ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಕುರುಬರ ನಾಯಕ ಅಲ್ಲ, ಹಿಂದುತ್ವದ ಪ್ರತಿಪಾದಕ’ ಎಂದ ಸಚಿವ ಕೆ.ಎಸ್. ಈಶ್ವರಪ್ಪ

Last Updated 2 ಡಿಸೆಂಬರ್ 2020, 9:52 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನಾನು ಕುರುಬರ ನಾಯಕ ಅಲ್ಲ.‌ ಹಿಂದುತ್ವದ ಪ್ರತಿಪಾದಕ. ಹಿಂದುತ್ವದ ಬಗ್ಗೆ ಯಾರೇ ಮಾತನಾಡಿದರು ಸಹಿಸುವುದಿಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗುಡುಗಿದರು.

ಕುರುಬರ ನಾಯಕ. ಅಹಿಂದ ನಾಯಕ ಎಂದು ಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಅವರ ಹಿಂದೆ ಇಂದು ಯಾರಿದ್ದಾರೆ. ಕುರುಬರು, ಹಿಂದುಳಿದವರು ಅವರ ಹಿಂದೆ ಇದ್ದಿದ್ದರೆ ಅವರ ಪಕ್ಷ ಏಕೆ ಸೋಲು ಕಂಡಿತು. ರಾಜ್ಯದಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡಿದ ಶ್ರೇಯ ಅವರಿಗೆ ಸಲ್ಲುತ್ತದೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಇಂದಿರಾ ಗಾಂಧಿ, ರಾಜೀವ್, ಪ್ರಿಯಾಂಕಾ ಅವರನ್ನು ನೋಡಿ ಸಿದ್ದರಾಮಯ್ಯ ಕ್ರಾಸ್‌ಬೀಡ್ ಪದ ಬಳಸಿರಬೇಕು. ಕ್ರಾಸ್‌ಬೀಡ್‌ ಪದವನ್ನು ನಮ್ಮಲ್ಲಿ ನಾಯಿಗಳಿಗೆ ಬಳಸಲಾಗುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರಿಗೆ ಹಿಂದೂ ಹೆಣ್ಣುಮಕ್ಕಳ ಕಷ್ಟ ಗೊತ್ತಿಲ್ಲವೇ? ಲವ್‌ಜಿಹಾದ್‌ನಿಂದ ಹೆಣ್ಣು ಮಕ್ಕಳು ಅನುಭವಿಸಿದ ನೋವಿನ ಸರಣಿ ಕಥೆಗಳೇ ಇವೆ. ಮತಾಂತರದಿಂದ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿರುವುದರ ಅರಿವಿಲ್ಲವೇ ಎಂದು ಪ್ರಶ್ನಿಸಿದರು.

ಕುರುಬರ ಹೋರಾಟದ ಹಿಂದೆ ಆರ್‌ಎಸ್‌ಎಸ್‌ ಇದೆ ಎನ್ನುವ ಅವರ ಹೇಳಿಕೆ ಮೂರ್ಖತನದ್ದು. ಕಾಂಗ್ರೆಸ್‌ನಲ್ಲಿ ಇರಲು ಅವರು ಅಯೋಗ್ಯರು. ವಯಸ್ಸಾದ ದನಗಳನ್ನು ಬಿಜೆಪಿ ಮುಖಂಡರ ಮನೆ ಬಳಿ ಬಿಡಬೇಕೆ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಅರ್ಥವಿಲ್ಲ. ವಯಸ್ಸಾದ ಅವರ ತಾಯಿಯನ್ನೂ ಹೀಗೆ ಮಾಡುವರೇ ಎಂದು ಪ್ರಶ್ನಿಸಿದರು.

ಎಚ್‌.ವಿಶ್ವನಾಥ್ ಸೇರಿದಂತೆ ಬಿಜೆಪಿ ಮುಖಂಡರ ಆರೋಪ, ಪ್ರತ್ಯಾರೋಪಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಯಾರೂ ಬೀದಿ ರಂಪ ಮಾಡಬಾರದು. ಸಮಸ್ಯೆಗಳನ್ನು ಕೇಂದ್ರ ನಾಯಕರು ಬಗೆಹರಿಸುತ್ತಾರೆ. ಬೀದಿಗೆ ಬಂದು ಸಾಮಾನ್ಯ ಕಾರ್ಯಕರ್ತರಿಗೆ ನೋವು ಮಾಡಬಾರದು. ಎಚ್ಚರಿಕೆಯಿಂದ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಿಜೆಪಿ ಹಳ್ಳಿಹಳ್ಳಿಗಳಲ್ಲಿ ಮೂಲ ಸೌಲಭ್ಯ ಕಲ್ಲಿಸಲು ಶ್ರಮಿಸಿದೆ. ಉದ್ಯೋಗ ಖಾತ್ರಿ ಮೂಲಕ ಕೆಲಸ ನೀಡಿದೆ. ಲೋಕಸಭೆ. ವಿಧಾನಸಭಾ ಚುನಾವಣೆಗಳಿಗೆ ನೀಡುವ ಪ್ರಾಮುಖ್ಯತೆ ಗ್ರಾಮ ಪಂಚಾಯಿತಿ ಚುನಾವಣೆಗೂ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT