ಚಿನ್ನಾಭರಣ ಕಳವು: ಅತ್ತೆ, ಅಳಿಯನ ಬಂಧನ

ಸೊರಬ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರವಾಡ ಗ್ರಾಮದ ಮರಿಯಪ್ಪ ಗೋಪಿನಾಯ್ಕ್ ಹಾಗೂ ಕಮಲಮ್ಮ ಬಂಧಿತರು. ಬಂಧಿತರಿಂದ 37 ಗ್ರಾಂ ಬಂಗಾರ ಮತ್ತು 200 ಗ್ರಾಂ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ರಂಗನಾಥ ದೇವಸ್ಥಾನದ ಸಮೀಪ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಮರಿಯಪ್ಪನನ್ನು ಗಸ್ತು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಇಲ್ಲಿನ ರಾಘವೇಂದ್ರ ಬಡಾವಣೆಯಲ್ಲಿ ಜ. 31ರಂದು ಪ್ರೇಮಾ ನಾಗರಾಜ ಎಂಬುವವರ ಮನೆಯಲ್ಲಿ ಕಳವು ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
‘ಆರೋಪಿಯು ಪುನಃ ಪಟ್ಟಣಕ್ಕೆ ಕಳವು ಮಾಡಲೆಂದು ಹೊಂಚು ಹಾಕಿ ಬಂದಿರುವುದು ತಿಳಿದಿದೆ. ಕಾರವಾರದ ಶಿರವಾಡ ಗ್ರಾಮದವರಾದ ಬಂಧಿತರಿಬ್ಬರು ಅತ್ತೆ– ಅಳಿಯ ಎಂಬುದು ವಿಶೇಷ. 10 ಗ್ರಾಂ ಬಂಗಾರವನ್ನು ಒಂದು ಕಡೆ ಒತ್ತೆ ಇಟ್ಟಿದ್ದ ಆರೋಪಿ ಮರಿಯಪ್ಪ, ಉಳಿದ 27 ಗ್ರಾಂ ಬಂಗಾರವನ್ನು ಅತ್ತೆಗೆ ನೀಡಿದ್ದನು. ಆಕೆಯ ಹೆಸರಿನಲ್ಲಿ ಅಲ್ಲಿನ ಖಾಸಗಿ ಬ್ಯಾಂಕ್‌ವೊಂದರಲ್ಲಿ ಒತ್ತೆ ಇಟ್ಟಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಟಿ.ಶೇಖರ್, ಡಿವೈಎಸ್‌ಪಿ ಶಿವಾನಂದ ಮರಕಂಡಿ ಹಾಗೂ ಸಿಪಿಐ ಆರ್.ಡಿ.ಮರುಳಸಿದ್ದಪ್ಪ ಮಾರ್ಗದರ್ಶನಲ್ಲಿ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಎಎಸ್‌ಐ ಶಬ್ಬೀರ್‌ಖಾನ್, ಪರಮೇಶ್ವರ ನಾಯ್ಕ್, ಎಂ.ಬಿ. ನಾಗರಾಜ, ಸಲ್ಮಾನ್‌ಖಾನ್ ಹಾಜಿ, ಸಂದೀಪ್‌ಕುಮಾರ್, ಯು.ಶಿವಾನಂದ, ಕೆ.ಎನ್.ಶಶಿಧರ, ಸಿದ್ದನಗೌಡ ಬಣಕಾರ, ಹೇಮಲತಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.