ಮಂಗಳವಾರ, ನವೆಂಬರ್ 29, 2022
28 °C
ವರ್ಷಧಾರೆಗೆ ಹಲವೆಡೆ ಕೆರೆಗಳಿಗೆ ಹಾನಿ, ತಾತ್ಕಾಲಿಕ ದುರಸ್ತಿ

ವರ್ಷಧಾರೆ: ಮೈದುಂಬಿದ ಕೆರೆ–ಕಟ್ಟೆಗಳು

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲೆಯ ಮಲೆನಾಡು ಹಾಗೂ ಅರೆ ಮಲೆನಾಡು ಪ್ರದೇಶಗಳಲ್ಲಿ ಗ್ರಾಮೀಣರಿಗೆ ಬೇಸಿಗೆ ವೇಳೆ ಕೆರೆಗಳೇ ಕುಡಿಯುವ ನೀರಿನ ಪ್ರಮುಖ ಆಸರೆ. ಬೆಳೆ ಬೆಳೆಯಲು, ಜಾನುವಾರು ಮತ್ತು ಕಾಡುಪ್ರಾಣಿಗಳ ಬಾಯಾರಿಕೆ ನೀಗಿಸಲು ಈ ಕೆರೆಗಳ ಸಮೃದ್ಧಿಯೇ ಮೂಲ.

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಹೀಗಾಗಿ ಬಹಳಷ್ಟು ಕೆರೆಗಳು ಭರ್ತಿಯಾಗಿವೆ. ದಶಕಗಳಿಂದ ಮೈದುಂಬದ ಕೆರೆಗಳ ಒಡಲು ಈ ಬಾರಿ ತುಂಬಿದೆ.

ಶಿವಮೊಗ್ಗ ತಾಲ್ಲೂಕಿನ ಬೂದಿಗೆರೆ ಕೆರೆ 15 ವರ್ಷಗಳ ನಂತರ ತುಂಬಿದೆ. ಶಿಕಾರಿಪುರ ತಾಲ್ಲೂಕಿನ ಕುಂಚೇನಹಳ್ಳಿ ಕೆರೆ 11 ವರ್ಷಗಳ ನಂತರ ಭರ್ತಿಯಾಗಿದೆ. ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಅತಿದೊಡ್ಡ ಕೆರೆ ಎನಿಸಿದ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ ಬಳಿಯ ಸೀಗಿಹಳ್ಳಿ ಹೊಸಕೆರೆಯೂ ತುಂಬಿದ್ದು, ಬೇಸಿಗೆಯಲ್ಲಿ ಕೆರೆಯ ಅಚ್ಚುಕಟ್ಟು ವ್ಯಾಪ್ತಿಯ 912 ಹೆಕ್ಟೇರ್ ಪ್ರದೇಶದಲ್ಲಿ ಹಸಿರು ನಳನಳಿಸುವುದು ಈಗಾಗಲೇ ಖಾತರಿಯಾಗಿದೆ.

‘ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ 306 ಕೆರೆಗಳು ಇದ್ದು, ಶೇ 90ಕ್ಕೂ ಹೆಚ್ಚು ಕೆರೆಗಳು ತುಂಬಿವೆ. ಉಳಿದವು ಶೇ 80ರಿಂದ 90 ಭಾಗ ತುಂಬಿವೆ’ ಎಂದು ಸಣ್ಣ ನೀರಾವರಿ ಇಲಾಖೆ ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮೂಡಲಗಿರಿ ಹೇಳಿದರು.

ಈ ಬಾರಿ ಜಿಲ್ಲೆಯಲ್ಲಿ ತುಂಬಿರುವ ಕೆರೆಗಳ ಸ್ಥಿತಿಗತಿಯ ಬಗ್ಗೆ ಈ ವಾರದ ‘ನಮ್ಮ ಜನ  ನಮ್ಮ ಧ್ವನಿ’ ಕಿರು ಪಕ್ಷಿನೋಟ ಬೀರಿದೆ.

ವಾಡಿಕೆಗಿಂತ ಹೆಚ್ಚು ಮಳೆ: 24 ಕೆರೆ ಏರಿಗೆ ಹಾನಿ

ರಾಘವೇಂದ್ರ ಟಿ.

ಸೊರಬ: ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ತಾಲ್ಲೂಕು ಎಂಬ ಶ್ರೇಯ ಹೊಂದಿರುವ ಸೊರಬದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಹೀಗಾಗಿ ಬಹುತೇಕ ಕೆರೆಗಳು ತುಂಬಿ ತಿಂಗಳು ಕಾಲ ಕೋಡಿಯಲ್ಲಿ ನೀರು ಹರಿದಿದೆ.

ತಾಲ್ಲೂಕಿನಲ್ಲಿ 1,158 ಕೆರೆಗಳು ಇದ್ದು, ಈ ವರ್ಷದ ಮುಸುಲಧಾರೆಗೆ ಕೆರೆಗಳು ತುಂಬುವ ಜೊತೆಗೆ ಕೆರೆ ಏರಿ ಕುಸಿದು ನಷ್ಟ ಉಂಟಾಗಿದೆ. ಉರಗನಹಳ್ಳಿ- ದೇವತಿಕೊಪ್ಪ ಗ್ರಾಮದ ಕೆರೆ ಏರಿ ಕುಸಿದ ಪರಿಣಾಮ ಸೊರಬ ಹಾಗೂ ಶಿಕಾರಿಪುರ ಸಂಪರ್ಕಿಸುವ ಗ್ರಾಮಗಳ ಸಂಪರ್ಕ ಕಡಿತಗೊಂಡಿತ್ತು.

ಕೆರೆಹಳ್ಳಿ, ಕೊಡಕಣಿ, ಬಾಸೂರು ಗ್ರಾಮದ ಕೆರೆಗಳು ಅಧಿಕ ಮಳೆಗೆ ನೀರು ತುಂಬಿದ ಪರಿಣಾಮ ಕೆರೆ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ಹಾನಿಯಾಗುವ ಜೊತೆಗೆ ಮಳೆಗಾಲದಲ್ಲಿ ನೀರಿನ ಒಳ ಹರಿವು ಜಾಸ್ತಿಯಾಗಿ ಕೆರೆ ಏರಿ ಕುಸಿದಿವೆ. ಇದರಿಂದ ಅಚ್ಚುಕಟ್ಟು ಭಾಗದ ರೈತರು ತಮ್ಮ ಬೆಳೆ ಕಳೆದುಕೊಳ್ಳುವ ಭೀತಿ ಎದುರಿಸಿದ್ದರು.

ಪ್ರತಿ ವರ್ಷ ಬೇಸಿಗೆಗೂ ಮುನ್ನ ಕೆರೆಗಳಲ್ಲಿ ನೀರು ಬತ್ತಿ ಹೋಗಿ ದನಕರು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿತ್ತು. ತಾಲ್ಲೂಕಿನಲ್ಲಿ 24 ಕೆರೆಗಳ ಏರಿ ಕುಸಿದಿದೆ. ಅವುಗಳ ದುರಸ್ತಿಗೆ ₹ 11 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಯಾದ ಕೂಡಲೇ ಕೆರೆಗಳ ದುರಸ್ತಿ ಕಾರ್ಯಕ್ಕೆ ಮಾಡುವುದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ಒತ್ತುವರಿಯೇ ಸಮಸ್ಯೆ ಮೂಲ

ಕೆ.ಎನ್. ಶ್ರೀಹರ್ಷ

ಭದ್ರಾವತಿ: ತಾಲ್ಲೂಕಿನಲ್ಲಿ ಒಟ್ಟು 426 ಕೆರೆಗಳಿದ್ದು, ಅದರಲ್ಲಿ 120 ಕೆರೆಗಳು ಒತ್ತುವರಿ ಆಗಿವೆ. ಈಗಾಗಲೇ 31 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ.

ಮಳೆಯ ಅಬ್ಬರಕ್ಕೆ ಸಿದ್ದಾಪುರ ಕೆರೆ ಭಾಗ ಒಂದಿಷ್ಟು ಹಾನಿಗೆ ಒಳಗಾಗಿದೆ. ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ 70 ಕೆರೆಗಳಿದ್ದು, ಅದರಲ್ಲಿ ತೆರವು ಕಾರ್ಯಕ್ಕೆ 25 ಕೆರೆಗಳ ಗುರುತಿಸಲಾಗಿದೆ. ಈಗಾಗಲೇ ಎರಡು ಕೆರೆಗಳ ಒತ್ತುವರಿ ತೆರವು ಕಾರ್ಯ ಮುಗಿದಿದೆ ಎನ್ನುತ್ತಾರೆ ಇದರ ಹೋರಾಟದ ಮುಂಚೂಣಿಯಲ್ಲಿರುವ ಆರ್. ವೇಣುಗೋಪಾಲ್.

ಹೊಸಮನೆ ಭಾಗದಲ್ಲಿ 50 ಎಕರೆ ಕೆರೆಪ್ರದೇಶ ಒತ್ತುವರಿಯಾಗಿದ್ದು, ಇದರ ತೆರವು ಕಾರ್ಯ ನಡೆಯಬೇಕಿದೆ. ಈ ನಡುವೆ ಮಳೆಯಿಂದಾಗಿ ಸಿದ್ದಾಪುರ ಕೆರೆಯ ಒಂದು ಭಾಗ ಒಡೆದಿದ್ದರಿಂದ ನೀರು ರಸ್ತೆಗೆ ಹರಿದು ಭಂಡಾರಹಳ್ಳಿ, ಕವಲಗುಂದಿ, ಸಿದ್ದಾಪುರ ಭಾಗದಲ್ಲಿ ಭತ್ತದ ಬೆಳೆಗೆ ಒಂದಿಷ್ಟು ಹಾನಿಯಾಗಿದೆ.

ಕೆರೆ ಒಡೆದು ಕೃಷಿ ಭೂಮಿಗೆ ನುಗ್ಗಿದ ನೀರು

ಎಚ್.ಎಸ್. ರಘು

ಶಿಕಾರಿಪುರ: ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಕಾರಣ  ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಕೆಲವು ಕೆರೆಗಳಿಗೆ ಹಾನಿಯಾಗಿದೆ. ಕೆರೆಗಳು ಒಡೆದು ಕೃಷಿ ಭೂಮಿಗೆ ನೀರು ನುಗ್ಗಿದ ಪರಿಣಾಮ ಬೆಳೆ ನಷ್ಟವಾಗಿದೆ.

ತಾಲ್ಲೂಕಿನ ಹುಲುಗಿನಕಟ್ಟೆ ಸಮೀಪದ ಮುರುಘಣ್ಣನ ಕೆರೆ ಏರಿ ಒಡೆದು ಅಡಿಕೆ ತೋಟ ಹಾಗೂ ಕೃಷಿ ಭೂಮಿಗೆ ನೀರು ನುಗ್ಗಿ ಹಾನಿಯಾಗಿದೆ.ನ ಅಂಬಾರಗೊಪ್ಪ ಸಮೀಪದ ಕೊಪ್ಪದಕೆರೆ ಭರ್ತಿಯಾಗಿ ಕೊಡಿ ಮೇಲೆ ನೀರು ಹರಿದು ಪಕ್ಕದ ಹೊಲಗಳಲ್ಲಿನ ಬೆಳೆ ಕೊಚ್ಚಿ ಹೋಗಿವೆ.

ತಿಮ್ಲಾಪುರ ಗ್ರಾಮದ ಸಮೀಪದ ಬೋಳಗಟ್ಟೆ ಕೆರೆ ಭರ್ತಿಯಾಗಿ ರಸ್ತೆ ಮೇಲೆ ನೀರು ಹರಿದಿದೆ. ಎಳನೀರು ಕೊಪ್ಪ ಸಮೀಪ ಕೆರೆ ಒಡೆದು ಹಾನಿಯಾಗಿತ್ತು. ನೀರಾವರಿ ಇಲಾಖೆ ಅಧಿಕಾರಿಗಳು ಕೆಲವನ್ನು ತಾತ್ಕಾಲಿಕ ದುರಸ್ಥಿ ಮಾಡಿದ್ದು,ಶಾಶ್ವತ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ.

ಕೆರೆ ಕೋಡಿ ಒಡೆದು ಜನವಸತಿ ಉಳಿಸಿದರು!

ಶಿವಮೊಗ್ಗ ತಾಲ್ಲೂಕಿನ ಕುಂಚೇನಹಳ್ಳಿ ಕೆರೆ 11 ವರ್ಷಗಳಿಂದ ತುಂಬಿರಲಿಲ್ಲ. ಹೀಗಾಗಿ ಖಾಲಿ ಇದ್ದ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಹಲವರು ಮನೆಗಳನ್ನು ಕಟ್ಟಿಕೊಂಡು, ತೋಟ ಬೆಳೆಸಿದ್ದಾರೆ. ಆದರೆ, ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಕೆರೆ ತುಂಬಿ ಹೆಚ್ಚುವರಿ ನೀರು ಜನವಸತಿಗೆ ನುಗ್ಗಿತ್ತು. ಜನವಸತಿ ಉಳಿಸಲು ಕೆರೆಯ ಕೋಡಿ ಒಡೆಯಲು ನಿರ್ಧರಿಸಲಾಯಿತು. ಇದಕ್ಕೆ ಕೆಲವರು ವಿರೋಧಿಸಿದರು. ಇನ್ನೂ ಕೆಲವರು ತಾಲ್ಲೂಕು ಆಡಳಿತದ ನಿರ್ಧಾರ ಬೆಂಬಲಿಸಿದರು.

ಕೊನೆಗೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಕೋಡಿ ಒಡೆದು ನೀರು ಹೊರಗೆ ಹಾಕಲಾಯಿತು. ‘ಒಡೆದಿರುವ ಕೋಡಿ ದುರಸ್ತಿ ಮಾಡಬೇಕು. ಮನೆಯೊಳಗೆ ನೀರು ನುಗ್ಗುವ ಮೊದಲೇ ಕಾಲುವೆಯಲ್ಲಿ ನೀರು ಹರಿದುಹೋಗಬೇಕು. ಅದಕ್ಕೆ ಕೋಡಿಯಿಂದ ಹೆಚ್ಚುವರಿ ನೀರು ಹೊರಗೆ ಹಾಕಲು ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು. ಅನುದಾನ ಬಂದ ತಕ್ಷಣ ಆ ಕೆಲಸ ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

 

ತಿಮ್ಲಾಪುರ ಸಮೀಪದ ಬೋಳಗಟ್ಟೆ ಕೆರೆ ಭರ್ತಿಯಾದ ಮೇಲೆ ನೀರು ಹರಿಯಲು ಕೋಡಿ ಕಾಲುವೆ ನಿರ್ಮಾಣ ಮಾಡಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೆವು. ಆದರೆ ಕೋಡಿ ಕಾಲುವೆ ನಿರ್ಮಾಣ ಮಾಡಿಲ್ಲ. 

–ಮಂಜಪ್ಪ, ‌ರೈತ, ತಿಮ್ಲಾಪುರ, ಶಿಕಾರಿಪುರ

ಮುರುಘಣ್ಣನ ಕೆರೆಯ ದುರಸ್ತಿ ಕಾರ್ಯ ತಾತ್ಕಾಲಿಕವಾಗಿ ಕೈಗೊಳ್ಳಲಾಗಿದೆ. ಕೆರೆಯ ಶಾಶ್ವತ ಕಾಮಗಾರಿಗೆ ಟೆಂಡರ್ ಕಾರ್ಯ ಪ್ರಕ್ರಿಯೆಯಲ್ಲಿದೆ. ಟೆಂಡರ್ ಪ್ರಕ್ರಿಯೆ ಮುಗಿದ ನಂತರ ದುರಸ್ತಿ ಕಾಮಗಾರಿ ಆರಂಭಿಸಲಾಗುತ್ತದೆ.

‌–ಜಿ.ಎ. ನಾಗೇಂದ್ರಪ್ಪ, ಎಇಇ, ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ಧಿ ಉಪವಿಭಾಗ, ಶಿಕಾರಿಪುರ

ಹಾನಿಗೀಡಾದ ಕೆರೆಗಳನ್ನು ಸದ್ಯ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದೇವೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ಶಾಶ್ವತ ಕಾಮಗಾರಿ ಕೈಗೊಂಡು ನೀರಿನ ಮೂಲಗಳನ್ನು ರಕ್ಷಿಸಲಿದ್ದೇವೆ.

-ಮಂಜುನಾಥ್, <ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಶಿವಮೊಗ್ಗ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು