ಶನಿವಾರ, ಜುಲೈ 2, 2022
27 °C

ಆನಂದಪುರ: ಮಿಶ್ರ ಬೆಳೆಯಲ್ಲಿ ಆದಾಯ ಕಂಡ ಹೇಮಂತ್ ಕುಮಾರ್

ಮಲ್ಲಿಕಾರ್ಜುನ ಮುಂಬಾಳು Updated:

ಅಕ್ಷರ ಗಾತ್ರ : | |

Prajavani

ಆನಂದಪುರ: ಕೇವಲ ಒಂದು ಬೆಳೆಯನ್ನೇ ಅವಲಂಬಿಸಿದರೆ ಕೃಷಿಯಿಂದ ನಿರೀಕ್ಷಿತ ಆದಾಯ ಅಸಾಧ್ಯವೆಂದು ಅರಿತ ರೈತರೊಬ್ಬರು ಮಿಶ್ರ ಬೆಳೆ ಪದ್ಧತಿ ಅವಲಂಬಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಸಮೀಪದ ಕೆರೆಹಿತ್ಲು ಗ್ರಾಮದ ಹೇಮಂತ್ ಕುಮಾರ್ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

30 ವರ್ಷಗಳಿಂದ ಪ್ರಮುಖ ಬೆಳೆಯಾಗಿ ಅಡಿಕೆಯನ್ನು ಹೇಮಂತ್‌ಕುಮಾರ್‌ ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಮಿಶ್ರ ಬೆಳೆಯಾಗಿ ಏಲಕ್ಕಿ ಹಾಗೂ ಕಾಳುಮೆಣಸು ಬೆಳೆಯುತ್ತಿದ್ದಾರೆ. ಮೊದಲು 3 ಎಕರೆಯಲ್ಲಿದ್ದ ಅಡಿಕೆ ಬೆಳೆಯನ್ನು 5 ವರ್ಷಗಳ ಹಿಂದೆ 2.5 ಎಕರೆಗೆ ವಿಸ್ತರಿಸಿ‌ದ್ದಾರೆ. ಈ ಬಾರಿ ಹೊಸ ತೋಟದಲ್ಲಿ ಉತ್ತಮ ಬೆಳೆ ಬಂದಿದ್ದು, ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.

ಮೊದಲು ಗ್ಯಾರೇಜ್ ನಡೆಸುತ್ತಿದ್ದ ಇವರ ಮಗ ಸುಹಾಸ್ ಅದರಿಂದ ಹೆಚ್ಚಿನ ನೆಮ್ಮದಿ ಸಿಗದ ಕಾರಣ ಕೃಷಿಯಲ್ಲಿ ಹೆಚ್ಚು ಸಮಯ ತೊಡಗಿಸಿಕೊಂಡಿದ್ದಾರೆ.

‘ಬೆಳೆಗಳಿಗೆ ಸಮರ್ಪಕವಾದ ರೀತಿಯಲ್ಲಿ ಕೃಷಿ ಮಾಡುವುದರಿಂದ ಉತ್ತಮ ಫಸಲನ್ನು ಪಡೆಯಲು ಸಾಧ್ಯವಿದೆ. ಇದರಿಂದ ನಿರೀಕ್ಷಿತ ಆದಾಯದ ಜತೆಗೆ ಮಾನಸಿಕ ನೆಮ್ಮದಿ ದೊರೆಯುತ್ತದೆ’ ಎಂದು ತಮ್ಮ ಅಣುಭವ ಬಿಚ್ಚಿಡುತ್ತಾರೆ  ಹೇಮಂತ್ ಕುಮಾರ್.

ಅಡಿಕೆ ಮರಗಳ ಸಾಲುಗಳ ಮಧ್ಯೆ 300 ಏಲಕ್ಕಿ ಗಿಡಗಳನ್ನು 18 ತಿಂಗಳ ಹಿಂದೆ ಹಾಕಿದ್ದಾರೆ. ಈಗ ಕಾಯಿ ಬಿಡಲಾರಂಬಿಸಿದೆ. ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕೊಯ್ಲಿಗೆ ಬರುತ್ತದೆ. ಒಂದು ಗಿಡದಿಂದ ₹ 600ಕ್ಕೂ ಹೆಚ್ಚು ಆದಾಯವನ್ನು ಪಡೆಯಬಹುದು. ವರ್ಷಕ್ಕೆ ಸುಮಾರು ₹ 2 ಲಕ್ಷ ಆದಾಯವನ್ನು ಏಲಕ್ಕಿಯಿಂದ ಪಡೆಯಬಹುದು. ಏಲಕ್ಕಿಯನ್ನು ಮೂಡಿಗೆರೆಯಿಂದ ತಂದು ನಾಟಿ ಮಾಡಲಾಗಿದೆ. 10 ವರ್ಷಕ್ಕೂ ಅಧಿಕ ಕಾಲ ನಿರಂತರ ಬೆಳೆ ಪಡೆಯಬಹುದು. ಏಲಕ್ಕಿ ಮಿಶ್ರ ಬೆಳೆಯಾಗಿ ನಿರಂತರ ಆದಾಯ ಬರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಗಿಡಗಳನ್ನು ನಾಟಿ ಮಾಡಲಾಗುವುದು. ಇದರಿಂದ ಅಡಿಕೆ ಮರಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಮಾಹಿತಿ ನೀಡುತ್ತಾರೆ ಅವರು.

ಒಂದು ಕೊಳವೆಬಾವಿಯಿದ್ದು, 5 ಎಕರೆ ಅಡಿಕೆ ತೋಟ ಹಾಗೂ ಏಲಕ್ಕಿಗೆ ಸಾಕಾಗುವಷ್ಟು ನೀರು ಸಿಗುತ್ತದೆ. ಇಲ್ಲಿ ವಿಶೇಷತೆ ಏನೆಂದರೆ ಪ್ರತಿ ಮರಕ್ಕೂ 2 ಸಣ್ಣ ಪೈಪ್ ಅಳವಡಿಸಲಾಗಿದೆ. ಒಂದು ಪೈಪ್‌ನಲ್ಲಿ ಹನಿ ನೀರಾವರಿ ಪದ್ಧತಿ ಮೂಲಕ ಮರದ ಬುಡಕ್ಕೆ ನೀರುಣಿಸಿದರೆ, ಮತ್ತೊಂದು ಪೈಪ್ ಮೂಲಕ ಮರದ ಸುತ್ತ 2 ಅಡಿ ತೇವಾಂಶ ಇಡಲು ಮಿನಿ ಸ್ಪ್ರಿಂಕ್ಲರ್ ಅಳವಡಿಸಲಾಗಿದೆ. ಇದರಿಂದ ನೀರಿನ ಉಳಿತಾಯದ ಜತೆಗೆ ಅಡಿಕೆ ತೋಟ ತಂಪಾಗಿರುವುದಿಂದ ಉತ್ತಮ ಫಸಲು ಪಡೆಯಬಹುದು ಎಂದು ಹೇಳಿದರು ಹೇಮಂತ್‌.

ಅಡಿಕೆ ಹಾಗೂ ಏಲಕ್ಕಿಯನ್ನು ಹೊರತುಪಡಿಸಿ ಪರ್ಯಾಯ ಆದಾಯವಾಗಿ ಪ್ರತಿ ವರ್ಷ ಬೇರೆ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೆಳೆಗಳನ್ನು ಬದಲು ಮಾಡುವುದರಿಂದ ಹೆಚ್ಚಿನ ಫಸಲು ಪಡೆಯಬಹುದು ಎನ್ನುವುದು ಅವರ ಅನುಭವದ ಮಾತು.

‘ಒಮ್ಮೆ 2.5 ಎಕರೆಯಲ್ಲಿ ಕಬ್ಬಿನಿಂದ ₹ 2.5 ಲಕ್ಷ ಆದಾಯ ಗಳಿಸಿದ್ದೇನೆ. ಕಬ್ಬಿನಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲ ತಯಾರಿಸಿ ಮಾರಾಟ ಮಾಡಲಾಗಿದೆ. ಉಳಿದ ಕಬ್ಬನ್ನು ಜ್ಯೂಸ್ ತಯಾರಿಸಲು ಹೊನ್ನಾವರಕ್ಕೆ ಮಧ್ಯ‌ವರ್ತಿ ಮೂಲಕ ಮಾರಾಟ ಮಾಡಿರುವೆ. ಅಲ್ಲದೇ ಮೆಣಸು, ಹೆಗ್ಗುಂಬಳ ಬೆಳೆದು ₹ 7 ಲಕ್ಷದಿಂದ ₹ 8 ಲಕ್ಷ ಆದಾಯ ಸಿಕ್ಕಿದೆ. ಹೆಗ್ಗುಂಬಳವನ್ನು ಹುಬ್ಬಳ್ಳಿ ಹಾಗೂ ಬೆಳಗಾವಿ ಮಾರುಕಟ್ಟೆಗೆ ಮಾರಾಟ ಮಾಡಿದ್ದೇನೆ. ಮೆಣಸಿನಿಂದಲೂ ₹ 1.5 ಲಕ್ಷ ಆದಾಯ ಸಿಕ್ಕಿದೆ’ ಎಂದು ತಮ್ಮ ಕೃಷಿಯಲ್ಲಿನ ಸಂತಸ ಹಂಚಿಕೊಂಡರು ಅವರು.

ಹೇಮಂತ್‌ಕುಮಾರ್‌ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸ್ವಲ್ಪ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರವನ್ನು ಬಳಸುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿ ಕೃಷಿ ಮಾಡುವ ಇವರ ಕೃಷಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಸಾಥ್ ನೀಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು