ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಮರಳು ಅಕ್ರಮ ಗಣಿಗಾರಿಕೆ, ಸಾಗಣೆ ಅವ್ಯಾಹತ

Published 16 ಮೇ 2024, 8:18 IST
Last Updated 16 ಮೇ 2024, 8:18 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ತುಂಗಾ, ಮಾಲತಿ, ಶರಾವತಿ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಸಂಗ್ರಹವಾದ ಮರಳು ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಖಾಲಿಯಾಗುತ್ತಿದೆ.

ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಅಕ್ರಮ ವಹಿವಾಟಿಗೆ ಆಡಳಿತದ ಬೆಂಬಲ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮರಳು ಹೊರ ಜಿಲ್ಲೆಗಳನ್ನು ಸೇರುತ್ತಿದ್ದರೂ ಮರಳು ಸಾಗಣೆ ಲಾರಿಗಳನ್ನು ವಶಕ್ಕೆ ಪಡೆಯುವಲ್ಲಿ ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್‌, ಅರಣ್ಯ, ಕಂದಾಯ ಇಲಾಖೆಗಳು ವಿಫಲವಾಗಿವೆ.

ಇಲ್ಲಿನ ಕುಶಾವತಿ, ಹುಣಸವಳ್ಳಿ, ಹೆದ್ದೂರು, ಬುಕ್ಲಾಪುರ, ಬಗ್ಗೊಡಿಗೆ, ಮಳಲೂರು, ಮಂಡಗದ್ದೆ, ಹೊಳೇಕೊಪ್ಪ, ಮೇಳಿಗೆ, ಮಹಿಷಿ, ಕೂಡಿಗೆ, ದಬ್ಬಣಗದ್ದೆ ಸೇರಿ ಜೀವನದಿಗಳಿಗೆ ಜೀವ ತುಂಬುವ ಹಳ್ಳ, ಹೊಳೆ, ತೊರೆಗಳಲ್ಲಿ ಸಿಗುವ ಅಲ್ಪಸ್ವಲ್ಪ ಮರಳು ಬರಿದಾಗುತ್ತಿದೆ. ಲಾರಿ, ಟೆಂಪೊ, ಟಿಪ್ಪರ್‌ಗಳಲ್ಲಿ ಅಕ್ರಮ ಮರಳು ಸಾಗಣೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸಿಲ್ಲ.

2023– 24ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗುರುತಿಸಿದ ಮರಳು ಕ್ವಾರಿಗಳನ್ನು ಹರಾಜು ಹಾಕದೇ ಇರುವುದು ಮರಳು ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಮರಳು ಅಕ್ರಮ ದಂಧೆಕೋರರಿಗೆ ಸರ್ಕಾರದ ವೈಫಲ್ಯ ವರದಾನವಾಗಿದ್ದು, ಮರಳಿನ ಯಥೇಚ್ಚ ಸಾಗಣೆಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ. ಸರ್ಕಾರದ ಬೊಕ್ಕಸಕ್ಕೆ ನಿತ್ಯ ₹ 25 ಲಕ್ಷಕ್ಕೂ ಹೆಚ್ಚು ನಷ್ಟವಾಗುತ್ತಿದೆ.

ಮಂಡಗದ್ದೆ ಸಮೀಪದ ತುಂಗಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಕ್ರಮ ಸಾಗಣೆ ವಾಹನಗಳಿಗಹೆ ದಾರಿ ಮುಚ್ಚಲು ರಸ್ತೆಗೆ ಅಡ್ಡಲಾಗಿ ನಿರ್ಮಿಸಿದ್ದ ಹಳ್ಳವನ್ನು ಮುಚ್ಚಿ ಮರಳು ಸಾಗಿಸುವ ಪ್ರಯತ್ನ ನಡೆದಿದೆ. ಘಟನೆಯ ನಂತರ ಅಕ್ರಮದಲ್ಲಿ ಭಾಗಿಯಾದ ಲಾರಿಯನ್ನು ವಶಕ್ಕೆ ಪಡೆದ ಮಹಿಳಾ ಭೂ ವಿಜ್ಞಾನಿಗೆ ದಂಧೆಕೋರರು ಜೀವ ಬೆದರಿಕೆ ಹಾಕಿದ ಘಟನೆ ಈಚೆಗೆ ನಡೆದಿದೆ. ಆದರೆ ಇಂದಿಗೂ  ಘಟನೆಗೆ ಕಾರಣರಾದ ವ್ಯಕ್ತಿಯನ್ನು ಬಂಧಿಸಲಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಗಾಜನೂರಿನಲ್ಲಿರುವ ಅರಣ್ಯ ತಪಾಸಣಾ ಕೇಂದ್ರದಲ್ಲಿ ಅಡೆತಡೆಯೇ ಇಲ್ಲದೇ ಮಂಡಗದ್ದೆ, ಹೊಳೆಕೊಪ್ಪ, ಮಹಿಷಿ, ಶಿರುಪತಿ, ಆರಗ ಭಾಗದ ಮರಳು ಶಿವಮೊಗ್ಗ ನಗರ ಸೇರುತ್ತಿದೆ. ಅಲ್ಲದೇ ಆಗುಂಬೆ ಭಾಗದಿಂದ ಸಾಗಾಣೆಯಾಗುವ ಮರಳು ಚಿಕ್ಕಮಗಳೂರು ಜಿಲ್ಲೆಗೆ ಸೇರುತ್ತಿದ್ದು ಅಕ್ರಮ ತಡೆಯುವ ಸವಾಲು ಎದುರಾಗಿದೆ.

ಪರಿಸರ ಸೂಕ್ಷ ವಲಯ ಬಳಕೆ:

ಕೆ.ಕಸ್ತೂರಿ ರಂಗನ್‌ ಅಧ್ಯಕ್ಷತೆಯ ಪಶ್ಚಿಮಘಟ್ಟ ಜೀವವೈವಿಧ್ಯ ತಜ್ಞರ ಸಮಿತಿಯು ಶೇ 37ರಷ್ಟು ಪ್ರಮಾಣದ ಪರಿಸರ ಸೂಕ್ಷ್ಮವಲಯ ಗುರುತಿಸಿದೆ. 2014ರಲ್ಲಿ ವರದಿ ಆಧರಿಸಿ ಸರ್ಕಾರ ಗುರುತಿಸಿದ್ದ ಮಹಿಷಿ, ಹೊಳೆಕೊಪ್ಪ ಮರಳು ಕ್ವಾರಿಗೆ ಅರಣ್ಯ ಇಲಾಖೆ ಅನುಮತಿ ನೀಡದೆ ನಿರಾಕರಿಸಿತ್ತು. ಆದರೆ, ಇಂದಿಗೂ ಕ್ವಾರಿ ಮತ್ತು ಕ್ವಾರಿಗೆ ಹೊಂದಿಕೊಂಡ ಪ್ರದೇಶದಲ್ಲಿ ಸಾವಿರಾರು ಲಾರಿ ಲೋಡ್ ಮರಳು ಸಾಗಾಟವಾಗುತ್ತಿದೆ.

ಅಂತರ್ಜಲ ಕುಸಿತದ ಆತಂಕ:

ನದಿ ಪಾತ್ರದಲ್ಲಿ ಅಕ್ರಮ ಮರಳು ಎತ್ತುವಳಿಯನ್ನು ಪ್ರಶ್ನಿಸುವ ಸಾರ್ವಜನಿಕರಿಗೆ, ‘ಮರಳು ತೆಗೆಯುವುದರಿಂದ ಅಂತರ್ಜಲ ವೃದ್ಧಿಯಾಗಲಿದೆ. ನದಿಯಲ್ಲಿ ಮರಳು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ’ ಎಂಬ ಸಬೂಬು ತೇಲಿ ಬಿಡಲಾಗುತ್ತಿದೆ. ಇದರಿಂದ ಅಂತರ್ಜಲ ಪ್ರಮಾಣ ಕುಸಿಯುವ ಆತಂಕ ಎದುರಾಗಿದೆ. ವಾಸ್ತವವಾಗಿ ‘ನದಿಯಲ್ಲಿರುವ ಮರಳಿನ ಕಣಗಳಿಂದಾಗಿ ಅಂತರ್ಜಲ ವೃದ್ಧಿಯಾಗಲಿದೆ. ಮಣ್ಣಿನ ಸಾಂದ್ರತೆ ಮತ್ತು ನೀರಿನ ಸಾರ ಹಿಡಿದಿಟ್ಟುಕೊಳ್ಳಲು ಮರಳಿನಂತಹ ಸಣ್ಣ ಕಣಗಳೇ ಹೆಚ್ಚು ಉಪಯುಕ್ತವಾಗಿವೆ. ಮರಳು, ಮಣ್ಣು ಮತ್ತು ಗೋಡಗಳ ನಡುವಿನ ಅಂತರದಲ್ಲಿ ಮರಳು ನೀರು ಇಂಗುವಿಕೆಗೆ ಸಹಕಾರಿಯಾಗಿದೆ’ ಎಂದು ಕರ್ನಾಟಕ ಅಂತರ್ಜಲ ಪ್ರಾಧಿಕಾರದ ನಿರ್ದೇಶಕ ರಾಮಚಂದ್ರಯ್ಯ ಬಿ.ಜಿ. ಹೇಳುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನ ಚಂಗಾರು ಬಳಿ ಬರಿದಾದ ಮಾಲತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಚಂಗಾರು ಬಳಿ ಬರಿದಾದ ಮಾಲತಿ ನದಿಯಲ್ಲಿ ಮರಳು ಗಣಿಗಾರಿಕೆ ನಡೆಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹೊಳೆಕೊಪ್ಪ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹೊಳೆಕೊಪ್ಪ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಿರುವುದು
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಗಮನದಲ್ಲಿದೆ. ಅಕ್ರಮ ಸಾಗಣೆ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. 30 ಕ್ವಾರಿಗಳಿಗೆ ಬಾಕ್ಸ್‌ ಟೆಂಡರ್‌ ಆಹ್ವಾನಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಗುರುದತ್ತ ಹೆಗಡೆ ಶಿವಮೊಗ್ಗ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT