ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಕೊಯ್ಲಿಗೆ ಮಳೆ ಅಡ್ಡಿ; ಚೇಣಿ ಕೊಡಲು ಮುಂದಾದ ರೈತರು

Last Updated 8 ನವೆಂಬರ್ 2021, 5:14 IST
ಅಕ್ಷರ ಗಾತ್ರ

ಹೊಸನಗರ: ಮಲೆನಾಡ ನಡುಮನೆ ಎಂದೇ ಕರೆಯಲಾಗುವ ಹೊಸನಗರ ತಾಲ್ಲೂಕಿನಲ್ಲಿ ದಿನವೂ ಮಳೆ ಆಗುತ್ತಿದೆ. ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನದ ಸುಮಾರಿಗೆ ಗುಡುಗು ಆರಂಭವಾಗಿ ಸಂಜೆ ಮಳೆ ಸುರಿಯುತ್ತಿದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.

ಮಲೆನಾಡಿನ ಬಹುತೇಕ ತೋಟದಲ್ಲಿ ಅಡಿಕೆ ಬೆಳೆದು ನಿಂತು ಹಣ್ಣಾಗಿ ಉದುರುತ್ತಿದೆ. ಅಡಿಕೆ ಕೊಯ್ಲು ಆರಂಭಿಸಲು ಮಳೆ ಅಡ್ಡಿಯಾಗಿದೆ. ಅಡಿಕೆ ತೆಗೆಯಲು, ಬೇಯಿಸಿ ಒಣಗಿಸಲು ಸಾಧ್ಯವೇ ಇಲ್ಲದಾಗಿದೆ. ಅಡಿಕೆ ಕೊಯ್ಲಿಗೆ ಮಳೆ ತೀವ್ರ ತೊಂದರೆಯೊಡ್ಡಿದೆ. ಅನಿರೀಕ್ಷಿತ ಮಳೆಯಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ.

ಸಂಪ್ರಾದಾಯಿಕ ಬೆಳೆಗಾರರು ಹೆಚ್ಚಿರುವ ತಾಲ್ಲೂಕಿನಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಸಂಪ್ರದಾಯಿಕ ಪದ್ಧತಿಯಿಂದಲೇ ಅಡಿಕೆ ಸಂಸ್ಕರಣೆ ಮಾಡುವ ಪದ್ಧತಿ ಇಲ್ಲಿನ ರೈತರು ಅನುಸರಿಸುತ್ತಿದ್ದಾರೆ. ಬಲಿತ ಅಡಿಕೆಗೊನೆಗಳನ್ನು ಮರದಿಂದ ತೆಗೆದು ಪರಿಷ್ಕರಣೆ ಮಾಡಿ ಮಾರುಕಟ್ಟೆಗೆ ಹಾಕಿ ಸೂಕ್ತವಾದ ಬೆಲೆಗೆ ಮಾರಾಟ ಮಾಡುವ ರೈತರ ಕನಸು ಸಾಕಾರ ಆಗುತ್ತಿಲ್ಲ. ಇದರಿಂದ ರೈತರು ಸಹಜವಾಗಿಯೇ ಬೇಸತ್ತಿದ್ದಾರೆ.

ಚೇಣಿಯತ್ತ ಒಲವು: ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಚೇಣಿಯತ್ತ ಒಲವು ತೋರುತ್ತಿದ್ದಾರೆ. ಏನೇ ಸಂಕಷ್ಟ ಬಂದರೂ ಅಡಿಕೆ ಕೊಯ್ಲು ಮಾಡಲು ಆಸಕ್ತಿ ಕಳೆದುಕೊಳ್ಳದ ರೈತರು ಈ ಸಾರಿ ಮಳೆ ಅವಾಂತರದಿಂದ ಹೈರಾಣಾಗಿದ್ದು, ತಮ್ಮ ತೋಟದ ಅಡಿಕೆ ಫಸಲನ್ನು ಚೇಣಿ ಕೊಡಲು ಸಿದ್ಧರಾಗಿದ್ದಾರೆ.

ಬಯಲು ಸೀಮೆಯಲ್ಲಿ ಮಾತ್ರ ಕಂಡು ಬರುತ್ತಿದ್ದ ಅಡಿಕೆ ಚೇಣಿ ಇಂದು ಮಲೆನಾಡಿಗೂ ಕಾಲಿಟ್ಟಿದೆ. ಅಡಿಕೆ ಕೊಯ್ಲು ಮಾಡಲು ಅಶಕ್ತರು, ಪರಿಕರ ಇಲ್ಲದಿರುವವರು, ಉದ್ಯೋಗದಲ್ಲಿರುವವರು ಮಾತ್ರ ಚೇಣಿ ನೀಡುತ್ತಿದ್ದರು. ಇದೀಗ ಸಾಂಪ್ರದಾಯಿಕ ಬೆಳೆಗಾರರು ಕೂಡ ಚೇಣಿ ನೀಡುತ್ತಿದ್ದಾರೆ.
ಫಸಲು ಗುತ್ತಿಗೆ, ಹುಂಡಾಗುತ್ತಿಗೆ, ಹಸಿ ಅಡಿಕೆ ಇತ್ಯಾದಿ ರೂಪದಲ್ಲಿ ಚೇಣಿ ಪದ್ಧತಿ ಮಲೆನಾಡನ್ನು ವ್ಯಾಪಿಸುತ್ತಿದೆ. ಮೆಲ್ಲ ಮೆಲ್ಲನೆ ಚೇಣಿ ದಂಧೆ ಬೇರು ಬಿಡುತ್ತಿದ್ದು, ರೈತರೂ ಸಮೂಹ ಸನ್ನಿಯಂತೆ ಮಾರು ಹೋಗುತ್ತಿದ್ದಾರೆ.

‘ಅಡಕೆ ಕೊಯ್ಲು ಮಾಡುವುದು ಹುಡುಗಾಟವಲ್ಲ. ಅಡಿಕೆ ಒಣಗಲು ಸುಮಾರು 8 ತಾಸು ಬಿಸಿಲು ಬೇಕೇ ಬೇಕು. ಮಳೆ ಬಿಟ್ಟು, ಕಟು ಬಿಸಿಲು ಬಿದ್ದರಷ್ಟೇ ಅಡಿಕೆ ಒಣಗಿಸಲು ಸಾಧ್ಯ. ಅಡಕೆ ಒಣಗದೆ ಹೂವು ಬರುವುದು ಸಾಮಾನ್ಯ. ಒಮ್ಮೆ ಹೂವು ಬಂದರೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಡಕೆ ಕೊಳೆಯುವ ಅಪಾಯವಿದೆ. ಈ ರಗಳೆ ಬೇಡವೇ ಬೇಡ. ಇದಕ್ಕಿಂತ ಚೇಣಿ ಕೊಡುವುದೇ ಉತ್ತಮ. ಒಂದೇ ಸಲ ದುಡ್ಡು ಬಂದರೆ ಬ್ಯಾಂಕ್‌ನಲ್ಲಿ ಇಟ್ಟು ವ್ಯವಹರಿಸಬಹದು’ ಎನ್ನುತ್ತಾರೆ ನಿಟ್ಟೂರು ಸುಬ್ರಹ್ಮಣ್ಯ ಭಟ್ಟರು.

‘ಅಡಿಕೆಗೆ ಈಗ ಉತ್ತಮ ಬೆಲೆ ಇದೆ. ₹ 48 ಸಾವಿರದವರೆಗೂ ಧಾರಣೆ ಇದೆ. ಬೇಗ ಕೊಯ್ಲು ಮಾಡೋಣ ಎಂದರೆ ಮಳೆ ಬಿಡುವುದಿಲ್ಲ. ಮಳೆಯಲ್ಲಿ ಅಡಿಕೆ ತೆಗೆಸಿದರೆ ರಾಮಾಯಣ ಆಗುತ್ತೆ. ಎಷ್ಟದರೂ ಬೆಳೆಯಲಿ, ಗೂಟು ಆಗಲಿ, ಮಳೆ ನೋಡಿಯೇ ತೆಗೆಯಿಸುತ್ತೇವೆ. ಹಾಳಾದ ಮಳೆ ತಲೆಬಿಸಿ ತಂದಿದೆ’ ಎನ್ನುತ್ತಾರೆ ರೈತ ಬಸಪ್ಪಗೌಡ.

ಹೊಸನಗರ ತಾಲ್ಲೂಕಿನಲ್ಲಿ ಚೇಣಿ ಮಾಡಲು ಅಡಕೆ ಸಿಗುತ್ತಿರಲಿಲ್ಲ. ಕೆಲವರು ಮಾತ್ರ ಕೊಡುತ್ತಿದ್ದರು. ಆದರೆ, ಈ ಸಾರಿ ರೈತರು ಚೇಣಿ ಕೊಡಲು ಮನಸ್ಸು ಮಾಡಿದ್ದಾರೆ. ಹುಂಡಾಗುತ್ತಿಗೆ ಕೊಡಲು ರೈತರು ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಚೇಣಿದಾರ ಸುರೇಶ್.

‘ಚೇಣಿ ಪದ್ಧತಿ ಅಪಾಯಕಾರಿ’

‘ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಎಷ್ಟೇ ಕಷ್ಟ ಬಂದರೂ ತಮ್ಮ ಅಡಿಕೆಯನ್ನು ತಾವೇ ಸಿದ್ಧ ಮಾಡಬೇಕು. ಚೇಣಿ ಕೊಡುವುದು ರೈತರ ಲಕ್ಷಣವಲ್ಲ. ಇಲ್ಲಿ ಹಣಕಾಸಿನ ಭದ್ರತೆ ಇಲ್ಲವಾಗಿದೆ. ಅಲ್ಲದೇ ಒಮ್ಮೆ ಚೇಣಿ ಕೊಟ್ಟರೆ ಪ್ರತಿ ವರ್ಷವೂ ಈ ಕಾಯಿಲೆ ಮುಂದುವರಿಯುವ ಅಪಾಯ ಕಾಡುತ್ತದೆ’ ಎಂದು ಪ್ರಗತಿಪರ ರೈತ ಎನ್. ಸುಬ್ಬಾಭಟ್ಟ ತಿಳಿಸಿದ್ದಾರೆ.

‘ರೈತರು ಸ್ವಂತವಾಗಿ ಅಡಕೆ ಸಿದ್ಧಪಡಿಸಿದರೆ ಮಾತ್ರ ಗುಣಮಟ್ಟದ ಅಡಕೆ ತಯಾರಿಸಲು ಸಾಧ್ಯ. ಚೇಣಿ ಕೊಡುವುದರಿಂದ ಚೇಣಿಯವರು ಬೇಕಾಬಿಟ್ಟಿಯಾಗಿ ಅಡಕೆ ಸಿದ್ಧಪಡಿಸಿ ಕಳಪೆ ಗುಣಮಟ್ಟದ ಅಡಕೆ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆ ಕಳೆದುಕೊಳ್ಳುತ್ತಿದೆ. ಚೇಣಿದಾರರು ಕಳಪೆ ಅಡಕೆ ತಯಾರಿಸಿ ಮಾರುಕಟ್ಟೆ ಅವನತಿಗೆ ಕಾರಣರಾಗುತ್ತಾರೆ. ಇದು ರೈತರ ಉನ್ನತಿಗೆ ಸಂಚಕಾರವಾಗಿದೆ’
ಎನ್ನುತ್ತಾರೆ ಅವರು.

‘ಚೇಣಿ ಪದ್ಧತಿ ಸೋಮಾರಿತನಕ್ಕೆ ದಾರಿ ಮಾಡಿಕೊಡುತ್ತದೆ. ವರ್ಷ ಕಾಲ ಕಾಪಾಡಿಕೊಂಡ ಫಸಲನ್ನು ನೀಡುವುದು ಕೆಲ ವಿರೋಧಾಭಾಸಗಳಿಗೆ ಎಡೆ ಮಾಡಿಕೊಡುತ್ತದೆ. ಚೇಣಿ ಮಾಫಿಯವಾಗಿ ಬೆಳೆಯುತ್ತಿದೆ.
ಹಣಕಾಸಿನ ವಿಷಯದಲ್ಲಿ ಮೋಸ, ವಂಚನೆ ನಡೆದು ರೈತರಿಗೆ ಅನ್ಯಾಯವಾಗಲಿದೆ’ ಎಂದು ಸುಬ್ಬಾಭಟ್ಟ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT