ಭಾನುವಾರ, ಡಿಸೆಂಬರ್ 4, 2022
19 °C
ಕರೂರು ಹೋಬಳಿ ರೈತರ ಪ್ರತಿಭಟನೆ; ಜಿಲ್ಲಾಡಳಿತಕ್ಕೆ ಮನವಿ

ಎಲೆಚುಕ್ಕಿ ರೋಗ; ಪರಿಹಾರಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಗರ ತಾಲ್ಲೂಕಿನ ಕರೂರು ಹೋಬಳಿಯ ಬಹುತೇಕ ಕಡೆ ಅಡಿಕೆ ತೋಟಕ್ಕೆ ಎಲೆ ಚುಕ್ಕೆ ರೋಗ ಬಂದಿದೆ. ಬೆಳೆ ನಷ್ಟವಾದ ಕಾರಣ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸ್ಥಳೀಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಾಗರ ತಾಲ್ಲೂಕು ಕರೂರು ಹೋಬಳಿ ಮರಾಠಿ ಕ್ಯಾಂಪ್, ಇಕ್ಕಿಬೀಳು, ಕಸಗೋಡು, ಬ್ಯಾಡಗೋಡು ಗ್ರಾಮದ 100 ಕುಟುಂಬಗಳ 250 ಎಕರೆ ಹಾಗೂ ಹೊಸನಗರ ತಾಲ್ಲೂಕಿನ ನಾಗೋಡಿ ಗ್ರಾಮದ ಸುಮಾರು 30 ಎಕರೆ
ಅಡಿಕೆ ತೋಟಕ್ಕೆ ಎಲೆಚುಕ್ಕಿ ರೋಗ ತೀವ್ರವಾಗಿ ಹರಡಿದೆ. ಅಡಿಕೆ ಉದುರುತ್ತದೆ. ಹ್ಯಾಡಗಳು ಕೂಡ ಉದುರುತ್ತಿವೆ. ಅಡಿಕೆ ಮರಗಳು ಸಾಯುತ್ತಿದ್ದು, ಜಿಲ್ಲಾಡಳಿತ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ಎಲೆ ಚುಕ್ಕಿ ರೋಗಕ್ಕೆ ಕಾರಣವಾಗಿರುವ ಬಗ್ಗೆ ಕೃಷಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕಳುಹಿಸಿ ರೋಗ ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ವಿನಂತಿಸಿದ್ದಾರೆ. ಅಡಿಕೆ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳು ಬೀದಿಗೆ ಬಂದಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಕುಟುಂಬಗಳು ರಾಷ್ಟ್ರೀಕೃತ ಬ್ಯಾಂಕ್, ಸೊಸೈಟಿ, ಸಂಘಗಳಲ್ಲಿ ಸಾಲ ಮಾಡಿ ದಿಕ್ಕು ತೋಚದಂತಾಗಿದ್ದಾರೆ ಎಂದರು.

ಆದ್ದರಿಂದ ಕೂಡಲೇ ತೋಟಗಾರಿಕೆ ಇಲಾಖೆಯ ತಜ್ಞರಿಂದ ಬೆಳೆ ನಷ್ಟ ಮತ್ತು ಹಾನಿಯ ಬಗ್ಗೆ ವೈಜ್ಞಾನಿಕ ಲೆಕ್ಕ ಹಾಕಿಸುವುದು, ರೈತರಿಗೆ ತಕ್ಷಣದಲ್ಲಿ ಪರಿಹಾರ ಒದಗಿಸುವುದು, ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಬ್ಯಾಂಕ್ ಮತ್ತು ಸೊಸೈಟಿಗಳ ಸಾಲ ಮನ್ನಾ ಮಾಡುವುದು ಹಾಗೂ ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡಬೇಕೆಂದು ಸಂತ್ರಸ್ತರು ಆಗ್ರಹಿಸಿದರು.

ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ಶಿವಾನಂದ್, ರಾಜು, ಸತೀಶ್, ನಾಗರಾಜ್, ರಾಮು ಮೊದಲಾದವರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು