ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ಬೆಳೆ ಕುಸಿತ: ಗ್ರಾಮಗಳಲ್ಲಿ ಮರೆಯಾಗುತ್ತಿರುವ ಆಲೆಮನೆ

ಕೂಲಿಕಾರರ ಕೊರತೆ, ಖರ್ಚು ಹೆಚ್ಚಳದಿಂದಾಗಿ ಕಬ್ಬು ಬೆಳೆ ಕುಸಿತ
Last Updated 17 ಫೆಬ್ರುವರಿ 2021, 1:32 IST
ಅಕ್ಷರ ಗಾತ್ರ

ತ್ಯಾಗರ್ತಿ: ಮಲೆನಾಡಿನಲ್ಲಿ ಆಲೆಮನೆ ಎಂದರೆ ರೈತರಿಗೆ ಹಿಂದೊಂದು ದಿನ ಸಂಭ್ರಮದ ದಿನವಾಗಿತ್ತು. ಆದರೆ ಇಂದು ಕಬ್ಬು ಬೆಳೆದು ಆಲೆಮನೆ ನಡೆಸುವುದೆಂದರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚಾಗಿದೆ.

ಕಬ್ಬಿನ ಬೆಳೆಯಿಂದ ಬರುವ ಆದಾಯಕ್ಕಿಂತ ನಷ್ಟವೇ ಹೆಚ್ಚಾಗುತ್ತಿದ್ದು, ಕೂಲಿಕಾರರ ಅಭಾವವೂ ಉಂಟಾಗಿದೆ. ಹೀಗಾಗಿ ಕಬ್ಬು ಬೆಳೆಯುವುದು ಕಷ್ಟವಾಗಿದೆ. ಕಬ್ಬು ಬೆಳೆಯಲು 12 ತಿಂಗಳು ಪೋಷಣೆ ಮಾಡಬೇಕಾಗುತ್ತದೆ. ಅಲ್ಲದೇ ಮಂಗ, ಹಂದಿ, ನರಿ ಇನ್ನೂ ಹಲವು ಪ್ರಾಣಿಗಳ ಉಪಟಳದಿಂದ ರಕ್ಷಿಸಬೇಕಾಗುತ್ತದೆ. ಇವೆಲ್ಲದರ ಸಾಧಕ–ಬಾಧಕ ಅರಿತ ಇಂದಿನ ಯುವಕರು ಈ ಬೆಳೆಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ಪೀಳಿಗೆಗೆ ಆಲೆಮನೆ ಎಂದರೆ ರಾಮಾಯಣ ಮಹಾಭಾರತದ ಕಥೆಯಂತೆ ಚಿತ್ರಪಟದಲ್ಲಿ ತೋರಿಸುವ ಸ್ಥಿತಿ ಉಂಟಾಗಬಹುದು.

ಮುಂಚೆ ಗಾಣಕ್ಕೆ ಕೋಣವನ್ನು ಕಟ್ಟಿ ತಿರುಗಿಸಿ ಕಬ್ಬನ್ನು ಕೊಟ್ಟು ದಿನಕ್ಕೆ 16 ಸಾವಿರ ಲೀಟರ್‌ಗಳಷ್ಟು ಕಬ್ಬಿನ ಹಾಲನ್ನು ತೆಗೆಯುತ್ತಿದ್ದರು. ದಿನಕ್ಕೆ 4 ಕೊಪ್ಪರಿಗೆಯಂತೆ 400 ಲೀಟರ್‌ಗಳಷ್ಟು ಕಬ್ಬಿನ ಹಾಲನ್ನು ಒಂದು ಕೊಪ್ಪರಿಗೆಗೆ ಹಾಕಿ ಸರಿಯಾಗಿ ಕುದಿಸಿ ಗುಣಮಟ್ಟದ ಬೆಲ್ಲ ತಯಾರಿಸುತ್ತಿದ್ದರು. ಆದರೆ ಇಂದು ಯಾಂತ್ರೀಕೃತವಾಗಿರುವುದರಿಂದ ದಿನಕ್ಕೆ 40 ಸಾವಿರ ಲೀಟರ್‌ಗಳಿಗೂ ಹೆಚ್ಚು ಹಾಲನ್ನು ಕಬ್ಬಿನಿಂದ ತೆಗೆಯಬಹುದು. ತಿಂಗಳುಗಳು ನಡೆಯುತ್ತಿದ್ದ ಆಲೆಮನೆಗಳು ಒಂದೇ ವಾರದಲ್ಲಿ ಮುಕ್ತಾಯವಾಗುತ್ತಿವೆ. ಆದರೆ ಖರ್ಚು ಮಾತ್ರ ಹೆಚ್ಚುತ್ತಿದೆ.

ಕಬ್ಬನ್ನು ಬೆಳೆದ ರೈತರು ಕೂಲಿಕಾರರ ಸಮಸ್ಯೆ, ಅತಿಯಾದ ಖರ್ಚಿನಿಂದಾಗಿ ಇಂದು ಕಬ್ಬನ್ನೇ ಮಾರುತ್ತಿದ್ದಾರೆ. ಕೆಲವು ರೈತರು ಕಬ್ಬನ್ನು ಕಟಾವು ಮಾಡಿ ಬೇರೆ ಬೇರೆ ದೂರದ ಊರುಗಳಿಗೆ ತೆರಳಿ ಕ್ರಷರ್‌ ಮುಖಾಂತರ ಹಾಲನ್ನು ತೆಗೆದು ಬೆಲ್ಲ ತಯಾರಿಸಿಕೊಂಡು ಬರುತ್ತಿದ್ದಾರೆ.

ಸಾಗರ ತಾಲ್ಲೂಕಿನ ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ಯಾದಿಕೊಪ್ಪ ಗ್ರಾಮಸ್ಥರು ಹಲವು ವರ್ಷಗಳಿಂದ ಕಬ್ಬನ್ನು ಬೆಳೆದು ತಮ್ಮ ಹೊಲದಲ್ಲಿಯೇ ಬೆಲ್ಲ ತಯಾರಿಸುತ್ತಿದ್ದು ಇಂದಿನ ಯುವಕರಿಗೆ ಮಾದರಿಯಾಗಿದ್ದಾರೆ.

‘ಕಬ್ಬು ಲಾಭದಾಯಕ ಬೆಳೆಯಲ್ಲದಿದ್ದರೂ ಆರೋಗ್ಯದ ದೃಷ್ಟಿಯಿಂದ ಮನೆ ಬಳಕೆಗೆ ಗುಣಮಟ್ಟದ ಬೆಲ್ಲವನ್ನು ನಾವೇ ತಯಾರಿಸಿಕೊಳ್ಳಬಹುದು ಎಂಬ ಉದ್ದೇಶದಿಂದ ಕಬ್ಬು ಬೆಳೆಯುತ್ತಿದ್ದೇವೆ’ ಎಂದು ಕ್ಯಾದಿಕೊಪ್ಪದ ಕೆ.ಬಿ. ಮಂಜುನಾಥ್ ಹೇಳಿದರು.

‘ಕಬ್ಬು ಬೆಳೆದ ರೈತ ಆಲೆಮನೆ ನಡೆಸುವುದರಿಂದ ಕಣೆ ಬಾಡಿಗೆ, ಕಬ್ಬು ಕಡಿಯುವ ಕೂಲಿ, ಹೊಲದಿಂದ ತರುವ ಬಾಡಿಗೆಯನ್ನು ಲೆಕ್ಕ
ಹಾಕಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಆದ್ದರಿಂದ ಹಲವರು ಕಬ್ಬು ಬೆಳೆಯುವುದನ್ನೇ ನಿಲ್ಲಿಸುತ್ತಿದ್ದಾರೆ’ ಎಂದು ತ್ಯಾಗರ್ತಿಯ ರೈತ ಗಿರೀಶ್ ಎಚ್. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT