ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ: ಆಧುನಿಕ ಸ್ಪರ್ಶವಿಲ್ಲದ ಕುಬಟೂರಿನ ಸರ್ಕಾರಿ ಶಾಲೆ

ಮಾಜಿ ಮುಖ್ಯಮಂತ್ರಿ ಕಲಿತ ಶಾಲೆಗೆ 150 ವರ್ಷದ ಸಂಭ್ರಮ
Last Updated 13 ಆಗಸ್ಟ್ 2021, 4:36 IST
ಅಕ್ಷರ ಗಾತ್ರ

ಆನವಟ್ಟಿ: ಆನವಟ್ಟಿಯಿಂದ 3 ಕಿ.ಮೀ. ದೂರದಲ್ಲಿರುವ, ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಓದಿದ, 150 ವರ್ಷಗಳ ಸಂಭ್ರಮಾಚರಣೆಯಲ್ಲಿರುವ ಕುಬಟೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಧುನಿಕ ಶಿಕ್ಷಣದ ಸವಲತ್ತುಗಳಿಂದ ವಂಚಿತವಾಗಿದ್ದು, ಕೊಠಡಿಗಳ ಕೊರತೆ ಹಾಗೂ ಆಧುನಿಕ ಶಿಕ್ಷಣ ಪದ್ಧತಿ ಆಳವಡಿಕೆ ಇಲ್ಲದೆ ಬಳಲುತ್ತಿದೆ.

ಕುಬಟೂರಿಗೆ ಕುಂತಳನಗರ ಎಂಬ ಹೆಸರಿದೆ. ಚಂದ್ರಹಾಸ ರಾಜ ಆಡಳಿತ ಮಾಡಿರುವ ಇತಿಹಾಸ ಪ್ರಸಿದ್ಧ ಗ್ರಾಮ. ಸ್ವಾತಂತ್ರ್ಯಪೂರ್ವದ 1871ರಲ್ಲಿ ಶಾಲೆ ಪ್ರಾರಂಭವಾಯಿತು. 150 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು ನೀಡಿರುವ ಈ ಶಾಲೆಗೆ ಆಧುನಿಕ ಸ್ಪರ್ಶವಿಲ್ಲ.

1960ರಲ್ಲಿ ಶಾಲೆಗೆ ಸ್ವಂತ ಕಟ್ಟಡಗಳ ಭಾಗ್ಯ ದೊರೆಯಿತು. 1938– 39ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಈ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಕಲಿಯಲು ದಾಖಲಾಗಿದ್ದರು. ಮಾಜಿ ಮುಖ್ಯಮಂತ್ರಿ ಓದಿದ ಶಾಲೆ ಎಂಬ ಹೆಗ್ಗಳಿಕೆ ಬಿಟ್ಟರೆ, ಈ ಶಾಲೆಗೆ ಯಾವುದೇ ಸವಲತ್ತು ಈವರೆಗೂ ಸರ್ಕಾರದಿಂದ ಲಭಿಸಿಲ್ಲ.

‘ವಿಶಾಲವಾದ ನಲಿಕಲಿ ಕೊಠಡಿಯ ಹಾಗೂ ಇದೇ ಕೊಠಡಿಗೆ ಹೊಂದಿಕೊಂಡಿರುವ ಅಂಗನವಾಡಿಯ ಚಾವಣಿ ಗೆದ್ದಲು ಹಿಡಿದು ಸಂಪೂರ್ಣ ಹಾಳಾಗಿವೆ. ಚಾವಣಿಗೆ ಹಾಕಿರುವ ರೀಪರ್‌ಗಳು ಗೆದ್ದಲು ಹಿಡಿದು ಮುರಿದಿವೆ. ಕೊಠಡಿಗಳ ಮೇಲೆ ಮಂಗಗಳ ಹಾವಳಿ ಹೆಚ್ಚಾಗಿದ್ದು, ರೀಪರ್‌ಗಳು ಮುರಿದಿರುವುದರಿಂದ ಹೆಂಚುಗಳು ಮಕ್ಕಳ ಮೇಲೆ ಬೀಳುವ ಆತಂಕ ಕಾಡುತ್ತದೆ’ ಎನ್ನುತ್ತಾರೆ ಎಸ್‍ಡಿಎಂಸಿ ಸದಸ್ಯರು.

ಶಾಲೆಯ ಮುಂಭಾಗದ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಶಾಲೆಯ ಕಾಂಪೌಂಡ್ ಚಿಕ್ಕದಾಗಿರುವುದರಿಂದ ವಾಹನಗಳ ಓಡಾಟದ ಶಬ್ದ ಮಕ್ಕಳು ಪಾಠ ಕೇಳಲು ಕಿರಿಕಿರಿ ಉಂಟಾಗುತ್ತದೆ. ಹಳೆಯ ಶಿಥಿಲಾವಸ್ಥೆಯಲ್ಲಿರುವ ಶಾಲೆಯ ಮುಂಭಾಗದ ಚಿಕ್ಕ ಕಾಂಪೌಂಡ್ ನೆಲಸಮ ಮಾಡಿ ಎತ್ತರವಾಗಿ ನೂತನ ಕಾಂಪೌಂಡ್ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ಅಂಗನವಾಡಿಯಲ್ಲಿ 122 ವಿದ್ಯಾರ್ಥಿಗಳು: ಕುಬಟೂರು ಗ್ರಾಮದಲ್ಲಿರುವ ಶಾಲೆಗೆ ಹೊಂದಿಕೊಂಡಿರುವ ಅಂಗನವಾಡಿ ಯಲ್ಲಿ 52, ಆಂಜನೇಯ ದೇವಸ್ಥಾನ ಎದುರಿನಲ್ಲಿರುವ ಅಂಗನವಾಡಿಯಲ್ಲಿ 70, ಒಟ್ಟು ಎರಡು ಅಂಗನವಾಡಿಗಳಿಂದ 122 ಮಕ್ಕಳು ದಾಖಾಲಾಗಿದ್ದು, ಈ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕುಬಟೂರಿನ ಸರ್ಕಾರಿ ಶಾಲೆಯಲ್ಲೇ ಎಲ್‍ಕೆಜಿ, ಯುಕೆಜಿ ಪ್ರಾರಂಭ ಮಾಡಬೇಕು ಎಂಬುವುದು ಪೋಷಕರ ಒತ್ತಾಯ.

ಶಾಲೆಗೆ ಬೇಕಾಗಿರುವ ಆಧುನಿಕ ಸವಲತ್ತುಗಳು: ಸುಸಜ್ಜಿತ ಕೊಠಡಿಗಳು, ಆಟದ ಮೈದಾನ, ಸ್ಮಾರ್ಟ್ ಕ್ಲಾಸ್, ಇಂಗ್ಲಿಷ್ ಮಾಧ್ಯಮ, ಎಲ್‍ಕೆಜಿ, ಯುಕೆಜಿ, ಶಾಲೆಯ ಮುಂಭಾಗ ಎತ್ತರದ ಕಾಂಪೌಂಡ್ ಸೇರಿ ಹಲವು ಆಧುನಿಕ ಸವಲತ್ತುಗಳನ್ನು ಶಾಲೆಗೆ ಒದಗಿಸಲು ಸರ್ಕಾರ ಮುಂದಾಗಬೇಕು ಎಂಬುದು ಸ್ಥಳೀಯರ ಆಗ್ರಹ.

‘ಶಾಲೆಯಲ್ಲಿ ಆರು ಶಿಕ್ಷಕಿಯರು ಇದ್ದು, ಮಕ್ಕಳಿಗೆ ಪ್ರೀತಿ, ವಿಶ್ವಾಸದಿಂದ ಹಾಗೂ ಉತ್ಸಾಹದಿಂದ ಪಾಠ ಹೇಳಿಕೊಡುತ್ತಾರೆ. ಹಾಗಾಗಿ, ಗ್ರಾಮದ ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಕಳುಹಿಸದೆ ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ ಸಿಗುವುದರಿಂದ ಆಧುನಿಕ ತಂತ್ರಜ್ಞಾನದ ಆಳವಡಿಕೆ ಇಲ್ಲದಿದ್ದರೂ ಶಾಲೆಯ ದಾಖಲಾತಿ ಕಡಿಮೆಯಾಗಿಲ್ಲ’ ಎನ್ನುತ್ತಾರೆ ಎಸ್‍ಡಿಎಂಸಿ ಸದಸ್ಯರು.

ಶಾಲೆಯ 150 ವರ್ಷ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ಹಮ್ಮಿಕೊಳ್ಳುವ ಸಲುವಾಗಿ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಹಾಗೂ ದಾನಿಗಳು ಸಹಕಾರ ನೀಡಲು ಮುಂದಾಗಬೇಕು ಎಂದು ಎಸ್‍ಡಿಎಂಸಿ ಸದಸ್ಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT