ಶುಕ್ರವಾರ, ಏಪ್ರಿಲ್ 16, 2021
30 °C

ಮಲ್ಲಿಕಾರ್ಜುನ ಹಕ್ರೆ ರಾಜೀನಾಮೆಗೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ತಾಲ್ಲೂಕು ಪಂಚಾಯಿತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಮಾತ್ರವಲ್ಲದೆ ಸ್ವಪಕ್ಷೀಯ ಸದಸ್ಯರ ವಿಶ್ವಾಸವನ್ನೂ ಕಳೆದುಕೊಂಡಿರುವ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಅವರಿಗೆ ನೈತಿಕತೆ ಇದ್ದರೆ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ ಬಿಳಿಸಿರಿ ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದಲ್ಲಿ ಹಕ್ರೆಯವರು ಏಕಾಂಗಿಯಾಗಿದ್ದಾರೆ. ಹಿಂಬಾಗಿಲಿನ ಮೂಲಕ ಆಡಳಿತ ನಡೆಸುತ್ತಿರುವ ಅವರು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳುವ ಸಲುವಾಗಿ ಪದೇ ಪದೇ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಹೆಸರನ್ನು ಎಳೆದು ತರುತ್ತಿದ್ದಾರೆ’ ಎಂದು ಆರೋಪಿಸಿದರು.

ಶಾಸಕ ಹಾಲಪ್ಪ ಅವರು ಕಳೆದ ಎರಡೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ₹  450ಕೋಟಿ ಅನುದಾನ ತಂದಿದ್ದಾರೆ. ಅಭಿವೃದ್ಧಿ ಕುರಿತು ಶಾಸಕರು ಹಕ್ರೆಯವರಿಂದ ಪಾಠ ಕಲಿಯಬೇಕಿಲ್ಲ. ಅಭಿವೃದ್ಧಿಯ ಬಗ್ಗೆ ಹಕ್ರೆಗೆ ಕಿಂಚಿತ್ ಕಾಳಜಿ ಇದ್ದರೆ ತಮ್ಮ ಸ್ಥಾನದಲ್ಲಿ ಮುಂದುವರಿಯುತ್ತಿರಲಿಲ್ಲ. ಕಾಂಗ್ರೆಸ್‌ನವರೇ ತಮ್ಮನ್ನು ಕಡೆಗಣಿಸುತ್ತಿರುವುದನ್ನು ಸಹಿಸಿದೆಸ್ಥಿಮಿತ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕಲಸೆ ಚಂದ್ರಪ್ಪ, ‘ತಾಲ್ಲೂಕು ಪಂಚಾಯಿತಿಯ 15 ಸದಸ್ಯರ ಪೈಕಿ 10 ಸದಸ್ಯರು ಹಕ್ರೆ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನಾ ಸಭೆಯಲ್ಲಿ ಮತ ಚಲಾಯಿಸಿದ್ದಾರೆ. ಆದಾಗ್ಯೂ ಅವರು ಸ್ಥಾನದಲ್ಲಿ ಮುಂದುವರಿದಿರುವುದನ್ನು ನೋಡಿದರೆ ಅವರೊಬ್ಬ ಸೋಗಿನ ರಾಜಕಾರಣಿ ಎಂಬುದು ಸ್ಪಷ್ಟವಾಗುತ್ತದೆ’ ಎಂದು ದೂರಿದರು.

ತಾಲ್ಲೂಕು ಪಂಚಾಯಿತಿ ಆಡಳಿತದಲ್ಲಿ ಶಾಸಕ ಹಾಲಪ್ಪ ಅವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಕ್ರೆಯವರ ಮೇಲೆ ವಿಶ್ವಾಸವಿಲ್ಲದ ಕಾರಣ ಸದಸ್ಯರು ಸಭೆಗೆ ಹಾಜರಾಗುತ್ತಿಲ್ಲ. ಅವರು ರಾಜೀನಾಮೆ ನೀಡಿದರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸುವರ್ಣ ಟೀಕಪ್ಪ, ರಘುಪತಿ ಭಟ್, ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ‘ಅಧ್ಯಕ್ಷ ಹಕ್ರೆ ಹಾಗೂ ಉಪಾಧ್ಯಕ್ಷ ಅಶೋಕ್ ಬರದವಳ್ಳಿ ಹೊರತುಪಡಿಸಿ ಉಳಿದ 13 ಸದಸ್ಯರ ಪೈಕಿ ಯಾರೇ ಅಧ್ಯಕ್ಷರಾದರೂ ಸಭೆಗೆ ಹಾಜರಾಗಲು ನಾವು ಸಿದ್ಧರಿದ್ದೇವೆ. ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆದರೆ ಕೋರಂ ದೊರಕುವುದಿಲ್ಲ ಎಂಬ ವಿಷಯ ಗೊತ್ತಿದ್ದರೂ ಕಾರ್ಯನಿರ್ವಹಣಾಧಿಕಾರಿ ಮೇಲೆ ಒತ್ತಡ ತಂದು ಸಭೆ ಆಯೋಜಿಸುವ ಮೂಲಕ ಹಕ್ರೆ ನಗೆಪಾಟಲಿಗೆ ಈಡಾಗಿದ್ದಾರೆ’ ಎಂದು ಟೀಕಿಸಿದರು.

ಪ್ರಮುಖರಾದ ಗೌತಮ್ ಕೆ.ಎಸ್., ಅಕ್ಷತಾ ಪ್ರಸನ್ನ, ಶ್ವೇತಾ ಮಂಜುನಾಥ್, ರೂಪಾ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.