ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಾ ಪ್ರವಾಹ: ಶಿವಮೊಗ್ಗದ ಹಲವು ಪ್ರದೇಶಗಳು ಜಲಾವೃತ

ತೀರ್ಥಹಳ್ಳಿ ತಾಲ್ಲೂಕು ಹುಲಿಗುಡ್ಡ ಕುಸಿತ, ಚಕ್ರ ಜಲಾಶಯ ಪ್ರದೇಶದಲ್ಲಿ 40.1 ಸೆಂ.ಮೀ ದಾಖಲೆಯ ಮಳೆ
Last Updated 24 ಜುಲೈ 2021, 13:03 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ಮಳೆ ಆರ್ಭಟ ಕೊಂಚ ತಗ್ಗಿದರೂ, ನೀರಿನ ಹರಿವು ಕಡಿಮೆಯಾಗಿಲ್ಲ. ತುಂಗಾ ಜಲಶಯದಿಂದ 87 ಸಾವಿರ ಕ್ಯುಸೆಕ್‌ ನೀರು ಬಿಡುತ್ತಿರುವ ಕಾರಣ ತುಂಗಾ ನದಿ ಉಕ್ಕಿ ಹರಿಯುತ್ತಿದೆ. ಶಿವಮೊಗ್ಗ ನಗರದ ಹಲವು ಪ್ರದೇಶಗಳು ಜಲಾವೃತವಾಗಿವೆ.

ಕುಂಬಾರಗುಂಡಿ, ಶಾಂತಮ್ಮ ಲೇಔಟ್‌, ಜೆಪಿಎನ್‌ ಶಾಲೆ, ಮಂಜುನಾಥ ಚಿತ್ರಮಂದಿರ ಪ್ರದೇಶ, ಕೆ.ಆರ್.ಪುರಂ, ಇಮಾಂ ಬಾಡ, ಮಂಡಕ್ಕಿ ಭಟ್ಟಿ ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನವುಲೆ ಕ್ರೀಡಾಂಗಣ ಸಂಪುರ್ಣ ಜಲಾವೃತವಗಿದೆ.

ತೀರ್ಥಹಳ್ಳಿ ತಾಲ್ಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬಳಿಕೆ ಗ್ರಾಮದ ಹುಲಿಗುಡ್ಡ ಕುಸಿದಿದೆ. 20 ಅಡಿಗೂ ಹೆಚ್ಚು ಅಗಲ, ಅರ್ಧ ಕಿ.ಮೀ ದೂರ ಜರುಗಿದೆ. ಗುಡ್ಡದ ತಪ್ಪಲಿನಲ್ಲಿದ್ದ ರೈತ ಗುರುಮೂರ್ತಿ ಅವರ ಅಡಕೆ ತೋಟಕ್ಕೆ ಸಂಪೂರ್ಣ ಹಾನಿಗೀಡಾಗಿದೆ.ಎರಡು ವರ್ಷಗಳ ಹಿಂದೆ ತಾಲ್ಲೂಕಿನ ಹೆಗಲತ್ತಿ ಬಳಿ ಗುಡ್ಡ ಕುಸಿದಿತ್ತು. ಹುಲಿಗುಡ್ಡದ ಹತ್ತಿರದಲ್ಲೇ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ ಮೂರು ಅಡಿ, ಭದ್ರಾ ಜಲಾಶಯಕ್ಕೆ ನಾಲ್ಕು ಅಡಿ ನೀರು ಬಂದಿದೆ. ಲಿಂಗನಮಕ್ಕಿ ಜಲಾಶಯದ ಮಟ್ಟ 1802.60 ತಲುಪಿದೆ. ಗರಿಷ್ಠ ಮಟ್ಟ ತಲುಪಲು 16 ಅಡಿ ಬಾಕಿ ಇದೆ.1 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಯಾವುದೇ ಕ್ಷಣದಲ್ಲಿ ಕ್ರಸ್ಟ್‌ಗೇಟ್‌ ತೆರೆಯುವ ಸಾಧ್ಯತೆ ಇದ್ದು, ಶರಾವತಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಭದ್ರಾ ಜಲಾಶಯ 175 ಅಡಿ ತಲುಪಿದೆ. 50 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಭರ್ತಿಯಾಗಲು 11 ಅಡಿ ಬಾಕಿ ಇದೆ.

ಹೊಸನಗರ ತಾಲ್ಲೂಕಿನ ಚಕ್ರ ಜಲಾಶಯ ಪ್ರದೇಶದಲ್ಲಿ ದಾಖಲೆಯ 40.1 ಸೆಂ.ಮೀ ಮಳೆಯಾಗಿದೆ. ಸಾವೆಹಕ್ಲುವಿನಲ್ಲಿ 30.8 ಸೆಂ.ಮೀ, ಮಸ್ತಿ ಕಟ್ಟೆಯಲ್ಲಿ 21.7 ಸೆಂ.ಮೀ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 38.8 ಸೆಂ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT