ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಗಣರಾಜ್ಯೋತ್ಸವಕ್ಕೆ ಫಲಪುಷ್ಪ ಪ್ರದರ್ಶನದ ಮೆರುಗು

Last Updated 27 ಜನವರಿ 2023, 5:45 IST
ಅಕ್ಷರ ಗಾತ್ರ

ಶಿವಮೊಗ್ಗ: ಗಣರಾಜ್ಯೋತ್ಸವ ಸಂಭ್ರಮಕ್ಕೆ ಮೆರುಗು ನೀಡಲು ತೋಟಗಾರಿಕೆ ಇಲಾಖೆಯಿಂದ ಇಲ್ಲಿನ ಗಾಂಧಿ ಪಾರ್ಕ್‌ನಲ್ಲಿ ಆಯೋಜಿಸಿರುವ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು.

ಮಲೆನಾಡಿನ ಫಲಪುಷ್ಪ ವೈವಿಧ್ಯವನ್ನು ಕಣ್ತುಂಬಿಕೊಳ್ಳಲು ಪ್ರದರ್ಶನ ವೇದಿಕೆ ಆಗಿದ್ದು, ಮೊದಲ ದಿನವೇ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ಮಹಿಳೆಯರು, ಮಕ್ಕಳು, ಹಿರಿಯರು ಹೀಗೆ ಕುಟುಂಬ ಸಮೇತರಾಗಿ ಬಂದು ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು.

ಕೋವಿಡ್‌ ಕಾರಣ ಕಳೆದ ಮೂರು ವರ್ಷಗಳಿಂದ ತೋಟಗಾರಿಕೆ ಇಲಾಖೆಯಿಂದ ಪ್ರದರ್ಶನ ನಡೆದಿರಲಿಲ್ಲ. ಈ ಬಾರಿ ಸಾರ್ವಜನಿಕರನ್ನು ಸೆಳೆಯಲು ತೋಟಗಾರಿಕೆ ಇಲಾಖೆ ವಿಭಿನ್ನವಾಗಿ ಫಲಪುಷ್ಪ ಪ್ರದರ್ಶನ ಆಯೋಜಿಸಿತ್ತು.

ಹೂವಿನಿಂದ ರೂಪುಗೊಂಡಿರುವ ವರನಟ ಡಾ.ರಾಜ್‌ಕುಮಾರ್, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರ, ಸೋಗಾನೆಯ ವಿಮಾನ ನಿಲ್ದಾಣದ ಮಾದರಿಯಲ್ಲಿ ಪುಷ್ಪಕ ವಿಮಾನ, ಹೂವಿನಿಂದ ಮಾಡಿದ ಹುಲಿಯ ಪ್ರತಿಕೃತಿಗಳು ಗಮನ ಸೆಳೆಯುತ್ತಿದೆ. ನದಿ, ಜಲಾಶಯ ಹಾಗೂ ಜಲಚರಗಳ ಕಲ್ಪನೆಯನ್ನು ಹೂವಿನಲ್ಲಿ ಕಟ್ಟಿಕೊಡಲಾಗಿದೆ. ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶನ, ಮಾರಾಟ, ಮಹಿಳೆಯರಿಂದ ರಂಗೋಲಿ ಚಿತ್ತಾರ ಒಡಮೂಡಿಸಲಾಗಿದೆ. ತರಕಾರಿ ಮಳಿಗೆ, ಅಪರೂಪದ ಗಿಡ ಮೂಲಿಕೆ ಸಸ್ಯಗಳು, ಹಣ್ಣು, ಹಂಪಲಿನ ಮಳಿಗೆಗಳು, ಕೈತೋಟ, ಉದ್ಯಾನ ವನ, ಮನೆ, ಶಾಲೆ, ಅಂಗನವಾಡಿ, ಸರ್ಕಾರಿ ಕಚೇರಿಯ ಪ್ರತಿಕೃತಿಗಳು ಫಲಪುಷ್ಪದಲ್ಲಿ ಮೈದಳೆದಿವೆ.

ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ವಿಶೇಷವನ್ನು ತಿಳಿಸಿಕೊಡುವ ಪ್ರದರ್ಶನ ಮಳಿಗೆ ಇದ್ದು, ‍ಮಳಿಗೆಗೆ ಭೇಟಿ ನೀಡಿದವರು ಪ್ರಾಣಿಗಳ ದತ್ತು ತೆಗೆದುಕೊಳ್ಳುವ ಉತ್ಸಾಹವನ್ನು ತೋರಿದರು. ಜಿಲ್ಲೆಯ ಸಸ್ಯ ಸಂಪತ್ತು ಮತ್ತು ವನ್ಯ ಜೀವಿಗಳ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಅಭಿವೃದ್ಧಿ ಚಟುವಟಿಕೆ ಭಾಗವಾಗಿ ಸಂಕೇತವಾಗಿ ಸ್ಮಾರ್ಟ್‌ ಸಿಟಿ ಮಾದರಿ ಪ್ರದರ್ಶನಕ್ಕೆ ಇಡಲಾಗಿದೆ.

ಅಣಬೆ ಕೃಷಿ, ಜೇನು ಕೃಷಿಯ ಪ್ರದರ್ಶನ ಆಯೋಜಿಸಲಾಗಿದೆ. ಫಲ ಪುಷ್ಟ ಪ್ರದರ್ಶನಕ್ಕೆ ಭೇಟಿ ಕೊಟ್ಟವರು ಅಲ್ಲಿ ಹೂವಿನಿಂದ ಸಿದ್ಧಪಡಿಸಿರುವ ಸೆಲ್ಫಿ ವಲಯಗಳಲ್ಲಿ ನಿಂತು ಫೋಟೊಗೆ ಫೋಸ್ ನೀಡಿ ಸಂಭ್ರಮಿಸಿದರು.

ಪ್ರದರ್ಶನ ವೀಕ್ಷಣೆಗೆ ವಯಸ್ಕರಿಗೆ ₹ 10 ಹಾಗೂ ಮಕ್ಕಳಿಗೆ ₹ 5 ಟಿಕೆಟ್ ದರ ನಿಗದಿಪಡಿಸಲಾಗಿದೆ. ಜಿಲ್ಲಾಧಿಕಾರಿ
ಡಾ. ಆರ್. ಸೆಲ್ವಮಣಿ, ಎಸ್ಪಿ ಜಿ.ಕೆ. ಮಿಥುನ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಇದ್ದರು.

ಮೃಗಾಲಯದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಬೇಕು. ಇದೇ ಮೊದಲ ಬಾರಿಗೆ ಮಾಹಿತಿ ಕೇಂದ್ರದ ಮಳಿಗೆಯನ್ನು ತೆರೆದಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

–ಬಿ. ಮುಕುಂದ ಚಂದ್ರ, ಕಾರ್ಯನಿರ್ವಾಹಕ ನಿರ್ದೇಶಕ, ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ

ಜಿಲ್ಲೆಯ ಅಭಿವೃದ್ಧಿ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಒತ್ತು ನೀಡಲಾಗಿದೆ. ಫಲಪುಷ್ಪ ಪ್ರದರ್ಶನ ಜ.26 ರಿಂದ 29ರವರೆಗೆ ನಡೆಯಲಿದೆ.

–ಪ್ರಕಾಶ್ ಜಿ.ಎನ್., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

ತುಂಬಾ ಸಂತೋಷವಾಗುತ್ತಿದೆ. ವಿವಿಧ ತಾಲ್ಲೂಕಿನಿಂದ ರೈತರು ಬಂದು ಮಳಿಗೆಗಳ ತೆರದಿದ್ದಾರೆ. ರೈತರು ಬೆಳೆಯುವ ಕೆಲವು ಬೆಳೆಗಳ ಕುರಿತು ಮಾಹಿತಿಯೇ ಇರುವುದಿಲ್ಲ, ಆದರೆ ಈ ರೀತಿಯ ಕಾರ್ಯಕ್ರಮದಿಂದ ಅವುಗಳನ್ನೆಲ್ಲ ತಿಳಿದುಕೊಳ್ಳಬಹುದು. ––ಸಾದ್ವಿನಿ, ಶಿವಮೊಗ್ಗ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT