ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ತೊಲಗುವವರೆಗೂ ಸ್ವರಾಜ್ಯದ ಕನಸು ನನಸಾಗದು: ಎಸ್.ಆರ್.ಹಿರೇಮಠ್

ಕೆಆರ್‌ಎಸ್ ಪಕ್ಷದ ಜಾಥಾ ಕಾರ್ಯಕ್ರಮದಲ್ಲಿ ಹೋರಾಟಗಾರ
Last Updated 10 ಆಗಸ್ಟ್ 2021, 3:38 IST
ಅಕ್ಷರ ಗಾತ್ರ

ಈಸೂರು: ದೇಶದಿಂದ ಭ್ರಷ್ಟಾಚಾರ ತೊಲಗುವವರೆಗೂ ಗಾಂಧೀಜಿ ಕಂಡ ಸ್ವರಾಜ್ಯದ ಕನಸು ನನಸಾಗುವುದಿಲ್ಲ ಎಂದು ಹೋರಾಟಗಾರ ಎಸ್.ಆರ್.ಹಿರೇಮಠ್ ಹೇಳಿದರು.

ತಾಲ್ಲೂಕಿನ ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಆವರಣದಲ್ಲಿ ಭಾನುವಾರ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಆಯೋಜಿಸಿದ್ದ ‘ಭ್ರಷ್ಟರೇ ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ–ನಾಡ ಪ್ರೇಮಿಗಳೇ ರಾಜಕಾರಣಕ್ಕೆ ಮುಂದಾಗಿ’ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಭ್ರಷ್ಟಾಚಾರ ನಾಡಿನ ಬಹುದೊಡ್ಡ ಪಿಡುಗಾಗಿದ್ದು, ದೇಶದಿಂದ ತೊಲಗಬೇಕು. ಗಾಂಧೀಜಿ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ಓದಬೇಕು. ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟ ನಮಗೆಲ್ಲ ಆದರ್ಶವಾಗಬೇಕು. ರವಿ ಕೃಷ್ಣಾರೆಡ್ಡಿ ನೇತೃತ್ವದ ಕೆಆರ್‌ಎಸ್ ಪಕ್ಷ ಆಯೋಜಿಸಿರುವ ಈ ಜಾಥಾ ಕಾರ್ಯಕ್ರಮ ಮಹತ್ವದ ಹಾಗೂ ಐತಿಹಾಸಿಕ ಕೆಲಸವಾಗಿದೆ’ ಎಂದು ಶ್ಲಾಘಿಸಿದರು.

ಲೇಖಕ ಡಿ.ಎಸ್.ನಾಗಭೂಷಣ್, ‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈಸೂರು ಗ್ರಾಮಸ್ಥರ ಹೋರಾಟ ಪ್ರಮುಖ ಪಾತ್ರ ವಹಿಸಿದ್ದು, ಪ್ರಥಮ ಸ್ವಾತಂತ್ರ್ಯ ಗ್ರಾಮ ಎಂದು ಗ್ರಾಮಸ್ಥರು ಘೋಷಿಸಿಕೊಂಡಿದ್ದರು. ಹಳ್ಳಿಯ ನಾಯಕತ್ವ ಬಲಗೊಳ್ಳಬೇಕು. ಭ್ರಷ್ಟಾಚಾರ ಮುಕ್ತಿಗಾಗಿ ಕೆಆರ್‌ಎಸ್ ಪಕ್ಷ ನಡೆಸುತ್ತಿರುವ ಈ ಜಾಥಾ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ, ‘ಭ್ರಷ್ಟಾಚಾರದ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜೀವನವು ಬಹಳ ದುಸ್ತರವಾಗಲಿದೆ. ರಾಜಕಾರಣ ಶುದ್ಧವಾದರೆ ಮಾತ್ರ ನಮಗೆ ಉಳಿಗಾಲ. ಇಲ್ಲವಾದಲ್ಲಿ ನಮ್ಮ ಭವಿಷ್ಯ ಅತಂತ್ರವಾಗಲಿದೆ. ರಾಜಕಾರಣ ಶುದ್ಧಿಯನ್ನು ಕೆಆರ್‌ಎಸ್ ಪಕ್ಷ ಮಾಡಲು ಮುಂದಾಗಿದೆ’ ಎಂದು ತಿಳಿಸಿದರು.

ದಂಡಾವತಿ ಹೋರಾಟಗಾರ ವಾಮದೇವಗೌಡ, ಕೆಆರ್‌ಎಸ್ ಪಕ್ಷ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ್ರು, ಈಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ, ರೈತ ಮುಖಂಡರಾದ ಪ್ಯಾಟೆ ಈರಪ್ಪ, ಬೇಗೂರು ಶಿವಪ್ಪ, ಕೆಆರ್‌ಎಸ್ ಪಕ್ಷ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಈ ಜಾಥಾ ಶಿಕಾರಿಪುರ ಪಟ್ಟಣದ ಮೂಲಕ ಆನವಟ್ಟಿ ಹಾಗೂ ಹಾನಗಲ್‌ಗೆ ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT