ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಸೌಲಭ್ಯ ಕಾಣದ ಸರ್ಕಾರಿ ಶಾಲೆಗಳು

Published 31 ಜುಲೈ 2023, 7:02 IST
Last Updated 31 ಜುಲೈ 2023, 7:02 IST
ಅಕ್ಷರ ಗಾತ್ರ

ನಾಗರಾಜ್ ಹುಲಿಮನೆ

ಶಿವಮೊಗ್ಗ: ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ಕಾರಣಕ್ಕೆ ಸಮಾಜದ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರಿ ಶಾಲೆಗಳ ಗುರಿ. ಆದರೆ, ದಶಕದಿಂದ ಜಿಲ್ಲೆಯ ಅನೇಕ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣದೆ, ಹಿಂದುಳಿದಿವೆ.

ಜಿಲ್ಲೆಯಲ್ಲಿ 902 ಕಿರಿಯ ಪ್ರಾಥಮಿಕ, 935 ಹಿರಿಯ ಪ್ರಾಥಮಿಕ ಹಾಗೂ 164 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 2,001 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಬಹುತೇಕ ಶಾಲೆಗಳೂ ಮೂಲ ಸೌಕರ್ಯದ ಕೊರತೆ ಎದುರಿಸುತ್ತಿವೆ.

ಈ ನಿಟ್ಟಿನಲ್ಲಿ ಜಿಲ್ಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಿಗೆ ಹೆಚ್ಚುವರಿ ಶಿಕ್ಷಕರು ಹಾಗೂ ಕೊಠಡಿ ವ್ಯವಸ್ಥೆ, ಗ್ರಂಥಾಲಯ ವ್ಯವಸ್ಥೆ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ, ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸರ್ಕಾರ ಒತ್ತು ನೀಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಪಠ್ಯ ಚಟುವಟಿಕೆಗಳು ಕುಂಟುತ್ತ ಸಾಗುತ್ತಿವೆ. ಇದನ್ನು ಮನಗಂಡ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಲು ಮುಂದಾಗುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಇಳಿಕೆ ಕಾಣುತ್ತಿದೆ. 10 ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕ್ರಮೇಣ ಕಡಿಮೆ ಆಗಿದೆ.

ಜಿಲ್ಲೆಯ ಎಲ್ಲ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ಜರುಗಿಸಲಾಗಿದೆ. ಜಿಲ್ಲೆಯ ಪ್ರೌಢಶಾಲೆಗಳಿಗೆ 141, ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಿಗೆ 1,031 ಶಿಕ್ಷಕರನ್ನು ನೇಮಿಸಿ ಆದೇಶಿಸಲಾಗಿದೆ. ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ 460 ಶಿಕ್ಷಕರನ್ನು ಅವಶ್ಯಕತೆಗೆ ಅನುಗುಣವಾಗಿ ನೇಮಿಸಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಮಾತ್ರ ಗುಣಮಟ್ಟದ ಶಿಕ್ಷಣ ಎಂಬ ಕಲ್ಪನೆ ಸಮಾಜದಲ್ಲಿ ಬೇರು ಬಿಟ್ಟಿದೆ. ಅದು ಬದಲಾಗಿ, ಸರ್ಕಾರಿ ಶಾಲೆಗಳಲ್ಲಿಯೂ ಉತ್ತಮ ಶಿಕ್ಷಣಕ್ಕೆ ಆದ್ಯತೆ ಇದೆ ಎಂಬ ಸಂದೇಶವನ್ನು ಅಭಿವೃದ್ಧಿ ಮೂಲಕ ಸರ್ಕಾರ ಸಾರಬೇಕಿದೆ.

ಕುಂಸಿ: ಕೊಠಡಿಗಳ ಸಮಸ್ಯೆ ತೀವ್ರ

ಇರುವ ನಾಲ್ಕು ಕೊಠಡಿಯಲ್ಲಿ ಏಳು ತರಗತಿಗಳನ್ನು ನಡೆಸಬೇಕು, ಮಳೆ ಬಂದರೆ ಆ ಕೊಠಡಿಗಳು ಸೋರುತ್ತಿವೆ.

ಇದು ಇಲ್ಲಿನ ಹಳೆ ಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಸ್ಯೆ.

1ರಿಂದ 7ನೇ ತರಗತಿ ನಡೆಸಲು ಕನಿಷ್ಠ ಏಳು ಕೊಠಡಿಗಳಾದರೂ ಬೇಕು. ಆದರೆ, ಇಲ್ಲಿ ಇರುವುದು ನಾಲ್ಕೇ ಕೊಠಡಿ. ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗೆ ಅಥವಾ ರಂಗಮಂದಿರದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ.ಮುಖ್ಯ ಶಿಕ್ಷಕರ ಕೊಠಡಿಯನ್ನು ಎರಡು ಭಾಗಗಳನ್ನಾಗಿ ಮಾಡಿ ಬೋಧಿಸುತ್ತಿದ್ದಾರೆ.

ಪಂಚಾಯಿತಿ ಅನುದಾನದಿಂದ ಶಾಲೆಗೆ ಸುಣ್ಣ-ಬಣ್ಣ ಆಗಿದೆ. ಆದರೆ, ಶಾಲೆಯ ಕಿಟಕಿ ಹಾಗೂ ಬಾಗಿಲುಗಳು ಸರಿಯಿಲ್ಲದೆ ಶಾಲೆಯ ವಸ್ತುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಶಾಲೆಯ ಅಡುಗೆಮನೆಯ ನೆಲ ಸಂಪೂರ್ಣ ಕಿತ್ತು ಹೋಗಿದ್ದು ಅಡುಗೆ ಮಾಡಲು ಕಷ್ಟವಾಗುತ್ತಿದೆ ಎನ್ನುತ್ತಾರೆ ಶಾಲೆಯ ಬಿಸಿಯೂಟ ತಯಾರಕರು.

ಇತ್ತ ಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷ ಪೂರೈಸುತ್ತಿದ್ದು, ಸುಣ್ಣ– ಬಣ್ಣ ಆಗಿದೆ. ಕೊಠಡಿಗಳ ಕಿಟಕಿಗಳು, ಬಾಗಿಲುಗಳು ಸರಿಯಿಲ್ಲದೆ ಶಾಲೆಯಲ್ಲಿನ ವಸ್ತುಗಳಿಗೆ ಯಾವುದೇ ರಕ್ಷಣೆ ಇಲ್ಲದಾಗಿದೆ. ಸಮೀಪದ ಶೆಟ್ಟಿಕೆರೆಯ ಸರ್ಕಾರಿ ಪ್ರೌಢಶಾಲೆಯ ಚಾವಣಿಯು ಸೋರುತ್ತಿದೆ.

ಒಡೆದ ಹೆಂಚು; ಮಳೆ ಹನಿ ನಡುವೆ ಪಾಠ

ತುಮರಿ: ದ್ವೀಪದ ಕರೂರು, ಬಾರಂಗಿ ಹೋಬಳಿಯ ಹಲವು ಶಾಲೆಗಳಲ್ಲಿ ಶಾಲೆಗಳಲ್ಲಿ ಮೂಲ ಸೌಕರ್ಯದ ಕೊರತೆ ಇರುವುದರಿಂದ ಶೈಕ್ಷಣಿಕ ಪ್ರಗತಿಗೆ ಅಡ್ಡಿಯುಂಟಾಗಿದೆ.

ಹಲವು ಶಾಲೆಗಳ ಕಟ್ಟಡಗಳು ಮಳೆಗಾಲದಲ್ಲಿ ಸೋರುವ ದುಸ್ಥಿತಿಗೆ ತಲುಪಿದ್ದು ಬಿರುಕು ಬಿಟ್ಟಿರುವ ಶಾಲೆಯ ಗೋಡೆಗಳು, ಒಡೆದಿರುವ ಹೆಂಚುಗಳು. ಮಳೆಯ ಹನಿ ನಡುವೆ ಮಕ್ಕಳು ಪಾಠ ಆಲಿಸುವ ದಯನೀಯ ಸ್ಥಿತಿ ಇನ್ನು ಇದೆ.

ಬಾರಂಗಿ ಹೋಬಳಿಯ ಕೊಂಜವಳ್ಳಿ, ಬಾನುಕುಳಿ ಗ್ರಾಮದ ಬಿಳಿಗಾರು ಶಾಲೆಗಳ ಕಟ್ಟಡಗಳು ಬಳಕೆಗೆ ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.

ಕಟ್ಟಿನಕಾರು ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವೂ ಶಿಥಿಲಾವಸ್ಥೆ ತಲುಪಿದೆ. ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಬಾಲಕಿಯರ ವಸತಿ ನಿಲಯದ ಕಟ್ಟಡ ಸಹ ಮಳೆಗೆ ಸೋರುತ್ತಿದೆ.

ಕಾಯಂ ಶಿಕ್ಷಕರ ಕೊರತೆ: ಅವಳಿ ಹೋಬಳಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಲಭ್ಯತೆ ಇಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕಡಿಮೆಯಾಗಿದೆ.

ಸರ್ಕಾರಿ ಶಾಲೆ ಮುಚ್ಚುವ ಆತಂಕ

ಹೊಳೆಹೊನ್ನೂರು: ಸುತ್ತಮುತ್ತಲಿನ ಶಾಲೆಗಳಲ್ಲಿ ಉತ್ತಮ ವಾತಾರಣವಿದೆ. ಗ್ರಾಮೀಣ ಪ್ರದೇಶವಾಗಿದ್ದರಿಂದ ಉತ್ತಮವಾದ ಕಟ್ಟಡ, ವಿಶಾಲವಾದ ಮೈದಾನ, ಶೌಚಾಲಯ, ಶಿಕ್ಷಕರು ಹೊಂದಿದ್ದರೂ, ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಪಾಲಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಆಸಕ್ತಿಯ ಕೊರತೆಯಿಂದಾಗಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಸರ್ಕಾರ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಪುಸ್ತಕಗಳನ್ನು ಉಚಿತವಾಗಿ ನೀಡುವುದರ ಜೊತೆಗೆ ಎಲ್ಲಾ ರೀತಿಯ ಸೌಲಭ್ಯ ಒದಗಿಸಿದ್ದರೂ ಪಾಲಕರು ಮಾತ್ರ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ಶಾಲೆಗಳು ಮುಚ್ಚುವ ಆತಂಕ ಎದುರಾಗಿದೆ.

ಶಾಲೆಗೆ ಶೌಚಾಲಯ ಕಲ್ಪಿಸಿ

ರಿಪ್ಪನ್ ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳಲೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 55 ವಿದ್ಯಾರ್ಥಿಗಳಿರುವ ಈ ಶಾಲೆಯಲ್ಲಿ ಶೌಚಾಲಯದ ಕೊರತೆ ಇದೆ.

ಹಳೆಯದಾಗಿರುವ ಮೂರುಕಲು ಶೌಚಾಲಯ ಬಳಕೆಗೆ ಯೋಗ್ಯವಾಗಿಲ್ಲ. ಆರ್‌ಸಿಸಿ ನಿರ್ಮಿತ ಕೊಠಡಿಗಳು ಮಳೆಗೆ ಸೋರುತ್ತಿವೆ. ಅದರಲ್ಲಿಯೇ ಪಾಠ– ಪ್ರವಚನಗಳು ನಡೆಯುತ್ತಿವೆ. ಸ್ಥಳೀಯ ಶಾಲಾ ಅಭಿವೃದ್ಧಿ ಸಮಿತಿ ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

ದುರಸ್ತಿಗೆ ಕಾದಿರುವ ಸರ್ಕಾರಿ ಶಾಲೆಗಳ ಕೊಠಡಿಗಳು

ಸಾಗರ: ತಾಲ್ಲೂಕು ವ್ಯಾಪ್ತಿಯಲ್ಲಿ ಹೆಚ್ಚು ಮಳೆಯಾಗುವ ಬೆಟ್ಟ ಗುಡ್ಡಗಳಿಂದ ಕೂಡಿರುವ ಹಳ್ಳಿಗಳಿವೆ. 4ರಿಂದ 5 ಕಿ.ಮೀಗೂ ಹೆಚ್ಚಿನ ದೂರದಿಂದ ಹಳ್ಳಿಗಳಲ್ಲಿನ ಸರ್ಕಾರಿ ಶಾಲೆಗಳಿಗೆ ದುರ್ಗಮ ಹಾದಿಯನ್ನು ಕ್ರಮಿಸಿ ಬರುವ ಮಕ್ಕಳಿದ್ದಾರೆ. ತಾಲ್ಲೂಕಿನಲ್ಲಿ ಸರ್ಕಾರದ 298 ಪ್ರಾಥಮಿಕ 21 ಫ್ರೌಢಶಾಲೆಗಳಿವೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 30486 ಮಕ್ಕಳು ಓದುತ್ತಿದ್ದಾರೆ.

ಈ ವರ್ಷ ಶಿಕ್ಷಣ ಇಲಾಖೆ 168 ಕೊಠಡಿಗಳನ್ನು ದುರಸ್ತಿ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಿದೆ. ಕೆಲವು ಶಾಲೆಗಳ ಚಾವಣಿ ಕುಸಿಯುವ ಹಂತದಲ್ಲಿದೆ. ಈಚೆಗೆ ಮುಳುಕೇರಿ ಗ್ರಾಮದಲ್ಲಿ ಗ್ರಾಮಸ್ಥರು ಈ ಸಂಬಂಧ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಮಾರ್ಕೆಟ್ ರಸ್ತೆಯ ಹಳೆಯ ಸಂತೆ ಮೈದಾನಕ್ಕೆ ಹೊಂದಿಕೊಂಡಂತೆ ಇರುವ ಸರ್ಕಾರಿ ಶಾಲೆ ಕಟ್ಟಡ ಶಿಥಿಲವಾಗಿದ್ದು ಅದರಲ್ಲೇ ತರಗತಿಗಳು ನಡೆಯುತ್ತಿವೆ.

ಕಾನೂರು ಶಿಗ್ಳು ಕಟ್ಟಿನಕಾರು ಹೆನ್ನಿ ಮೊದಲಾದ ಗ್ರಾಮಗಳ ಶಾಲೆಗಳಲ್ಲಿ ಹೊಸದಾಗಿ ಅಡುಗೆ ಕೋಣೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಉಳ್ಳೂರು ತಲವಾಟ ತ್ಯಾಗರ್ತಿ ಚನ್ನಗೊಂಡ ಅರಳಗೋಡು ಸೇರಿದಂತೆ 21 ಶಾಲೆಗಳ ಅಡುಗೆ ಕೋಣೆ ದುರಸ್ತಿಗೆ ಇಲಾಖೆ ಪ್ರಸ್ತಾವನೆ ಕಳಿಸಿದೆ. ಕೆಲವೆಡೆ ಶೌಚಾಲಯಗಳ ಸ್ಥಿತಿ ಉತ್ತಮವಾಗಿಲ್ಲ. ಆಟದ ಮೈದಾನವಿಲ್ಲದ ಶಾಲೆಗಳು ಸಹ ಹಲವು ಸಂಖ್ಯೆಗಳಲ್ಲಿವೆ. ಜಾಗದ ಮಾಲಿಕತ್ವವೇ ಇಲ್ಲದ ಶಾಲೆಗಳೂ ಇವೆ. 283 ಶಿಕ್ಷಕರ ಕೊರತೆ ಇದೆ. 250 ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಶಿಕ್ಷಕರ ಕೊರತೆ ತುಂಬುವ ಪ್ರಯತ್ನ ನಡೆದಿದೆ.

ಹೋಬಳಿ ಮಟ್ಟದಲ್ಲಿ ಸರ್ಕಾರಿ ಶಾಲೆಗೆ ಬೇಡಿಕೆ

ತೀರ್ಥಹಳ್ಳಿ: ಗ್ರಾಮೀಣ ಭಾಗದಲ್ಲಿ ಶೂನ್ಯ ಏಕ ಶಿಕ್ಷಕ ಶಾಲೆಯ ಗೋಳು ಶೋಚನೀಯ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಹೋಬಳಿ ಮಟ್ಟದಲ್ಲಿ ಒಂದು ಸರ್ಕಾರಿ ಶಾಲೆ ಆರಂಭಿಸಬೇಕು ಎಂಬ ಬೇಡಿಕೆ ಈ ಭಾಗದಲ್ಲಿದೆ. ತಾಲ್ಲೂಕಿನಲ್ಲಿ ಒಂದು ಪಟ್ಟಣ ಪಂಚಾಯಿತಿ 38 ಗ್ರಾಮ ಪಂಚಾಯಿತಿ 247 ಗ್ರಾಮ 1850ಕ್ಕೂ ಹೆಚ್ಚು ಮಜಿರೆ ಹಳ್ಳಿಗಳಿವೆ. ಇದಕ್ಕೆ ಹೊಂದಿಕೊಂಡಂತೆಯೇ ಸರ್ಕಾರದ 85 ಕಿರಿಯ 116 ಹಿರಿಯ ಪ್ರಾಥಮಿಕ 27 ಪ್ರೌಢಶಾಲೆ 28 ಖಾಸಗಿ ಶಾಲೆಗಳಿವೆ.

ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ದಾಖಲಾತಿ ಕುಂಠಿತಗೊಳ್ಳುತ್ತಿದೆ. ಇಂಗ್ಲಿಷ್ ಮಾಧ್ಯಮ ಮತ್ತು ಕೋವಿಡ್ ಆರ್ಥಿಕ ಹಿಂಜರಿತದ ಪರಿಣಾಮ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿದೆ. ಆದರೆ ಮೂಲಸೌಕರ್ಯ ಇಲ್ಲದ ಕಾರಣ ಪಾಲಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಸೀಬಿನಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ ಕೊಠಡಿ ಸಂಖ್ಯೆ ಕಡಿಮೆ ಇದ್ದು ಪಾಠಕ್ಕೆ ತೊಂದರೆಯಾಗುತ್ತಿದೆ. ಕಡೇಮಕ್ಕಿ ಹೊಸಕೆರೆ ನೊಣಬೂರು ಕೋಗಿಲೆ ಮಾಳೂರು ಬೆಜ್ಜವಳ್ಳಿ ಮಹಿಷಿ ದಬ್ಬಣಗದ್ದೆ ಕುಡುವಳ್ಳಿ ಟೆಂಕಬೈಲು ಆರಗ ಹಿರೇಗದ್ದೆ ಕಡೇಗದ್ದೆ ಅಗಳಬಾಗಿಲು ಶಿರುಪತಿ ಬೀಸನಗ್ರಾಮ ಸಂಕದಹೊಳೆ ಖಂಡಕ ಬುಕ್ಲಾಪುರ ಮಳಲೀಮಕ್ಕಿ ಮುಂತಾದ ಶಾಲೆಗಳಲ್ಲಿ ಚಾವಣಿ ಸೋರಿಕೆ ತರಗತಿ ಮತ್ತು ಶೌಚಾಲಯದ ಕೊಠಡಿಗಳು ಶಿಥಿಲ ಕಾರಿಡಾರ್‌ ಸೋರಿಕೆ ಅಡುಗೆ ಕೋಣೆ ಸೋರಿಕೆ ಕೊಠಡಿಯಲ್ಲಿ ಬಿರುಕಿನಂತಹ ಸಮಸ್ಯೆಗಳಿವೆ.

ತೀರ್ಥಹಳ್ಳಿಯಲ್ಲಿ ಒಟ್ಟು 450ಕ್ಕೂ ಹೆಚ್ಚು ಶಿಕ್ಷಕರಿದ್ದಾರೆ. 136ರಷ್ಟು ಕಾಯಂ ಶಿಕ್ಷಕರ ಕೊರತೆ ಇದ್ದು 123 ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. 15 ಶಾಲೆಗಳಲ್ಲಿ ಶಿಕ್ಷಕರೇ ಇರಲಿಲ್ಲ. ಅಂತಹ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆದರೆ ಅಂತಹ ಶಿಕ್ಷಕರಿಗೆ ಪಾಠದ ಜವಾಬ್ದಾರಿಗಿಂತ ಸರ್ಕಾರದ ವಿವಿಧ ಜವಾಬ್ದಾರಿ ನಿರ್ವಹಿಸುವುದು ದೊಡ್ಡ ಸವಾಲಾಗಿದೆ.

ಜನಗಣತಿ ಚುನಾವಣೆ ಬಿಸಿಯೂಟ ಕ್ರೀಡೆ ಪ್ರತಿಭಾ ಕಾರಂಜಿ ಮುಂತಾದ ಹೆಚ್ಚುವರಿ ಜವಾಬ್ದಾರಿ ಹೊಣೆ ಇದ್ದು ಸಮರ್ಪಕ ಶಿಕ್ಷಣಕ್ಕೆ ಒತ್ತು ನೀಡಲು ಸಾಧ್ಯವಾಗುತ್ತಿಲ್ಲ. ಗ್ರಾಮ ಮಟ್ಟದಲ್ಲಿ ಸರ್ಕಾರಿ ಶಾಲೆಗಳಿದ್ದು ವಿಷಯಾಧಾರಿತ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿಲ್ಲ. ಒಬ್ಬ ಶಿಕ್ಷಕರು ಎಲ್ಲಾ ವಿಷಯದ ಕುರಿತು ಪಾಠ ಮಾಡಬೇಕಾದ ದುಸ್ಥಿತಿ ಸರ್ಕಾರಿ ಶಾಲೆಗಳಲ್ಲಿದೆ. ಪಠ್ಯ ಪಠ್ಯೇತರ ಚಟುವಟಿಕೆಗಳ ನುರಿತ ಶಿಕ್ಷಕರ ಅಗತ್ಯ ಇದೆ ಎನ್ನುತ್ತಾರೆ ಉದ್ಯಮಿ ಅಭಿಷೇಕ್‌ ನಾಯರ್.

ಶಿಥಿಲಗೊಂಡಿವೆ ಶಾಲೆಗಳ ಕಟ್ಟಡ

ಶಿಕಾರಿಪುರ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ. ವಿದ್ಯಾರ್ಥಿಗಳ ಜ್ಞಾನರ್ಜನೆಗೆ ಪೂರಕವಾಗುವ ಬದಲು ಮಾರಕವಾಗುವ ಹಂತದಲ್ಲಿ ಶಾಲಾ ಕಟ್ಟಡಗಳು ಇವೆ. ಪ್ರಸ್ತುತ ತಾಲ್ಲೂಕಿನ ಕೆಲವು ಶಾಲೆಗಳ ಕಟ್ಟಡಗಳು ಶಿಥಿಲಗೊಂಡಿವೆ.

ಮಳೆಗಾಲದಲ್ಲಿ ಶಿಥಿಲಗೊಂಡ ಕಟ್ಟಡಗಳಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಬೇಕಾಗಿದೆ. ತಾಲ್ಲೂಕಿನ ಈಸೂರು ಬೇಗೂರು ಶಿರಾಳಕೊಪ್ಪ ಪಟ್ಟಣ ಸುಣ್ಣದಕೊಪ್ಪ ಜಾವಗಟ್ಟಿ ಹಿರೇಜಂಬೂರು ಬಾಳೆಕೊಪ್ಪ ಭದ್ರಾಪುರ ಬೋಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಶಾಲೆಯ ಕೊಠಡಿಗಳು ಶಿಥಿಲಗೊಂಡಿವೆ.

ಕಟ್ಟಡಗಳು ಶಿಥಿಲಗೊಂಡ ಮಾಹಿತಿಯನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ನೀಡಿದ್ದು ಶೀಘ್ರ ಶಾಲಾ ಕೊಠಡಿ ನಿರ್ಮಾಣವಾಗಬೇಕಾಗಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಹೆಚ್ಚು ಅನುದಾನ ನೀಡಬೇಕು ಎಂಬುದು ಶಾಲಾಭಿವೃದ್ಧಿ ಸಮಿತಿ ಸದಸ್ಯರ ಒತ್ತಾಯ.

ಸೊರಬ: ದುಃಸ್ಥಿತಿಯಲ್ಲಿ ಶಾಲಾ ಕಟ್ಟಡ

ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು ಪಾಠ– ಪ್ರವಚನ ಕೇಳಲು ಪೂರಕ ವಾತಾವರಣವಿಲ್ಲ ಎಂಬ ಆರೋಪವಿದೆ. ಕೆಲವು ಗ್ರಾಮಗಳಲ್ಲಿ ಕಟ್ಟಡಗಳಿದ್ದರೂ ಶೌಚಾಲಯ ವ್ಯವಸ್ಥೆ ಇಲ್ಲ. ಇದರಿಂದ ಮಕ್ಕಳು ಮೂತ್ರ ವಿಸರ್ಜನೆ ಕೂಡ‌ ಬಯಲಿನಲ್ಲಿ ಮಾಡುವ ಸ್ಥಿತಿ‌ ಎದುರಾಗಿದೆ.

ಬಿಸಿಯೂಟ ತಯಾರಿಸಲು ಅಡುಗೆ ಕೊಠಡಿಗಳಿಲ್ಲ. ಹೊಸದಾಗಿ ಕಟ್ಟಡ ನಿರ್ಮಿಸಿದರೆ ಅಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳು ಕಿರಿಕಿರಿ ಅನುಭವಿಸುವಂತಾಗಿದೆ. ಇನ್ನೂ ಕೆಲವು ಶಾಲೆಗಳಲ್ಲಿ ಗೋಡೆ ಬಿದ್ದರೆ ಕೆಲವು ಶಾಲೆಗಳಲ್ಲಿ ಕಿಟಕಿ ಬಾಗಿಲು ಮುರಿದಿವೆ.

ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡಗಳು ಸುಮಾರು ಅರ್ಧ ಶತಮಾನ ಕಳೆದಿವೆ. ಒಟ್ಟು 93 ಶಾಲೆಗಳು ಮಳೆ ಬಂದರೆ ಸೋರುತ್ತಿವೆ. 10 ಶಾಲೆಗಳಲ್ಲಿ ಶೌಚಾಲಯವಿಲ್ಲ. ಮೂರು ಶಾಲೆಗಳಲ್ಲಿ ‌ಬಿಸಿಯೂಟಕ್ಕೆ ಅಡುಗೆ‌‌ ಕೋಣೆ ಇಲ್ಲ. ಇವುಗಳ ನಿರ್ಮಾಣಕ್ಕೆ ‌ಹಾಗೂ ದುರಸ್ತಿಗಾಗಿ ಇಲಾಖೆ ವತಿಯಿಂದ ₹ 3 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸತ್ಯನಾರಾಯಣ ತಿಳಿಸಿದರು.

ಹೊಸನಗರ ತಾಲ್ಲೂಕಿಗೆ ವರ್ಗಾವಣೆ ಪ್ರಕ್ರಿಯೆಯೇ ಶಾಪ

ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸಂಕಷ್ಟದಲ್ಲೇ ಮುಂದುವರೆದಿದೆ.  ಇಲ್ಲಿನ ಹಲವು ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಶಿಕ್ಷಕರ ಸಮಸ್ಯೆ ಕಾಡಿದರೂ ನೇಮಕಾತಿ ಆಗುತ್ತಿಲ್ಲ. ಆಯಾ ಶಾಲೆಗೆ ನಿಯೋಜನೆ ಮಾಡುತ್ತ ಕೊರತೆಯನ್ನು ಸ್ವಲ್ಪ ಪ್ರಮಾಣದಲ್ಲಿ ನಿಭಾಯಿಸಲಾಗುತ್ತಿದೆ. ಶಾಲೆ ಆರಂಭದ ದಿನದಲ್ಲಿ 196 ಶಿಕ್ಷಕರ ಕೊರತೆ ಇದ್ದು ಅತಿಥಿ ಶಿಕ್ಷಕರ ನೇಮಕದಿಂದ ಸರಿದೂಗಿಸುವ ಪ್ರಯತ್ನ ನಡೆದಿದ್ದು ಇದೀಗ 40ಕ್ಕೂ ಹೆಚ್ಚು ಶಿಕ್ಷಕರ ಅಗತ್ಯ ಇದೆ.

ಶಿಕ್ಷಕರ ಕೊರತೆ ಸಮಸ್ಯೆಗೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಒಂದು ಶಾಪವಾಗಿದೆ. ಶಿಕ್ಷಕರು ವರ್ಗಾವಣೆ ಬಯಸಿ ಬೇರೆಡೆ ಹೋಗುತ್ತಾರೆ. ಬೇರೆಡೆಯಿಂದ ಶಿಕ್ಷಕರು ಬರುವುದಿಲ್ಲ ಎಂಬ ಆರೋಪವೂ ಇದೆ. ತಾಲ್ಲೂಕಿನ ಶಾಲೆಗಳಿಗೆ 50ಕ್ಕೂ ಹೆಚ್ಚು ಕೊಠಡಿಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. ಈ ಬಾರಿ ಮಳೆಗೆ ಶಾಲೆಗಳು ಸೋರುತ್ತಿವೆ. 40 ಶಾಲೆಗಳ ಕಟ್ಟಡಗಳು ಹಾನಿಗೊಳಗಾಗಿವೆ. ಬಿಸಿಯೂಟದ ಕೊಠಡಿಗಳು ದುಃಸ್ಥಿತಿ ತಲುಪಿವೆ.

ವರದಿಗಳು: ವರುಣ್ ಕುಮಾರ್.ಡಿ.ಬಿಲ್ಗುಣಿ, ಎಂ.ಸುಕುಮಾರ್, ಕುಮಾರ್ ಎಲ್. ಅಗಸನಹಳ್ಳಿ, ರಿ.ರಾ.ರವಿಶಂಕರ್

ಸೀಬಿನಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಕೊಠಡಿ ಸಂಖ್ಯೆ ಕಡಿಮೆ ಇದೆ
ಸೀಬಿನಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು ಕೊಠಡಿ ಸಂಖ್ಯೆ ಕಡಿಮೆ ಇದೆ
ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿರುವ ಶಾಲಾ ಕಟ್ಟಡ ಶಿಥೀಲಗೊಂಡಿರುವ ದೃಶ್ಯ
ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿರುವ ಶಾಲಾ ಕಟ್ಟಡ ಶಿಥೀಲಗೊಂಡಿರುವ ದೃಶ್ಯ
ಕುಂಸಿ ಸಮೀಪದ ಹಳೆಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಕುಂಸಿ ಸಮೀಪದ ಹಳೆಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಸೊರಬ ತಾಲ್ಲೂಕಿನ ಚೌಡಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯ
ಸೊರಬ ತಾಲ್ಲೂಕಿನ ಚೌಡಿಕೊಪ್ಪ ಗ್ರಾಮದ ಸರ್ಕಾರಿ ಶಾಲೆಯ ಶೌಚಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT