲ್ಲದೆ ಮನೆ ಹಸ್ತಾಂತರ ಮಾಡುವುದಾಗಿ ಹೇಳಿದ್ದರು. ಅದನ್ನು ಕಟುಮಾತುಗಳಿಂದ ವಿರೋಧಿಸಿದ್ದೇನೆ. ಆಗಸ್ಟ್ ಕೊನೆಯೊಳಗೆ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ಮೂಲ ಸೌಲಭ್ಯ ನೀಡಿ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ. ಎಲ್ಲಾ 3 ಸಾವಿರ ಮನೆಗಳನ್ನೂ ಜನರಿಗೆ ವಿತರಿಸದಿದ್ದಲ್ಲಿ ಮತ್ತೆ ಹೋರಾಟ ಮಾಡುತ್ತೇವೆ’ ಎಂದರು.
ಅರಾಜಕತೆ ಸೃಷ್ಟಿಯಾಗಿರುವ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ಶೋಷಣೆಯನ್ನು ರಾಷ್ಟ್ರಭಕ್ತ ಬಳಗ ಖಂಡಿಸುತ್ತದೆ. ಅಲ್ಲಿನ ಹಿಂದೂ ದೇಗುಲಗಳು ಮನೆಗಳನ್ನು ಧ್ವಂಸ ಮಾಡಲಾಗುತ್ತಿದೆ. ವಿಶ್ವಸಂಸ್ಥೆ ಕೂಡಲೇ ಮಧ್ಯ ಪ್ರವೇಶ ಮಾಡಬೇಕಿದೆ.–ಕೆ.ಎಸ್.ಈಶ್ವರಪ್ಪ, ಮಾಜಿ ಡಿಸಿಎಂ
ಆ.13 ರಂದು ಹೋರಾಟ
ಶಿವಮೊಗ್ಗ ಮಹಾನಗರ ಪಾಲಿಕೆಯ ಸುಗಮ ಆಡಳಿತಕ್ಕೆ ಆಗ್ರಹಿಸಿ ಆ.13ರಂದು ನಗರದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಪ್ರತಿಭಟನೆ ನಡೆಸಲಾಗುವುದು. ನಗರದಲ್ಲಿ ಮೂಲಸೌಕರ್ಯಗಳ ಕೊರತೆಯಾಗಿದೆ. ನದಿ ತುಂಬಿಹರಿಯುತ್ತಿದ್ದರೂ ಶುದ್ಧ ಮತ್ತು ಸಮರ್ಪಕ ಕುಡಿಯುವ ನೀರು ನಗರದ ಜನರಿಗೆ ಸಿಗುತ್ತಿಲ್ಲ. ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕಿದೆ.
ಅಧಿಕಾರಿಗಳ ಜನರಿಗೆ ಸ್ಪಂದಿಸುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲಾಗುವುದು. ಅಂದು ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕೆಂದು ನ್ಯಾಯಾಲಯವೇ ಸೂಚಿಸಿದೆ. ಆಯೋಗದ ಆಯುಕ್ತರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರಕೂಡಲೇ ಚುನಾವಣೆ ನಡೆಸಬೇಕು. ಅಧಿಕಾರಿಗಳಿಂದ ಪಾಲಿಕೆ ಆಡಳಿತವನ್ನು ಜನಪ್ರತಿನಿಧಿಗಳಿಗೆ ಕೊಡುವಂತೆ ನೋಡಿಕೊಳ್ಳಬೇಕು.ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿಗಳಿಗೂ ತಕ್ಷಣ ಚುನಾವಣೆ ನಡೆಯಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.