ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ| ಇನ್ನೊಂದು ವಾರದಲ್ಲಿ ವಿಮಾನ ಹಾರಾಟ: ಬಿ.ವೈ.ರಾಘವೇಂದ್ರ

ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಚಾಲನೆ ಇಂದು: ಸಂಸದ ರಾಘವೇಂದ್ರ
Last Updated 24 ಮಾರ್ಚ್ 2023, 5:21 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗದಿಂದ ಹಾರಾಟ ನಡೆಸುವ ವಿಮಾನದ ಪ್ರತಿ ಟಿಕೆಟ್‌ಗೆ ₹ 500 ಪ್ರೋತ್ಸಾಹಧನವನ್ನು ಸಂಬಂಧಿಸಿದ ವಿಮಾನ ಯಾನ ಸಂಸ್ಥೆಗೆ ರಾಜ್ಯ ಸರ್ಕಾರ ನೀಡಲು ತೀರ್ಮಾನಿಸಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಸೋಗಾನೆ ವಿಮಾನ ನಿಲ್ದಾಣದಿಂದ ಇನ್ನೊಂದು ವಾರದಲ್ಲಿ ಇಂಡಿಗೊ ಸಂಸ್ಥೆಯ ವಿಮಾನ ಹಾರಾಟ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ‘ಪ್ರಯಾಣಿಕರ ಟಿಕೆಟ್‌ಗೆ ಕೊಡುವ ಪ್ರೋತ್ಸಾಹ ಧನದ ವೆಚ್ಚವೇ ವಾರ್ಷಿಕ ₹2.5 ಕೋಟಿ ಆಗಲಿದೆ. ಶಿವಮೊಗ್ಗದಿಂದ ಬೆಂಗಳೂರಿಗೆ ಟಿಕೆಟ್‌ ದರ ಒಬ್ಬರಿಗೆ ₹2800 ನಿಗದಿಯಾಗಬಹುದು’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಉತ್ತರಿಸಿದರು.

ಭಾರತೀಯ ವಿಮಾನ ನಿಲ್ದಾಣದ ಪ್ರಾಧಿಕಾರದ (ಎಎಐ) ಮಾನದಂಡದ ಅನ್ವಯ ಸೊಗಾನೆ ವಿಮಾನನಿಲ್ದಾಣಕ್ಕೆ ದುಬೈನಿಂದ ತಲಾ ₹6 ಕೋಟಿ ವೆಚ್ಚದಲ್ಲಿ ಮೂರು ಅಗ್ನಿಶಾಮಕ ವಾಹನಗಳನ್ನು ತರಿಸಲಾಗಿದೆ ಎಂದು ಅವರು ತಿಳಿಸಿದರು.

ಮಾರ್ಚ್ 25ರಂದು ರಾಜ್ಯಕ್ಕೆ ಬರಲಿರುವ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆ ಕಾರ್ಯಕ್ರಮ ಮುಗಿಸಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಇಲ್ಲಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದು ವಿಮಾನ ನಿಲ್ದಾಣದ ಪ್ರಾಮುಖ್ಯತೆ ಸೂಚಿಸುತ್ತದೆ
ಎಂದರು.

ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗಾಗಿ ಮಾನವ ಸಂಪನ್ಮೂಲ ಕೊಡಲು ಶಿವಮೊಗ್ಗದಲ್ಲಿ ದೇಶದಲ್ಲೇ ನಾಲ್ಕನೇ ರಾಷ್ಟ್ರೀಯ ರಕ್ಷಾ ಮಹಾ ವಿದ್ಯಾಲಯ ಸ್ಥಾಪನೆ ಆಗುತ್ತಿದೆ. ಇದರ ಶ್ರೇಯಸ್ಸು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸಲ್ಲುತ್ತದೆ. ಗುಜರಾತ್, ಅರುಣಾಚಲ ಪ್ರದೇಶ, ಉತ್ತರ ಪ್ರದೇಶದ ನಂತರ ರಾಜ್ಯದಲ್ಲಿ ಈ ವಿಶ್ವವಿದ್ಯಾಲಯ ಅರಂಭವಾಗುತ್ತಿದೆ ಎಂದು ಹೇಳಿದರು.

ಡಿಪ್ಲೊಮಾ, ಪಿಜಿ ಹಾಗೂ ಒಂದು ವಾರದ ಕೋರ್ಸ್ ಸೇರಿದಂತೆ ರಕ್ಷಣಾ ಮಂತ್ರಾಲಯಕ್ಕೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಅನೇಕ ಕೋರ್ಸ್‌ ಪ್ರಾರಂಭಿಸುತ್ತಿದ್ದು, ಜೂನ್ ಅಥವಾ ಜುಲೈನಿಂದಲೇ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ. ₹2000 ದಿಂದ ₹55 ಸಾವಿರದವರೆಗೆ ಶುಲ್ಕ ಕೂಡ ತರಬೇತಿಗೆ ಇದ್ದು, ನವುಲೆಯ ರಾಗಿಗುಡ್ಡದ 8 ಎಕರೆ ಜಾಗದಲ್ಲಿ ₹45 ಕೋಟಿ ವೆಚ್ಚದಲ್ಲಿ
ಸುಸಜ್ಜಿತ ಕ್ಯಾಂಪಸ್ ನಿರ್ಮಾಣವಾಗಲಿದೆ. ಅದಕ್ಕೆ ಕೇಂದ್ರ ಸರ್ಕಾರವೇ ಹಣ ಕೊಡಲಿದೆ ಎಂದು ತಿಳಿಸಿದರು.

ಸೈಬರ್ ಭದ್ರತೆ, ಅಪರಾಧ ಶಾಸ್ತ್ರ, ಮಾಹಿತಿ ತಂತ್ರಜ್ಞಾನ, ವಿಜ್ಞಾನ, ಕಾನೂನು, ರಕ್ಷಣಾ ವಿಷಯಗಳ ಬಗ್ಗೆ ತರಬೇತಿ ಬೇಸಿಕ್ ಕೋರ್ಸ್ ಕೂಡ ಇಲ್ಲಿ ಪಡೆಯಬಹುದು. ಯುವಕರಲ್ಲಿ ರಾಷ್ಟ್ರ ನಿರ್ಮಾಣದ ಶಕ್ತಿ ತುಂಬುವ ಉದ್ದೇಶದಿಂದ ಈ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ ಎಂದು ಹೇಳಿದರು.

‘ಮಹಾಸಂಗಮ ಸಮಾವೇಶ ನಾಳೆ’

ದಾವಣಗೆರೆಯಲ್ಲಿ ಮಾರ್ಚ್ 25ರಂದು ಬಿಜೆಪಿ ಮಹಾ ಸಂಗಮ ಸಮಾವೇಶ ನಡೆಯಲಿದೆ. 10 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಗೆ ರಾಜ್ಯದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ನಿರೀಕ್ಷೆಗೂ ಮೀರಿ ಜನ ಬೆಂಬಲಿಸಿದ್ದಾರೆ. ಪೂರ್ಣ ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ ಎಂದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ ನಡೆಸಿದ ಈಶ್ವರಪ್ಪ, ‘ರಾಜ್ಯದಲ್ಲಿ ಎಲ್ಲೂ ಅವರಿಗೆ ಚುನಾವಣೆಗೆ ನಿಲ್ಲಲು ಜಾಗ ದೊರೆತಿಲ್ಲ. 224 ಕ್ಷೇತ್ರಗಳಲ್ಲೂ ಎಲ್ಲಿಯೇ ನಿಂತರೂ ಅವರು ಸೋಲುವುದು ನಿಶ್ಚಿತ. ಕೋಲಾರ, ಬಾದಾಮಿ, ವರುಣಾ, ಕುಷ್ಟಗಿ ಎಲ್ಲಾ ಕ್ಷೇತ್ರ ಆಯ್ತು. ಈಗ ಮನೆಯವರನ್ನು ಕೇಳಿ ಹೇಳುತ್ತೇನೆ ಅನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

ಶಿವಮೊಗ್ಗದ ರಾಗಿಗುಡ್ಡದಲ್ಲಿ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾರ್ಚ್‌ 24ರಂದು ವರ್ಚ್ಯುವಲ್‌ ವ್ಯವಸ್ಥೆಯ ಮೂಲಕ ಉದ್ಘಾಟಿಸಲಿದ್ದಾರೆ.

–ಬಿ.ವೈ. ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT