ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಪ್ರತಿನಿಧಿಗಳು ಕೀಳರಿಮೆಯಿಂದ ಹೊರಬನ್ನಿ: ಕೆ.ಎಸ್.ಈಶ್ವರಪ್ಪ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಕರೆ
Last Updated 26 ಆಗಸ್ಟ್ 2021, 9:36 IST
ಅಕ್ಷರ ಗಾತ್ರ

ಸಾಗರ: ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ತಾವು ಕೇವಲ ಒಂದು ಪಂಚಾಯಿತಿಗೆ ಸೀಮಿತ ಎಂಬ ಕೀಳರಿಮೆಯಿಂದ ಹೊರಬರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಬುಧವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿ ಸದಸ್ಯರು ಎಂದರೆ ಆಯಾ ಗ್ರಾಮದ ಮುಖ್ಯಸ್ಥರಿದ್ದಂತೆ. ಗ್ರಾಮದ ಆಗುಹೋಗುಗಳನ್ನು ನಿಭಾಯಿಸುವ ಮಹತ್ವದ ಜವಾಬ್ದಾರಿ ಅವರ ಹೆಗಲ ಮೇಲೆ ಇರುತ್ತದೆ. ಪ್ರತಿದಿನ ಪಂಚಾಯಿತಿ ಕಚೇರಿಗೆ ಭೇಟಿ ನೀಡುವುದನ್ನು ಪ್ರತಿನಿಧಿಗಳು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ತಾಲ್ಲೂಕಿನ ಆವಿನಹಳ್ಳಿ, ಕಸಬಾ ಹೋಬಳಿಗೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ₹ 120 ಕೋಟಿ ಮಂಜೂರಾಗಿದೆ. ಈ ಯೋಜನೆಯಿಂದ 333 ಹಳ್ಳಿಗಳ 52,307 ಜನರಿಗೆ ಪ್ರಯೋಜನವಾಗಲಿದೆ. ಶಾಸಕ ಹಾಲಪ್ಪ ಹರತಾಳು ಅವರು ಒತ್ತಾಸೆಯಿಂದ ಈ ಕಾಮಗಾರಿಗೆ ಮಂಜೂರಾತಿ ದೊರಕಿದೆ ಎಂದು ತಿಳಿಸಿದರು.

ಶಾಸಕ ಎಚ್.ಹಾಲಪ್ಪ ಹರತಾಳು, ‘ಪಂಚಾಯಿತಿಗೆ ಬರುವ ಅನುದಾನದಲ್ಲಿ ಹೆಚ್ಚಿನ ಪ್ರಮಾಣದ ಹಣ ಸಿಬ್ಬಂದಿ ವೇತನಕ್ಕೆ ಹೋಗುತ್ತಿದೆ. ಕೆಲವೊಂದು ಕರ್ತವ್ಯಕ್ಕೆ ಸೀಮಿತವಾಗಿರುವ ಪಂಚಾಯಿತಿ ಸಿಬ್ಬಂದಿ ಸೇವೆಯನ್ನು ಇತರ ಕೆಲಸಗಳಿಗೂ ಬಳಸಿಕೊಳ್ಳುವಂತಾಗಬೇಕು. ಆಗ ಮಾತ್ರ ಪಂಚಾಯಿತಿ ಆಡಳಿತ ಸುವ್ಯವಸ್ಥೆಗೊಳ್ಳುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಆನಂದಪುರ ಹೋಬಳಿಯ 8 ಗ್ರಾಮ ಪಂಚಾಯಿತಿ ವ್ಯಾಪ್ತಿಯ 127 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಅಂಬ್ಲಿಗೊಳ್ಳ ಜಲಾಶಯದಿಂದ ನೀರು ಹರಿಸುವ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಕಾಮಗಾರಿ ಮುಕ್ತಾಯಗೊಂಡ ನಂತರ ನೀರನ್ನು ವ್ಯವಸ್ಥಿತವಾಗಿ ಸರಬರಾಜು ಮಾಡುವ ಮುಖ್ಯವಾದ ಜವಾಬ್ದಾರಿ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಮೇಲೆ ಇದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ‘ಸರ್ಕಾರದ ಯೋಜನೆ, ಅನುದಾನಗಳು ಸದ್ಬಳಕೆ ಆಗಬೇಕಾದರೆ ಪಂಚಾಯಿತಿ ಪ್ರತಿನಿಧಿಗಳ ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಅತ್ಯಗತ್ಯ’ ಎಂದರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಜಯರಾಮ್, ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಕಳವೆ, ಪ್ರಮೋದ್ ಹೆಗಡೆ, ಎಂ.ಕೆ.ತೊದಲಬಾಗಿ, ಮನೋಜ್ ಕುಮಾರ್ ಇದ್ದರು. ಎಚ್.ಎಸ್.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT