ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಭಾಗದಲ್ಲಿ ಮೀನುಮರಿ ಸಾಕಣೆ: ಕಾಟ್ಲ, ಗೌರಿ, ರೋಹು, ಹುಲ್ಲುಗಂಡ ಮೀನು ಕೃಷಿ

Last Updated 23 ಸೆಪ್ಟೆಂಬರ್ 2022, 4:55 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಬೋರ್ಗರೆದು ಸುರಿಯುವ ವರುಣನ ಅಬ್ಬರದ ನಡುವೆ ಕೊಳಗಳು ತುಂಬಿ ಹೊರಚೆಲ್ಲದಂತೆ ಎಚ್ಚರ ವಹಿಸಿ ಮೀನುಮರಿ ಸಂರಕ್ಷಣೆ ಮಾಡುವುದು ಸಾಹಸದ ಕೆಲಸ.

ಸವಾಲು ಸ್ವೀಕರಿಸಿ ಧೈರ್ಯ ತಳೆದಿರುವ ಮಂಡಗದ್ದೆ ಹೋಬಳಿಯ ಜಂಬವಳ್ಳಿ ಗ್ರಾಮದ ಪುಟ್ಟೋಡ್ಲು ತಿಮ್ಮಪ್ಪ ಅವರ ಸಾಧನೆ ಹೊಸ ಆಲೋಚನೆಗಳಿಗೆ ಪುಷ್ಟಿ ನೀಡುತ್ತಿದೆ. 10ನೇ ತರಗತಿವರೆಗೆ ಓದಿರುವ ತಿಮ್ಮಪ್ಪ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡುವ ಹಂತಕ್ಕೆ ಬೆಳೆದಿದ್ದಾರೆ.

ಹೈದರಾಬಾದ್‌ನಲ್ಲಿರುವ ಮೀನು ಅಧ್ಯಯನ ಶಿಬಿರದಲ್ಲಿ ಭಾಗವಹಿಸಿ ಮೀನುಗಳ ವರ್ತನೆ, ನಡವಳಿಕೆಗೆ ಸಂಬಂಧಿಸಿದ ಜ್ಞಾನ ಪಡೆದು, ತಮ್ಮ ತಮ್ಮೂರಿನ ಜಮೀನಿನಲ್ಲಿ ಪ್ರಯೋಗಕ್ಕೆ ಇಳಿದಿದ್ದಾರೆ. ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರ ಮಾರ್ಗದರ್ಶನದಂತೆ ಭದ್ರಾವತಿ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಮಾಹಿತಿ ಪಡೆದು 5 ದಿನಗಳ ಮೀನುಮರಿ ಸಾಕಾಣಿಕೆಗೆ ಮುಂದಾಗಿದ್ದಾರೆ.

ತಮಗಿರುವ 5 ಎಕರೆ ಜಮೀನಿನಲ್ಲಿ ಒಂದೂವರೆ ಎಕರೆ ಭತ್ತ, 2 ಎಕೆರೆ ಅಡಿಕೆ, ಬಾಳೆ ಜೊತೆಗೆ ಒಂದೂವರೆ ಎಕರೆಯಲ್ಲಿ ₹ 80,000 ವೆಚ್ಚದಲ್ಲಿ 100 ಅಡಿ ಉದ್ದ, 60 ಅಡಿ ಅಗಲ, 6 ಅಡಿ ವಿಸ್ತೀರ್ಣ ಹೊಂದಿರುವ 6 ಕೊಳಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ₹ 90,000 ಪ್ರಗತಿ ನಿಧಿ ಪಡೆದು ಕಾಟ್ಲ, ಗೌರಿ, ರೋಹು. ಹುಲ್ಲುಗಂಡ ಮುಂತಾದ ತಳಿಗಳ ಮೀನು ಮರಿಗಳ ಸಾಕಲು ಆರಂಭಿಸಿದ್ದಾರೆ.

ಮಳೆಗಾಲ ಆರಂಭ ವಾಗುತ್ತಿದ್ದಂತೆಯೇ ಜೂನ್‌ ತಿಂಗಳಿನಿಂದ 6 ತಿಂಗಳು ಮೀನುಮರಿಗಳ ಸಾಕಾಣಿಕೆಗೆ ಉತ್ತಮ ವಾತಾವರಣ ಇದೆ. 5 ದಿನಗಳ ಮೀನು ಮರಿಗಳು 20 ರಿಂದ 90 ದಿನಗಳ ಒಳಗೆ ಮಾರಾಟಕ್ಕೆ ಸಜ್ಜಾಗುತ್ತದೆ. ಹೀಗೆ ತಯಾರಾದ ಮೀನು ಮರಿಗಳನ್ನು ಮೂಡಿಗೆರೆ, ಬ್ರಹ್ಮಾವರ, ಮಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಅನೇಕ ಕೃಷಿ ವಿಜ್ಞಾನ ಕೇಂದ್ರಗಳು ಖರೀದಿ ಮಾಡುತ್ತಿವೆ. ಅಲ್ಲದೇ ಕೊಪ್ಪ, ಸಾಗರ, ರಾಣಿಬೆನ್ನೂರು, ಕೊಡಗು, ಶಿಕಾರಿಪುರ, ಹೊಸನಗರ ಮುಂತಾದ ಪ್ರದೇಶಗಳ ರೈತರು ಇಲ್ಲಿಯವರೆಗೆ ಕೋಟಿಗೂ ಹೆಚ್ಚು ಮೀನುಮರಿಗಳು ಮಾರಾಟವಾಗಿವೆ. ಅಂದಾಜು 4ರಿಂದ 5 ಲಕ್ಷ ಮೀನು ಮರಿಗಳು ಒಂದು ಗುಂಪಿನಲ್ಲಿ ಮಾರಾಟವಾಗುತ್ತವೆ.

ಸತತ ಪರಿಶ್ರಮದಿಂದ ನಿರಂತವಾಗಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ತಿಮ್ಮಪ್ಪ ಅವರೊಂದಿಗೆ ಪತ್ನಿ ಸವಿತಾ ಮತ್ತು ಮಕ್ಕಳಾದ ಸ್ವಾತಿ, ಸಂಜಯ್‌ ವಿದ್ಯಾಭ್ಯಾಸದ ಜೊತೆಜೊತೆಗೆ ಈ ಕಾರ್ಯಕ್ಕೂ ಕೈಜೋಡಿಸಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಕಾರ್ಮಿಕರನ್ನು ಆಶ್ರಯಿಸಿದ್ದಾರೆ. ಮೀನು ಮರಿಗಳ ಒಂದು ಗುಂಪಿನ ಮಾರಾಟದಿಂದ 1.5 ಲಕ್ಷ ಆದಾಯ ಹೊಂದಿದ್ದಾರೆ.

ಮೀನು ಮರಿಗಳು ಮಾರಾಟವಾಗದೇ ಉಳಿದಲ್ಲಿ ಅವುಗಳ ಸಾಕಾಣಿಕೆ ಮುಂದುವರಿಸಿ 2ರಿಂದ 10 ಕೆ.ಜಿ.ವರೆಗೆ ಬೆಳೆಸಿ ಮಾರಾಟ ಮಾಡಲಾಗುತ್ತದೆ. ತಿಮ್ಮಪ್ಪ ಅವರ ಕೃಷಿ ಸಾಧನೆ ಗುರುತಿಸಿ ಕೃಷಿ ಇಲಾಖೆಯ 2019-20ನೇ ಸಾಲಿನ ಕೃಷಿ ತಂತ್ರಜ್ಞಾನ ನಿರ್ವಹಣ ಸಂಸ್ಥೆ ಅಡಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ, ಇಲಾಖೆಯ ಕ್ಷೇತ್ರೋತ್ಸವದಲ್ಲಿ ಅತಿ ಹೆಚ್ಚು ಭತ್ತ ಬೆಳೆದ ಸಾಧಕ ಪ್ರಶಸ್ತಿ, ಮಂಗಳೂರು, ಶಿವಮೊಗ್ಗ ಕೃಷಿ ಕಾಲೇಜಿನಲ್ಲಿ ಸನ್ಮಾನ ಸೇರಿದಂತೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದೆ.

***

ಕೃಷಿ ಮಾತ್ರವಲ್ಲ ನಾಟಿ ಪಂಡಿತ

ಪೂರ್ವಿಕರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತಿಮ್ಮಪ್ಪ ನಾಟಿ ವೈದ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಅಜ್ಜ-ಅಜ್ಜಿಯಿಂದ ಗಿಡಮೂಲಿಕೆಗಳ ಜ್ಞಾನ ಪಡೆದಿರುವ ಅವರು, ಸಾವಿರಾರು ಜನರಿಗೆ ಜಾಂಡೀಸ್‌, ಮೂಳೆ ಮುರಿತಕ್ಕೆ ಆಯುರ್ವೇದ ಗಿಡಮೂಲಿಕೆ ಔಷಧಿ ನೀಡಿದ್ದು, ಅನೇಕರ ಪ್ರಾಣ ಉಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT