ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಧಾರ್ಮಿಕ ಕೇಂದ್ರಗಳ ಮೇಲೆ ಹಸ್ತಕ್ಷೇಪ ಸಲ್ಲ

ರಾಣೆಬೆನ್ನೂರಿನ ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ
Last Updated 8 ಅಕ್ಟೋಬರ್ 2021, 6:09 IST
ಅಕ್ಷರ ಗಾತ್ರ

ಸಾಗರ: ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರ ಹಸ್ತಕ್ಷೇಪ ನಡೆಸುವುದು ಸರಿಯಾದ ಕ್ರಮವಲ್ಲ ಎಂದು ರಾಣೆಬೆನ್ನೂರಿನ ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಗುರುವಾರ ಏರ್ಪಡಿಸಿದ್ದ ನವರಾತ್ರಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

‘ಧಾರ್ಮಿಕ ಕೇಂದ್ರಗಳು ಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವಂತಾಗಬೇಕು. ಧಾರ್ಮಿಕ ಕೇಂದ್ರಗಳ ಆಚರಣೆಗಳ ಮೇಲೆ ಕಡಿವಾಣ ಹಾಕುವುದು ಸರಿಯಲ್ಲ’ ಎಂದರು.

ಸಿಗಂದೂರು ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿ ನವರಾತ್ರಿ ಉತ್ಸವದ ಅಂಗವಾಗಿ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಸೇವಾ ಚಟುವಟಿಕೆಯಲ್ಲೂ ಭಾಗಿಯಾಗಿರುವುದು ಗಮನಾರ್ಹ ಸಂಗತಿ. ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವ ಮೂಲಕ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಕೈಜೋಡಿಸುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು.

ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ಎಸ್. ರಾಮಪ್ಪ, ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ಇದ್ದರು.

ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸ್ವಾಮೀಜಿ ಒತ್ತಾಯ:ರಾಜ್ಯದಲ್ಲಿರುವ ಆರ್ಯ ಈಡಿಗ ಸಮುದಾಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರ ಆರ್ಯ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ರಾಣೆಬೆನ್ನೂರಿನ ಶರಣ ಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ 26 ಉಪ ಪಂಗಡಗಳನ್ನು ಒಳಗೊಂಡಿರುವ ಈಡಿಗ ಸಮುದಾಯದ ಜನಸಂಖ್ಯೆ 80 ಲಕ್ಷದಷ್ಟಿದೆ. ಈ ಸಮುದಾಯಕ್ಕೆ ಸೇರಿದ ಏಳು ಮಂದಿ ಶಾಸಕರಾಗಿದ್ದು, ಇಬ್ಬರು ಸಚಿವರಾಗಿದ್ದಾರೆ. ಉಳಿದ ಸಮುದಾಯಗಳಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಿರುವ ಮಾದರಿಯಲ್ಲೇ ಈಡಿಗ ಸಮುದಾಯಕ್ಕೂ ನಿಗಮ ಸ್ಥಾಪನೆಯಾಗಬೇಕು’ ಎಂದು ಆಗ್ರಹಿಸಿದರು.

ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆ ಫಲಿತಾಂಶದ ನಂತರ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸುವುದಾಗಿ ಮಾತು ಕೊಟ್ಟಿದ್ದರು. ಆದರೆ ನಂತರ ಅವರು ಅದನ್ನು ಈಡೇರಿಸದೇ ವಚನಭ್ರಷ್ಟರಾಗಿದ್ದಾರೆ ಎಂದು ದೂರಿದರು.

ಬುಡಕಟ್ಟು ಸಮುದಾಯಕ್ಕೆ ಸೇರಿರುವ ಈಡಿಗರ ಕುಲಕಸುಬು ಈಚಲು ಮರದಿಂದ ಸೇಂದಿ ಇಳಿಸುವುದು ಆಗಿತ್ತು. ಸರ್ಕಾರ ಸೇಂದಿ ಇಳಿಸುವುದಕ್ಕೆ ನಿಷೇಧ ಹೇರಿದ ನಂತರ ಈಡಿಗ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವತ್ತ ಗಮನಹರಿಸಿಲ್ಲ. ರಾಜಸ್ಥಾನ, ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಸೇಂದಿ ಇಳಿಸುವ ಕುಲಕಸುಬು ಮಾಡುತ್ತಿದ್ದವರಿಗೆ ಅದರ ನಿಷೇಧದ ನಂತರ ಮಾಸಾಶನ ನೀಡಲಾಗುತ್ತಿದೆ. ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಬೇಕು ಎಂದು ಆಗ್ರಹಿಸಿದರು.

ರಾಯಚೂರು, ಸಿಂಧನೂರು, ಕೊಪ್ಪಳ, ಮಸ್ಕಿ ಹೀಗೆ ರಾಜ್ಯದ ಹಲವು ಭಾಗಗಳಲ್ಲಿ ಈಗಲೂ ಈಚಲು ಮರಗಳು ಇರುವ ಭೂ ಪ್ರದೇಶವಿದೆ. ಅದನ್ನು ಈಡಿಗ ಸಮುದಾಯದವರ ವಶಕ್ಕೆ ನೀಡಿ ಸೇಂದಿ ಇಳಿಸಲು ಅವಕಾಶ ಮಾಡಿಕೊಡಬೇಕು. ಹಾಗಾದಲ್ಲಿ ಹಳ್ಳಿಗಳಲ್ಲಿ ಕಡಿಮೆ ದರದಲ್ಲಿ ಸೇಂದಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಿಗಂದೂರು ಚೌಡೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಸರ್ಕಾರ ಹುನ್ನಾರ ನಡೆಸಿದೆ. ಈಡಿಗ ಸಮುದಾಯಕ್ಕೆ ಸೇರಿದ ಈ ದೇವಸ್ಥಾನದ ವಿಷಯಕ್ಕೆ ಸರ್ಕಾರ ಕೈಹಾಕಿದರೆ ಮುಂಬರುವ ಚುನಾವಣೆಯಲ್ಲಿ ಇದಕ್ಕೆ ಕಾರಣರಾದವರಿಗೆ ತಕ್ಕ ಪಾಠ ಕಲಿಸಲು ಈಡಿಗ ಸಮುದಾಯ ಮುಂದಾಗುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದರು.

ಶಿವಮೊಗ್ಗದಲ್ಲಿ ಸ್ಥಾಪನೆಯಾಗುತ್ತಿರುವ ನೂತನ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಹೆಸರನ್ನು ಇಡಬೇಕು. ಮುಖ್ಯಮಂತ್ರಿಯಾಗಿದ್ದಾಗ ಹಲವು ಜನಪರ ಯೋಜನೆಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ವಿಮಾನ ನಿಲ್ದಾಣಕ್ಕೆ ಅವರ ಹೆಸರು ಇಡುವುದೇ ಸೂಕ್ತ ಎಂದರು.

ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್ ಕೈಸೋಡಿ, ಪ್ರಮುಖರಾದ ಸುಧಾಕರ ಕುಗ್ವೆ, ಕಲ್ಲಪ್ಪ, ರಮೇಶ್, ಬಸವರಾಜ್ ಎಚ್. ಮಲ್ಲಿಕಾರ್ಜುನ ಈಳಿಗೇರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT