ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ಬಿಸಿಲಿನ ತಾಪ; ಮುಂಜಾನೆಯೇ ಮತಗಟ್ಟೆಗೆ ಬಂದ ಮತದಾರರು

Published 7 ಮೇ 2024, 14:45 IST
Last Updated 7 ಮೇ 2024, 14:45 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನಲ್ಲಿ ಲೋಕಸಭೆ ಚುನಾವಣೆಗೆ ಮಂಗಳವಾರ ಮತದಾನ ಸಂಪೂರ್ಣ ಶಾಂತಿಯುತವಾಗಿ ನಡೆಯಿತು. ಕೆಲವು ಮತಗಟ್ಟೆಗಳಲ್ಲಿ ಬೆಳಗಿನ ಅವಧಿಯಲ್ಲಿ ಕೆಲಕಾಲ ಮತಯಂತ್ರ ಕೈಕೊಟ್ಟಿದ್ದು ಬಿಟ್ಟರೆ ಉಳಿದಂತೆ ಮತದಾನ ಪ್ರಕ್ರಿಯೆ ಸುಗಮವಾಗಿ ನಡೆಯಿತು.

ಬಿಸಿಲಿನ ತಾಪ ಹೆಚ್ಚಿರುವ ಕಾರಣಕ್ಕೆ ಬೆಳಗಿನ ವೇಳೆ ಮತಗಟ್ಟೆಗೆ ಮತದಾರರು ಹೆಚ್ಚಾಗಿ ಬಂದು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೆ ಮತದಾನದ ಪ್ರಮಾಣ ಇಳಿಕೆಯಾಗಿದ್ದು ಸಂಜೆ 4ರ ನಂತರ ಮತ್ತೆ ಮತಗಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡುಬಂದರು.

ತಾಲ್ಲೂಕಿನ ಕಣ್ಣೂರು ಹಾಗೂ ಹಿರೇಹಾರಕ ಗ್ರಾಮದ ಮತಗಟ್ಟೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಮತಯಂತ್ರ ಕೈಕೊಟ್ಟ ಕಾರಣ ಮತದಾನ ವಿಳಂಬವಾಯಿತು. ನಂತರ ತಾಲ್ಲೂಕು ಆಡಳಿತದ ವತಿಯಿಂದ ಯಂತ್ರಗಳನ್ನು ದುರಸ್ತಿಗೊಳಿಸಿದ್ದರಿಂದ ಮತದಾನ ಸುಗಮವಾಗಿ ನಡೆಯಿತು.

ತಾಲ್ಲೂಕಿನ ಬೇಳೂರು ಗ್ರಾಮದ ಮತಗಟ್ಟೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ತಮ್ಮ ಪತ್ನಿ, ಪುತ್ರನೊಂದಿಗೆ ಮತ ಚಲಾಯಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿವಮೊಗ್ಗ ಕ್ಷೇತ್ರದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆದಿದೆ. ಮೂರು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಸೋಲುಣಿಸಲಿದ್ದಾರೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿ ಮುಖಂಡರು ಶಿವಮೊಗ್ಗ ಕ್ಷೇತ್ರದಲ್ಲಿ ಭಾರೀ ಅಭಿವೃದ್ಧಿಯಾಗಿದೆ ಎಂದು ಪ್ರಚಾರ ಮಾಡಿದ್ದಾರೆ. ಆದರೆ, ಅಭಿವೃದ್ಧಿಯಾಗಿರುವುದು ಯಡಿಯೂರಪ್ಪ ಅವರ ಕುಟುಂಬದ ಆಸ್ತಿ ಮಾತ್ರ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕಾಂಗ್ರೆಸ್ ಮೊದಲ ಬಾರಿಗೆ ಶಿವಮೊಗ್ಗ ಕ್ಷೇತ್ರದಲ್ಲಿ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿದ್ದು ಗ್ಯಾರಂಟಿ ಯೋಜನೆಗಳ ಫಲವಾಗಿ ಕಾಂಗ್ರೆಸ್‌ನ ಗೆಲುವು ಖಚಿತ’ ಎಂದು ತಿಳಿಸಿದರು.

ತಾಲ್ಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಬಿಜೆಪಿ ಕಾರ್ಯಕರ್ತರ ಜೊತೆ ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಸಮಾಲೋಚನೆ ನಡೆಸಿದ್ದರು. ಆನಂದಪುರಂನ ಮತಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಜನರ ಆಶಯದ ಜೊತೆಗೆ ಸಂಸದರಾಗಿ ಮಾಡಿರುವ ಅಭಿವೃದ್ಧಿ ಕೆಲಸಗಳು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವಿಗೆ ಸಹಕಾರಿಯಾಗಲಿದೆ’ ಎಂದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ತಮ್ಮ ಪತ್ನಿ ದೀಪಾ ಅವರೊಂದಿಗೆ ಮತ ಚಲಾಯಿಸಿದರು. ಮತಗಟ್ಟೆಗಳ ಸಮೀಪ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಐದು ಗ್ಯಾರಂಟಿ ಯೋಜನೆಗಳನ್ನೇ ಪ್ರಸ್ತಾಪಿಸಿ ಪ್ರಮುಖವಾಗಿ ಮತ ಯಾಚಿಸುತ್ತಿದ್ದರೆ, ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹೆಸರು ಹಾಗೂ ಬಿ.ವೈ.ರಾಘವೇಂದ್ರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಹೇಳುತ್ತ ಮತ ಕೇಳುತ್ತಿರುವ ದೃಶ್ಯ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT