ಮಂಗಳವಾರ, ಜೂನ್ 28, 2022
23 °C
‘ಪ್ರಜಾವಾಣಿ’ಯ ಕುಗ್ರಾಮಕ್ಕೆ ಕಂದೀಲು ವರದಿಯ ಬೆಳ್ಳೂರಿನಲ್ಲಿ ಜಿಲ್ಲಾಧಿಕಾರಿ ವಾಸ್ತವ್ಯ

ರಿಪ್ಪನ್‌ಪೇಟೆ: ಸಮಸ್ಯೆಗಳ ಪರಿಹಾರಕ್ಕೆ ಕ್ರಮ ವಹಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಿಪ್ಪನ್‌ಪೇಟೆ: ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ, ಸಾರಿಗೆ ಸೌಕರ್ಯ ಮತ್ತು ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಸೇರಿ ಗ್ರಾಮಸ್ಥರ ಹಲವು ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಅಧಿಕಾರಿಗಳಿಗೆ ಸೂಚಿಸಿದರು.

ಹೊಸನಗರ ತಾಲೂಕಿನ ಕೆರೆಹಳ್ಳಿ ಹೋಬಳಿಯ ಬೆಳ್ಳೂರು ಗ್ರಾಮದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಬೆಳ್ಳೂರು ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರೊಂದಿಗೆ ಅನೌಪಚಾರಿಕ ಸಭೆ ನಡೆಸಿ ಮಾತನಾಡಿದರು.

ಗ್ರಾಮಸ್ಥ ಬುಕ್ಕಿವರೆ ದೇವೇಂದ್ರಪ್ಪ ಮಾತನಾಡಿ, ‘ಭತ್ತ, ಜೋಳ, ಶುಂಠಿ, ಕಬ್ಬು ಬೆಳೆಗೆಳಿಗೆ ವೈಜ್ಞಾನಿಕ ಬೆಲೆ ನಿಗದಿ, ಆರ್‌ಟಿಸಿಯಲ್ಲಿ ಹೆಸರು ಮತ್ತು ಬೆಳೆ ನಮೂದು, ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿಯಲ್ಲಿ ಭತ್ತ, ರಾಗಿ, ಗೋಧಿ ಖರೀದಿ ಕೇಂದ್ರ ಸ್ಥಾಪಿಸಿ ಖರೀದಿಸುವಂತೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಬೋರ್ಡೊ ಔಷಧಕ್ಕೆ ಕಳೆದ ಬಾರಿ ಸಬ್ಸಿಡಿ ದೊರೆತಿಲ್ಲ’ ಎಂದು ಹೇಳಿದರು.

ಆಗಸ್ಟ್‌ 2019ರಲ್ಲಿ ಉಂಟಾದ ಪ್ರವಾಹದಿಂದ ಹಾನಿಗೊಳಗಾದವರಿಗೆ ಈವರೆಗೆ ಪರಿಹಾರ ದೊರೆತಿಲ್ಲ. ಭತ್ತ ನಾಟಿಗೆ ಯಂತ್ರಗಳ ಸಹಾಯ,
ಬಗರ್‌ಹುಕುಂ ಬೆಳೆಗಾರರಿಗೂ ಅಧಿಕೃತ ಬೆಳೆ ಮಾರಾಟ ವ್ಯವಸ್ಥೆ ದೊರಕಿಸುವಂತೆ ಎಂದು ಮನವಿ ಮಾಡಿದರು.

‘ದರ ಸ್ಪರ್ಧೆ ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟಲು ಸ್ಥಳೀಯ ಸಹಕಾರ ಕ್ಷೇತ್ರದ ಬಳಕೆ ಮಾಡಿಕೊಳ್ಳಬೇಕು. ನೀವು ಸಹಕಾರ ಸೊಸೈಟಿ
ರಚಿಸಿದಲ್ಲಿ ನಾವು ಮೂಲಸೌಕರ್ಯ ನೀಡುತ್ತೇವೆ. ರೈತರು ಯಂತ್ರೋಪಕರಣ ಸೇರಿ ವಿವಿಧ ಸೌಲಭ್ಯ ಪಡೆಯಲು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ದಿನ ನಿಗದಿಪಡಿಸಿಕೊಂಡು ಎಲ್ಲ ರೈತರೂ ನೋಂದಣಿ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಯೋಗೇಶ್, ‘ಬೆಳ್ಳೂರಿಗೆ ನ್ಯಾಯಬೆಲೆ ಅಂಗಡಿ ಮಂಜೂರು, ಬೆಂಬಲ ಬೆಲೆಯಲ್ಲಿ ಬೆಳೆ ಖರೀದಿಗೆ ಕ್ರಮ, ಕಾಲುಸಂಕ ನಿರ್ಮಿಸಿಕೊಡಬೇಕು’ ಎಂದು ಮನವಿ ಸಲ್ಲಿಸಿದರು.

ಸ್ಥಳೀಯ ನಿವಾಸಿ ರಾಜಕುಮಾರ್ ಮಾತನಾಡಿ, ‘ಶಾಲಾ–ಕಾಲೇಜು ಮಕ್ಕಳು ವಿದ್ಯಾಸಂಸ್ಥೆಗಳಿಗೆ ಹೋಗಿ ಬರಲು ಈ ಹಿಂದೆ ಇದ್ದ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಸರ್ಕಾರಿ ಬಸ್‌ ವ್ಯವಸ್ಥೆ ಮಾಡಿಕೊಡಬೇಕು’ ಎಂದು ವಿನಂತಿಸಿದರು.

ಜಿಲ್ಲಾಧಿಕಾರಿ ಸೆಲ್ವಮಣಿ, ‘ಖಾಸಗಿ ಬಸ್ ಮಾರ್ಗದವರು ಬಸ್‌ ಬಿಡದಿದ್ದರೆ ಸರ್ಕಾರಿ ಬಸ್‍ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಊರಿನಲ್ಲಿ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ನಾಗಪ್ಪ ಅರ್ಜಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ‘ಸಣ್ಣ ಅಂಗಡಿಗಳಲ್ಲಿ ಮದ್ಯ ಮಾರಾಟ ಮತ್ತು ಸಾರ್ವಜನಿಕವಾಗಿ ಮದ್ಯ ಸೇವನೆ ಗಂಭೀರ ವಿಚಾರ. ಅಬಕಾರಿ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ರಸ್ತೆ, ಕುಡಿಯುವ ನೀರು, ಮೂಲಸೌಕರ್ಯಗಳು, ಸಾಮಾಜಿಕ ಭದ್ರತೆ, ಕಂದಾಯ ಅರಣ್ಯ ಸೇರಿ ಹಲವಾರು ಅರ್ಜಿಗಳನ್ನು ಸ್ವೀಕರಿಸಿದ
ಜಿಲ್ಲಾಧಿಕಾರಿ ಅವರು ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಶಾಸಕ ಎಚ್‌. ಹಾಲಪ್ಪ ಹರತಾಳು ಬೆಳ್ಳೂರು ಮಧ್ಯಾಹ್ನ ಗ್ರಾಮಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ಅವರೊಂದಿಗೆ ಬೆಳ್ಳೂರಿನ ಅಂಗನವಾಡಿ,
ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂತರ ಗುಳಿ ಗುಳಿ ಶಂಕರ ದೇವಸ್ಥಾನಕ್ಕೆ ಭೇಟಿ ಕೊಟ್ಟು, ಮಸ್ಕಾನಿ, ದೂಬೈಲು, ಹಿರೇಸಾನಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಕುಂದು ಕೊರತೆ ಆಲಿಸಿದರು.

ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಪಿಂಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಶೀಲ್ದಾರ್ ರಾಜೀವ್ ಸ್ವಾಗತಿಸಿದರು, ಎಸಿ ನಾಗರಾಜ್, ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ದಿವಾಕರ್‌, ಸದಸ್ಯರಾದ ತಿಮ್ಮಣ್ಣ ಬೆಳ್ಳೂರು, ಹೇಮಾವತಿ, ಪಲ್ಲವಿ, ಕವಿತಾ, ಅರುಣ್‌, ತಾಲ್ಲೂಕು ಪಂಚಾಯಿತಿ ಇಒ ಪ್ರವೀಣ್‍ಕುಮಾರ್, ಅರಣ್ಯ ಇಲಾಖೆ ಎಸಿಎಫ್, ಡಿಸಿಎಫ್, ಆರ್‌ಎಫ್‍ಒ, ಕೃಷಿ, ತೋಟಗಾರಿಕೆ ಸೇರಿ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಸಮಸ್ಯೆಗಳ ಬೆಳಕು ಚೆಲ್ಲಿದ ‘ಪ್ರಜಾವಾಣಿ’

ಕುಗ್ರಾಮಕ್ಕೆ ಕಂದೀಲು ಸರಣಿ ಲೇಖನ ವಿಭಾಗದಲ್ಲಿ ಗ್ರಾಮದ ಸಮಸ್ಯೆಗಳ ಬಗ್ಗೆ ಪ್ರಜಾವಾಣಿ ಬೆಳಕು ಚೆಲ್ಲಿದ್ದರಿಂದ ಜಿಲ್ಲಾಧಿಕಾರಿ ಅವರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಆಲಿಸಿ, ಪರಿಹಾರದ ಭರವಸೆ ನೀಡಿರುವುದು ಸಂತಸ ತಂದಿದೆ. ಜನರು ತಮ್ಮ ಕೆಲಸಕಾರ್ಯಗಳಿಗಾಗಿ ಅನಗತ್ಯವಾಗಿ ಅಲೆದಾಟ ಮಾಡುವುದನ್ನು ತಪ್ಪಿಸಿದೆ ಎಂದು ಸ್ಥಳೀಯ ಮುಖಂಡ ಬೆಳ್ಳೂರು ತಿಮ್ಮಪ್ಪ ತಿಳಿಸಿದರು.

ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮೆಚ್ಚುಗೆ
ಬೆಳಿಗ್ಗೆ 11 ರಿಂದ ರಾತ್ರಿ 9.30ರ ವರೆಗೆ ಸಮಸ್ಯೆ ಹೇಳಿಕೊಂಡವರಿಗೆ ನಗುಮೊಗದಿಂದ, ಸಮಾಧಾನದಿಂದಲೇ ಉತ್ತರಿಸಿ, ಪರಿಹಾರ ಸೂಚಿಸಿದ ಜಿಲ್ಲಾಧಿಕಾರಿ ಅವರ ಸರಳ ನಡೆಗೆ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸಿದರು.

ರಾತ್ರಿ 10ಕ್ಕೆ ಊಟ ಮಾಡಿ 10.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ ಅವರನ್ನು ಶನಿವಾರ ಬೆಳಿಗ್ಗೆ 8ಕ್ಕೆ ಗ್ರಾಮಸ್ಥರು ಅದ್ದೂರಿಯಾಗಿ ಬೀಳ್ಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು