ಮಂಗಳವಾರ, ಅಕ್ಟೋಬರ್ 27, 2020
22 °C

ಪ್ರಗತಿಪರ ಸಂಘಟನೆಗಳಿಂದ ಉಪವಾಸ ಸತ್ಯಾಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೃಷಿ ಮಾರುಕಟ್ಟೆ, ಭೂಸುಧಾರಣೆ, ಭೂಸ್ವಾಧೀನ ತಿದ್ದುಪಡಿ ಮಸೂದೆ ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಜನಶಕ್ತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಗೋಪಿ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೃಷಿ ಮಾರುಕಟ್ಟೆ, ಕೃಷಿ ಭೂಮಿ ಮತು ಭೂ ಸುಧಾರಣೆ, ಭೂ ಸ್ವಾಧೀನ ತಿದ್ದುಪಡಿ ಮಸೂದೆಗಳನ್ನು ಕಾನೂನು ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ ಕಂಡ ಗ್ರಾಮ ಭಾರತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಶಪಡಿಸುತ್ತಿವೆ. ಕಾರ್ಪೋರೇಟ್ ಕಂಪನಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ರಾಷ್ಟ್ರವಾಗಿ ಪರಿವರ್ತಿಸಲು ಹೊರಟಿವೆ. ಸರ್ಕಾರಗಳ ಈ ತೀರ್ಮಾನ ಕೃಷಿ ವಲಯಕ್ಕೆ ಅಪಾಯಕಾರಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇಂತಹ ಕಾನೂನುಗಳ ಮೂಲಕ ಕಂಪನಿಗಳಿಗೆ ಕೃಷಿ ಮಾರುಕಟ್ಟೆ, ಕೃಷಿ ಭೂಮಿ, ಗ್ರಾಹಕರ ಮಾರುಕಟ್ಟೆ ಜತೆಗೆ ವಿದ್ಯುತ್, ಸಾರಿಗೆ, ರೈಲು, ಬ್ಯಾಂಕ್‌, ಎಲ್‌ಐಸಿ, ಪೆಟ್ರೋಲಿಯಂ ಕಂಪನಿ, ವಿಮಾನ ಬಂದರು, ಸೇವಾ ಕ್ಷೇತ್ರ, ಸರ್ಕಾರಿ ಸ್ವಾಮದ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಿಜ್ಞಾನ ಮತ್ತು ಬಾಹ್ಯಾಕಾಶ ಸಂಸ್ಥೆಗಳನ್ನೂ ಖಾಸಗಿ ಕಂಪನಿಗಳಿಗೆ ನೀಡಲು ಹೊರಟಿದ್ದಾರೆ ಎಂದು ದೂರಿದರು.

ಭಾರತದ ಹೈನುಗಾರಿಕೆಗೆ ಪೆಟ್ಟು ನೀಡಲಾಗಿದೆ. ಖಾಸಗಿ ಕಂಪನಿಗಳ ಹೈನು ಉದ್ಯಮಕ್ಕೆ ₹ 15 ಸಾವಿರ ಕೋಟಿ ನೆರವು ನೀಡಲು ಮುಂದಾಗಿದೆ. ಗ್ರಾಮೀಣ ಭಾರತದ ಜನರ ಬದುಕು ದಿವಾಳಿಯಾಗಿದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಹಳ್ಳಿಗಳನ್ನು ಬಿಡುವ ಪರಿಸ್ಥಿತಿ ಎದುರಾಗಿದೆ. ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಿದೆ. ಆರ್ಥಿಕ ದಿವಾಳಿಯಿಂದ ಜನರ ಬದುಕು ದುರ್ಬಲವಾಗುತ್ತಿದೆ ಎಂದು ಆರೋಪಿಸಿದರು.

ಗಾಂಧಿ ಜಯಂತಿ ಆಚರಿಸುವ ನೈತಿಕ ಹಕ್ಕು ರಾಜ್ಯ, ಕೇಂದ್ರ ಸರ್ಕಾರಗಳಿಗಿಲ್ಲ. ಈ ಮಸೂದೆಗಳನ್ನು ಹಿಂಪಡೆಯಬೇಕು. ಆಗ ಮಾತ್ರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಅರ್ಥ ಬರುತ್ತದೆ. ಇಲ್ಲದಿದ್ದಲ್ಲಿ ರೈತರಿಗೆ ಬಗೆದ ದ್ರೋಹ ಎಂದು ಚರಿತ್ರೆಯಲ್ಲಿ ದಾಖಲಾಗುತ್ತದೆ. ತಕ್ಷಣ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಆರ್.ಬಸವರಾಜಪ್ಪ, ಕೆ.ಎಲ್.ಅಶೋಕ್, ಹಿಟ್ಟೂರು ರಾಜು, ಡಿ.ಎಸ್.ಶಿವಕುಮಾರ್, ಇ.ಬಿ.ಜಗದೀಶ್, ಎಸ್.ಶಿವಮೂರ್ತಿ, ಪಿ.ಡಿ.ಮಂಜಪ್ಪ, ಡಿ.ಎಚ್.ರಾಮಚಂದ್ರಪ್ಪ, ಕೆ.ರಾಘವೇಂದ್ರ, ಸಿ.ಚಂದ್ರಪ್ಪ, ಜಿ.ವಿ.ರವೀಂದ್ರ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು