ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾವತಿ: ಹೆಚ್ಚುತ್ತಿರುವ ಅಂತರ್ಜಾತಿ ವಿವಾಹ, ಪ್ರೋತ್ಸಾಹಧನಕ್ಕೂ ಅರ್ಜಿ ಸಲ್ಲಿಕೆ

ಕಿರಣ್‌ಕುಮಾರ್
Published 21 ಜೂನ್ 2024, 7:12 IST
Last Updated 21 ಜೂನ್ 2024, 7:12 IST
ಅಕ್ಷರ ಗಾತ್ರ

ಭದ್ರಾವತಿ: ಉಕ್ಕಿನ ನಗರಿಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿವೆ. ಇದಕ್ಕೆ ಪೂರಕವಾಗಿ ಅಂತರ್ಜಾತಿ ಮದುವೆ ಆದ ದಂಪತಿಗೆ ಸಾಮಾಜಿಕ ಸಬಲೀಕರಣ ಕಾರ್ಯಕ್ರಮದ ಅಡಿಯಲ್ಲಿ ಸರ್ಕಾರ ನೀಡುವ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗಿದೆ.   

ಭದ್ರಾವತಿ ತಾಲ್ಲೂಕಿನಲ್ಲಿ 2015-16ರಲ್ಲಿ ಅಂತರ್ಜಾತಿ ವಿವಾಹ ಆದ 15 ಜೋಡಿ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ್ದು, 2017ರಲ್ಲಿ 32, 2018ರಲ್ಲಿ 20, 2019ರಲ್ಲಿ 67, 2020ರಲ್ಲಿ 40, 2021ರಲ್ಲಿ 79, 2022ರಲ್ಲಿ 73, 2023ರಲ್ಲಿ 77 ಜೋಡಿ ಅರ್ಜಿ ಸಲ್ಲಿಸಿವೆ.

ಇದೀಗ 2024ರ ಫೆಬ್ರವರಿ ವರೆಗೆ ಕೇವಲ 2 ತಿಂಗಳಲ್ಲಿ ಅಂತರ್ಜಾತಿ ವಿವಾಹ ಆದ 41 ಜೋಡಿ ಪ್ರೋತ್ಸಾಹಧನಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿವೆ.

ತಾಲ್ಲೂಕಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಂತರ್ಜಾತಿ ವಿವಾಹವಾದ ದಂಪತಿ 6 ತಿಂಗಳಿಂದ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಈಗ ಆ ಅವಧಿಯನ್ನೂ ವಿಸ್ತರಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಗೋಪಾಲಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಜಿ ಸಲ್ಲಿಸಲು ನಿಯಮಗಳು:

ದಂಪತಿಯ ವಾರ್ಷಿಕ ಆದಾಯ ₹ 5 ಲಕ್ಷ ಮೀರಿರಬಾರದು. ಅಂತರ್ ಧರ್ಮೀಯ ವಿವಾಹಗಳು ಈ ಯೋಜನೆ ವ್ಯಾಪ್ತಿಗೆ ಒಳಪಡುವುದಿಲ್ಲ. ಕೇವಲ ಅಂತರ್ಜಾತಿ ವಿವಾಹಗಳಿಗಷ್ಟೇ ಈ ಪ್ರೋತ್ಸಾಹಧನ ಮೀಸಲು. ಪರಿಶಿಷ್ಟ ಜಾತಿ ಯುವಕರು  ಹಿಂದೂ ಧರ್ಮದ ಇತರೆ ಜಾತಿಯ ಯುವತಿಯರನ್ನು ವಿವಾಹವಾದಲ್ಲಿ ಅಂತಹ ದಂಪತಿಗಳಿಗೆ ₹ 2.50 ಲಕ್ಷ ಪ್ರೋತ್ಸಾಹಧನ, ಪರಿಶಿಷ್ಟ ಜಾತಿಯ ಯುವತಿಯರು ಇತರೆ ಜಾತಿಯ ಯುವಕರನ್ನು ವಿವಾಹ ಆದಲ್ಲಿ ₹ 3 ಲಕ್ಷ ಪ್ರೋತ್ಸಾಹಧನವು ಸರ್ಕಾರದಿಂದ ದೊರೆಯಲಿದೆ ಎಂದು ಅವರು ತಿಳಿಸಿದರು.

ಈ ದಾಖಲೆ ಅಗತ್ಯ:

ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲಾದ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ದಂಪತಿಯ ನಿವಾಸಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ವಿವಾಹಿತರ ಜಂಟಿ ಖಾತೆಯ ಬ್ಯಾಂಕ್ ಪಾಸ್ ಪುಸ್ತಕ ಪ್ರೋತ್ಸಾಹಧನ ಅರ್ಜಿ ಜೊತೆ ಸಲ್ಲಿಸಲು ಅಗತ್ಯವಿರುವ ದಾಖಲೆಗಳಾಗಿವೆ ಎಂದು ಅವರು ಹೇಳಿದರು.

‘ಪಾಲಕರ ವಿರೋಧದ ನಡುವೆ ಈ ರೀತಿಯ ಮದುವೆಗಳು ನಡೆಯುವುದು ಸಾಮಾನ್ಯ. ಬದುಕು ಕಟ್ಟಿಕೊಳ್ಳಲು ಕುಟುಂಬದಿಂದ ಯಾವುದೇ ಆರ್ಥಿಕ ಸಹಾಯ ಸಿಗುವುದಿಲ್ಲ. ಹೀಗಿರುವಾಗ ಮದುವೆ ಆದ ಹೊಸತರಲ್ಲಿ ಜೀವನ ಪ್ರಾರಂಭಿಸಲು ಪ್ರೋತ್ಸಾಹಧನ ಸಹಾಯಕ. ಸರ್ಕಾರ ಕೊಟ್ಟ ನೆರವಿನಿಂದ ಸಣ್ಣ ಬಟ್ಟೆ ವ್ಯಾಪಾರ ಪ್ರಾರಂಭಿಸಿದ್ದೇವೆ’  ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಫಲಾನುಭವಿ ಒಬ್ಬರು ತಿಳಿಸಿದರು.

‘ಅಂತರ್ಜಾತಿ ವಿವಾಹವಾದ ನಂತರ ನಿಯಮಾನುಸಾರ ಎಲ್ಲ ದಾಖಲೆಗಳೊಂದಿಗೆ ಪ್ರೋತ್ಸಾಹಧನ ಕೋರಿ ಅರ್ಜಿ ಸಲ್ಲಿಸಲಾಯಿತು. ಕೆಲವು ದಿನಗಳ ನಂತರ ಪರಿಶೀಲನೆಗಾಗಿ ಅಧಿಕಾರಿಗಳು ಮನೆಗೆ ಭೇಟಿ ನೀಡಿದ್ದರು. ತದ ನಂತರವೇ ಹಣ ಜಂಟಿ ಖಾತೆಗೆ ಜಮಾ ಆಗಿದೆ’ ಎಂದು ತಾಲ್ಲೂಕಿನ ಕೇಶವಪುರದಲ್ಲಿರುವ ಫಲಾನುಭವಿಯೊಬ್ಬರು ವಿವರಿಸಿದರು.

ಭದ್ರಾವತಿ ತಾಲ್ಲೂಕಿನಲ್ಲಿ ಅಂತರ್ಜಾತಿ ವಿವಾಹ ಪ್ರಮಾಣ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಸರ್ಕಾರದ ಪ್ರೋತ್ಸಾಹಧನ ಯೋಜನೆ ಅವರಿಗೆ ನೈತಿಕವಾಗಿ ಬೆಂಬಲ ನೀಡಲಿದೆ.
ದಿವ್ಯಾ ಶಿಕ್ಷಕಿ ಭದ್ರಾವತಿ
ಅಂತರ್ಜಾತಿ ವಿವಾಹದ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಿದ ಕೂಡಲೇ ಹಣ ಕೊಡುವುದಿಲ್ಲ. ಬೇರೆ ಕಡೆಯೂ ಈ ಸೌಲಭ್ಯ ಪಡೆದಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವೇ ನೀಡಲಾಗುವುದು
ಎಂ.ಗೋಪಾಲಪ್ಪ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT