ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ದುರ್ಗಾದೇವಿಯ ಹೊರಬೀಡು ಜಾತ್ರೆ: ಅರೆ ಮಲೆನಾಡಿನಲ್ಲೊಂದು ವಿಶಿಷ್ಟ ಆಚರಣೆ

ವರುಣ್ ಕುಮಾರ್ ಡಿ.ಬಿಲ್ಗುಣಿ
Published 29 ಜನವರಿ 2024, 7:06 IST
Last Updated 29 ಜನವರಿ 2024, 7:06 IST
ಅಕ್ಷರ ಗಾತ್ರ

ಕುಂಸಿ: ಅರೆ ಮಲೆನಾಡಿನಲ್ಲಿ ಮಾರಿಕಾಂಬ, ಚೌಡೇಶ್ವರಿ, ಕಾಳಿ ಆರಾಧನೆ ಸಾಮಾನ್ಯ. ವಿಶಿಷ್ಟ ಆಚರಣೆ, ಹಬ್ಬಗಳಿಗೆ ಹೆಸರಾಗಿರುವ ಈ ಭಾಗದಲ್ಲಿ ನಡೆಯುವ ಹೊರಬೀಡು ಹಬ್ಬ, ವಿಶಿಷ್ಟ ಆಚರಣೆಯಿಂದ ಗಮನ ಸೆಳೆದಿದೆ.

ಕುಂಸಿ ಸಮೀಪದ ಸಮೀಪದ ಬಾಳೆಕೊಪ್ಪ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಹೊರಬೀಡು ಹಬ್ಬವನ್ನು, ಇಲ್ಲಿನ ಜನರಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಇದೇ ಮಂಗಳವಾರ ಹಬ್ಬಕ್ಕೆ ಗ್ರಾಮಸ್ಥರು ಸಜ್ಜಾಗಿದ್ದಾರೆ. 

ಹಬ್ಬದ ಹಿನ್ನೆಲೆ: ಈ ಹಿಂದೆ ಗ್ರಾಮದಲ್ಲಿ ಕಾಲರಾ, ದಡಾರ, ಪ್ಲೇಗ್‌ನಂತರ ಕಾಯಿಲೆಗಳು ಕಾಣಿಸಿಕೊಂಡಾಗ, ಜನರು ಊರನ್ನು ಬಿಟ್ಟು ಊರಾಚೆಯ ಬನದಲ್ಲಿ ಬಿಡಾರ ಹೂಡುತ್ತಿದ್ದರು. ಅಚ್ಚರಿಯೆಂಬಂತೆ, ಬನದಲ್ಲಿ ದುರ್ಗಾದೇವಿಯ ಮೂರ್ತಿ ಉದ್ಭವವಾಗಿ, ಊರಿಗೆ ಕಾಯಿಲೆಗಳು ಬಾರದಂತೆ ತಾಯಿ ಕಾಪಾಡುತ್ತಾಳೆ ಎಂಬ ನಂಬಿಕೆ ಹುಟ್ಟಿಕೊಂಡಿತು. ಹಾಗಾಗಿ ದೇವಿಗೆ ಎರಡು ವರ್ಷಕ್ಕೊಮ್ಮೆ ಪೂಜೆ ಸಲ್ಲಿಸಿ ಸಂಭ್ರಮಿಸುವುದು ಇಲ್ಲಿನ ಸಂಪ್ರದಾಯವೇ ಆಗಿಹೋಗಿದೆ.

ಆಚರಣೆಯ ರೀತಿ: ಹಬ್ಬಕ್ಕೆ ತನ್ನದೇ ಆದ ಸಂಪ್ರದಾಯವಿದ್ದು, ಆಚರಣೆಗಳನ್ನು ಅದನ್ನು ಇಲ್ಲಿನ ಜನರು ಕಟ್ಟುನಿಟ್ಟಿನಿಂದ ಪಾಲಿಸುತ್ತಾರೆ. ಊರಾಚೆ ದೇವಸ್ಥಾನದಲ್ಲಿ ಶಿಲಾಮೂರ್ತಿ ಇದ್ದರೂ, ಮಣ್ಣಿನಿಂದ ಮೂರ್ತಿ ಮಾಡಿ ಹಬ್ಬ ಆಚರಿಸುತ್ತಾರೆ. ಮಂಗಳವಾರದಂದು ಊರಿನ ಮಡಿವಾಳ ಜನಾಂಗದವರು ಮೂರ್ತಿ ತಯಾರಿಕೆಗೆ ಬೇಕಾಗುವ ಮಣ್ಣನ್ನು ವಿಶ್ವಕರ್ಮ ಆಚಾರರಾದ ಧರ್ಮಾಚಾರ್ ಅವರ ಮನೆಗೆ ತಂದು ಕೊಡುತ್ತಾರೆ. ನಂತರ ಗ್ರಾಮಸ್ಥರು ಊರಿನ ಗಡಿ ಭಾಗಗಳಿಗೆ ಮುಳ್ಳಿನ ಬೇಲಿ ಹಾಕುತ್ತಾರೆ. ಅಂದು ಊರಿಗೆ ಬೇರೆ ಯಾರಿಗೂ ಪ್ರವೇಶ ನೀಡುವುದಿಲ್ಲ. ಊರಿನ ಎಲ್ಲ ದೇವತಾ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ದುರ್ಗಾದೇವಿಯ ಬನಕ್ಕೆ ಕೊಂಡೊಯ್ಯುತ್ತಾರೆ. 

ಸಂಭ್ರಮದ ವಾತಾವರಣ: ಮಂಗಳವಾರ ಇಡೀ ದಿನ ಜನರು ಊರಿನ ಗಡಿಯಲ್ಲಿರುವ ದುರ್ಗಾದೇವಿಯ ಬನದಲ್ಲಿ ಸೇರಿ ಸಂಭ್ರಮಿಸುತ್ತಾರೆ. ಧರ್ಮಚಾರ್ ಮನೆಯವರು ದುರ್ಗಾದೇವಿಯ ಮಣ್ಣಿನ ಮೂರ್ತಿ ತಯಾರಿಸುತ್ತಾರೆ. ಈ ಸಮಯದಲ್ಲಿ ಜನರು  ಹಾಡು, ಭಜನೆಯಲ್ಲಿ ತೊಡಗುತ್ತಾರೆ. ರಾತ್ರಿ ವೇಳೆಗೆ ಪೂರ್ಣಗೊಳ್ಳುವ ದೇವಿ ಮೂರ್ತಿಗೆ ಪೂಜೆ, ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಬುಧವಾರ ಬೆಳಿಗ್ಗೆ ದೇವತಾ ಮೂರ್ತಿಗಳನ್ನು ಮೆರವಣಿಗೆ ಮುಖಾಂತರ ಕೊಂಡೊಯ್ದು ಗಡಿ ಭಾಗಕ್ಕೆ ಹಾಕಿದ ಬೇಲಿಗಳನ್ನು ತೆರವುಗೊಳಿಸಿ, ಊರಿಗೆ ಜನರು ಪ್ರವೇಶ ಮಾಡುತ್ತಾರೆ.

ಹಬ್ಬ ಇಲ್ಲಿಗೆ ಮುಗಿಯುವುದಿಲ್ಲ. ದುರ್ಗಾದೇವಿ ಹಬ್ಬ ಆದ ಎಂಟನೇ ದಿನಕ್ಕೆ ಗಡಿ ದುರ್ಗಾದೇವಿಯ ಜಾತ್ರೆ ನಡೆಯುತ್ತದೆ. ಅಂದು ಧರ್ಮಾಚಾರ್ ಮನೆಯವರು ಅವರ ಮನೆಯಲ್ಲಿಯೇ ಗಡಿ ದುರ್ಗಾ ದೇವಿಯ ಮಣ್ಣಿನ ವಿಗ್ರಹ ಮಾಡಿ ಪೂಜೆ ಸಲ್ಲಿಸುತ್ತಾರೆ. ನಂತರ ಊರಿನ ಜನರೆಲ್ಲರೂ ದೇವಿಗೆ ಪೂಜೆ ಸಲ್ಲಿಸಿ, ಮತ್ತೆ ಊರಿನಿಂದ ಹೊರ ಹೋಗಿ ಮಾಂಸಾಹಾರ ಅಡುಗೆ ಮಾಡಿ, ಅದನ್ನು ಹಿತೈಷಿಗಳಿಗೆ ನೀಡುವ ಸಂಪ್ರದಾಯ ಇಲ್ಲಿದೆ. 

‘ನಮ್ಮ ಊರಿನ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಹಬ್ಬ ಇದಾಗಿದ್ದು, ಈ ಹಬ್ಬ ಮಾಡುವುದರಿಂದ ನಮ್ಮ ಊರಿಗೆ ಯಾವುದೇ ಕಷ್ಟ, ತೊಂದರೆಗಳನ್ನು ಬನದುರ್ಗಾ ದೇವಿ ಊರಿನಿಂದ ಹೊರಗಡೆಯೇ ತಡೆದು ನಮ್ಮೆಲ್ಲರಿಗೂ ನೆಮ್ಮದಿಯ ಜೀವನ ನಡೆಸಲು ಅನುವು ಮಾಡುತ್ತಾಳೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT