ಮಂಗಳವಾರ, ಸೆಪ್ಟೆಂಬರ್ 28, 2021
25 °C
ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿಗೆ ಖಂಡನೆ

ಅರಣ್ಯ ಇಲಾಖೆ ವಿರುದ್ಧ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಅರಣ್ಯಭೂಮಿಯಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಗೆಂಡ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿಡ್ಡಿಹಳ್ಳಿ ರೈತರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪಟ್ಟಣದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ. ಶ್ರೀನಿವಾಸ್, ‘ಕೇಂದ್ರ ಸರ್ಕಾರದ ಅರಣ್ಯಹಕ್ಕು ಕಾಯ್ದೆಯಂತೆ ರೈತರು ಅರ್ಜಿ ಸಲ್ಲಿಸಿದ್ದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ನೋಟಿಸ್ ಜಾರಿ ಮಾಡಿರುವುದು ಖಂಡನೀಯ. ಅರಣ್ಯಹಕ್ಕು ಕಾಯ್ದೆಯಡಿ ಅರಣ್ಯ ವಾಸಿಗಳು, ಬುಡಕಟ್ಟು ವ್ಯಕ್ತಿಯನ್ನು ಅಥವಾ ಪಾರಂಪರಿಕ ಅರಣ್ಯ ವಾಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಅವರ ಅಧಿ ಭೋಗದಲ್ಲಿರುವ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವಂತಿಲ್ಲ ಎಂದು ಕಾಯ್ದೆಯಲ್ಲಿದೆ’ ಎಂದರು.

ಆದರೂ ನೋಟಿಸ್ ನೀಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಮಳೆಹಾನಿ, ಕೊರೊನಾದಿಂದ ಬೆಳೆದ ಬೆಳೆಗಳಿಗೆ ಸಮರ್ಪಕ ಬೆಲೆಯೂ ಇಲ್ಲದೆ, ಮಾರುಕಟ್ಟೆಯ ವ್ಯವಸ್ಥೆಯೂ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನೋಟಿಸ್ ನೀಡಿರುವುದು ರೈತರನ್ನು ಭೀತಿಗೊಳಿಸಿದೆ. ‌ಕೂಡಲೇ ನೋಟಿಸ್ ಹಿಂಪಡೆದು ರೈತರು ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕಿನ 19,426 ರೈತರನ್ನೊಳಗೊಂಡಂತೆ ಜಿಲ್ಲೆಯಲ್ಲಿ ಒಟ್ಟು 77 ಸಾವಿರ ರೈತರು ಅರಣ್ಯಹಕ್ಕು ಕಾಯ್ದೆಯಡಿ ಭೂ ಮಂಜೂರಾತಿ ಹಕ್ಕಿಗೆ ಅರ್ಜಿ ಸಲ್ಲಿಸಿದ್ದಾರೆ. ಶಿಡ್ಡಿಹಳ್ಳಿಯ ಸರ್ವೆ ನಂ–11ರಲ್ಲಿನ 69 ರೈತರಿಗೆ ನೋಟಿಸ್ ನೀಡಲಾಗಿದೆ. ಈ ಹಿಂದೆ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಿರುವ ರೈತರ ಪರವಾಗಿ ಹೋರಾಟ ಮಾಡಿದ ಜಿಲ್ಲೆಯ ಸಂಸದರು, ಸಚಿವರು ಹಾಗೂ ಶಾಸಕರು ರೈತರ ಮೇಲೆ ದೌರ್ಜನ್ಯವಾಗುತ್ತಿರುವ ಸಂದರ್ಭದಲ್ಲಿ ಧ್ವನಿ ಎತ್ತದಿರುವುದು ಜನರಿಗೆ ಮಾಡಿದ ಅನ್ಯಾಯ ಎಂದು ಆರೋಪಿಸಿದರು.

ನಂತರ ಎಸಿಎಫ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿ ಸ್ವೀಕರಿಸಿದ ಎಸಿಎಫ್ ಪ್ರವೀಣ್‌ಕುಮಾರ್, ‘ಶಿಡ್ಡಿಹಳ್ಳಿಯ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಈಗಾಗಲೇ ಇಲಾಖೆಯಿಂದ ನೋಟಿಸ್ ನೀಡಿದ ಕೂಡಲೇ ಒಕ್ಕಲೆಬ್ಬಿಸುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ. ರೈತರು ಅಹವಾಲುಗಳಿದ್ದರೆ ರುಜುವಾತು ಪಡಿಸಲು ಅವಕಾಶ ನೀಡಲಾಗಿದೆ. ಅರಣ್ಯ ಇಲಾಖೆಯು ನಿಗದಿಪಡಿಸಿದ ದಿನದಂದು ಸೂಕ್ತ ದಾಖಲೆಗಳೊಂದಿಗೆ ರೈತರು ಹಾಜರಾಗುವಂತೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ, ಶಿಡ್ಡಿಹಳ್ಳಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಅಬ್ದುಲ್ ಅಜೀದ್, ಶಿಡ್ಡಿಹಳ್ಳಿ ಗ್ರಾಮದ ಪರುಶುರಾಮ, ನಾಗರಾಜ, ಪ್ರೇಮಾ, ವೀರಭದ್ರಪ್ಪ, ಚನ್ನವೀರಪ್ಪ, ಫಕೀರಮ್ಮ, ಅಕ್ಬರ್ ಸಾಬ್, ಮುನಾಫ್ ಸಾಬ್, ಗಂಗಾಧರ, ಕೃಷ್ಣಪ್ಪ, ನಿರ್ಮಲಾ, ಸಹದೇವಪ್ಪ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.