ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಸಡವಿ ಪದ್ಧತಿಯ ದಟ್ಟಡವಿ ಸೃಷ್ಟಿಗೆ ಚಾಲನೆ- 40 ಕಾಡು ಪ್ರಭೇದದ 300 ಸಸಿ ನಾಟಿ

Last Updated 23 ಜೂನ್ 2021, 4:36 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಕೆಳದಿ ಗ್ರಾಮದ ಸಮೀಪ ಶ್ರೀಧರ್ ಭಟ್ ಅವರ ಖಾಸಗಿ ಭೂಮಿಯಲ್ಲಿ ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ವತಿಯಿಂದ ಕ್ಯಾಸಡವಿ ಪದ್ಧತಿಯಲ್ಲಿ ದಟ್ಟಡವಿಯ ಸೃಷ್ಟಿಗೆ ಮಂಗಳವಾರ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಳಿ, ‘ಕ್ಯಾಸಾಳ ಅಥವಾ ಕೆಂದಳಿಲು ಎಂಬ ಅಳಿಲು ಕುಟುಂಬದ ವನ್ಯಪ್ರಾಣಿಯ ಬೀಜ ಪ್ರಸರಣದ ಮೂಲಕ ಅರಣ್ಯ ವೃದ್ಧಿಸುವ ಬದುಕಿನ ಗತಿಯಿಂದ ಕ್ಯಾಸಡವಿ ಅರಣ್ಯ ನಿರ್ಮಾಣ ಪದ್ಧತಿ ಪ್ರೇರಣೆಗೊಂಡಿದೆ’ ಎಂದು ತಿಳಿಸಿದರು.

‘ಈ ಪದ್ಧತಿಯು ಅತ್ಯಂತ ಕಡಿಮೆ ನಿರ್ವಹಣೆಯನ್ನು ಬಯಸುತ್ತದೆ. ಸ್ಥಳೀಯ ಕಾಡು ಜಾತಿಯ ಸಸ್ಯಗಳನ್ನು ಆಯ್ಕೆ ಮಾಡಿಕೊಂಡು ಕಡಿಮೆ ಅಂತರದಲ್ಲಿ ಸಸಿಗಳನ್ನು ನೆಡುವುದು ಈ ಪದ್ಧತಿಯ ಜೀವಾಳವಾಗಿದೆ. ಹಲವು ಸಂಖ್ಯೆಗಳಲ್ಲಿ ನೆಟ್ಟ ಕಾಡು ಸಸ್ಯಗಳಲ್ಲಿ ಕೆಲವು ಸಮರ್ಥವಾದ ಸಸ್ಯಗಳು ಮಾತ್ರ ನೈಸರ್ಗಿಕ ಆಯ್ಕೆಯ ಮೂಲಕ ಉಳಿದುಕೊಂಡು ದಟ್ಟವಾದ ಹಸಿರು ಹೊದಿಕೆಯನ್ನು ನಿರ್ಮಿಸುತ್ತವೆ’ ಎಂದು ಹೇಳಿದರು.

ಈ ಪದ್ಧತಿಯಿಂದ ಶೀಘ್ರ ಅರಣ್ಯ ವೃದ್ಧಿ, ಭೂ ಸವಕಳಿ ತಡೆ, ತೇವಾಂಶ ಉಳಿವಿಕೆ, ವನ್ಯ ಜೀವಿಗಳಿಗೆ ನೆಲೆ ಒದಗಿಸುವುದು ಸೇರಿ ಹಲವು ಪರಿಸರಸ್ನೇಹಿ ಉಪಯೋಗಗಳಿವೆ ಎಂದು ಅವರು ಮಾಹಿತಿ ನೀಡಿದರು.

ಮರವಾಗಬಲ್ಲ 40 ಕಾಡು ಪ್ರಭೇದದ 300 ಸಸಿಗಳನ್ನು ನಾಲ್ಕು ಸಾವಿರ ಚದರ ಅಡಿ ಜಾಗದಲ್ಲಿ ಎರಡು ಅಡಿ ಅಂತರವಿಟ್ಟು ನೈಸರ್ಗಿಕ ಕಾಡಿನ ರೀತಿಯಲ್ಲಿ ಕ್ರಮವಲ್ಲದ ವಿನ್ಯಾಸದಲ್ಲಿ ನೆಡಲಾಯಿತು.

ಲೋಕಹಿತಂ ಪ್ರತಿಷ್ಠಾನ, ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ, ಹಸಿರುಸಾಗರ, ಅಭಿನಯ ಸಾಗರ ಮತ್ತು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಕಾರ್ಯಕರ್ತರುಸಸಿ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಡಾ.ಗಿರೀಶ್ ಜನ್ನೆ, ಸವಿನಯ ಮಾಲ್ವೆ, ಶಂಕರಶರ್ಮ, ವಿನಯ್ ಗದ್ದೇಮನೆ, ಕೌಶಿಕ್ ಕಾನುಗೋಡು, ನಟರಾಜ ಗುಲಗಂಜಿಮನೆ,
ಅಭಿಷೇಕ್, ರಾಮಕೃಷ್ಣ ಹೆಗಡೆ ಬೇಳೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT