ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ನಗರಕ್ಕೆ ಹೊಸಮುಖ ಯೋಗೀಶ್

ಕಾಂಗ್ರೆಸ್‌: ಶಿಕಾರಿಪುರ ಗೋಣಿ ಮಾಲತೇಶ್‌, ಶಿವಮೊಗ್ಗಕ್ಕೆ ಗ್ರಾಮೀಣಕ್ಕೆ ಶ್ರೀನಿವಾಸ ಕರಿಯಣ್ಣ
Last Updated 16 ಏಪ್ರಿಲ್ 2023, 3:09 IST
ಅಕ್ಷರ ಗಾತ್ರ

ಶಿವಮೊಗ್ಗ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿ ಶನಿವಾರ ಬಿಡುಗಡೆ ಆಗಿದೆ. ಶಿಕಾರಿಪುರಕ್ಕೆ ಗೋಣಿ ಮಾಲತೇಶ್, ಶಿವಮೊಗ್ಗ ನಗರಕ್ಕೆ ಎಚ್.ಸಿ. ಯೋಗೀಶ್ ಹಾಗೂ ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ ಶ್ರೀನಿವಾಸ್ ಕರಿಯಣ್ಣ ಅವರಿಗೆ ಟಿಕೆಟ್ ಅಂತಿಮಗೊಂಡಿದೆ. ಇದರೊಂದಿಗೆ ಜಿಲ್ಲೆಯ ಏಳು ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಾಗಿದೆ.

ಸಾಮಾಜಿಕ ನ್ಯಾಯಕ್ಕೆ ಒತ್ತುಕೊಟ್ಟಿರುವ ಕಾಂಗ್ರೆಸ್, ಶಿಕಾರಿಪುರಕ್ಕೆ ಕುರುಬ ಸಮಾಜದ ಅಭ್ಯರ್ಥಿ, ಶಿವಮೊಗ್ಗ ನಗರಕ್ಕೆ ಸಾದರ ಲಿಂಗಾಯತ ಹಾಗೂ ಶಿವಮೊಗ್ಗ ಗ್ರಾಮೀಣಕ್ಕೆ ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ ಎಂದು ಹೇಳಲಾಗುತ್ತಿದೆ.

ಸುದೀರ್ಘ ಕಾಯುವಿಕೆಯ ನಂತರ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ಶಿವಮೊಗ್ಗದಲ್ಲಿ ಎಚ್.ಸಿ. ಯೋಗೀಶ್, ಡಾ.ಶ್ರೀನಿವಾಸ ಕರಿಯಣ್ಣ ಹಾಗೂ ಶಿಕಾರಿಪುರದಲ್ಲಿ ಗೋಣಿ ಮಾಲತೇಶ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು.

ತಂತ್ರ ಬದಲಿಸಿದ ಕಾಂಗ್ರೆಸ್: ಶಿವಮೊಗ್ಗ ನಗರದಲ್ಲಿ ಕಾಂಗ್ರೆಸ್ ಈ ಬಾರಿ ತನ್ನ ತಂತ್ರ ಬದಲಿಸಿದೆ. ಬರೋಬ್ಬರಿ 19 ವರ್ಷಗಳ ನಂತರ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಿದೆ. 1999ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಎಚ್‌.ಎಂ. ಚಂದ್ರಶೇಖರಪ್ಪ 2004ರಲ್ಲಿ ಸೋತಿದ್ದರು. ನಂತರ ಈಗ ಅವರ ಪುತ್ರ ಎಚ್.ಸಿ. ಯೋಗೀಶ್‌ಗೆ ಟಿಕೆಟ್ ಕೊಟ್ಟಿದೆ.

ಗೋಣಿ ಮಾಲತೇಶ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಆದರೂ 51,586 ಮತಗಳ ಪಡೆದಿದ್ದರು. ಈ ಬಾರಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ಮತ್ತೆ ಅವರನ್ನೇ ಹುರಿಯಾಳಾಗಿಸಿದೆ. ಶಿಕಾರಿಪುರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದ ನಾಗರಾಜ್ ಗೌಡ ಹಾಗೂ ಪುಷ್ಪಾ ಶಿವಕುಮಾರ್ ನಿರಾಸೆಗೊಳಗಾಗಿದ್ದಾರೆ.

ಶಿವಮೊಗ್ಗ ಗ್ರಾಮೀಣಕ್ಕೆ ಟಿಕೆಟ್ ಪಡೆದಿರುವ ಶ್ರೀನಿವಾಸ್ ಕರಿಯಣ್ಣ ಮಾಜಿ ಶಾಸಕ ಕರಿಯಣ್ಣ ಅವರ ಪುತ್ರ. ಕಳೆದ ಬಾರಿಯೂ ಕಾಂಗ್ರೆಸ್‌ನಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿ ಕೈ ಸುಟ್ಟುಕೊಂಡಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಎರಡೂ ಬಂಜಾರ ಸಮುದಾಯಕ್ಕೆ ಅವಕಾಶ ಕೊಟ್ಟಿರುವುದರಿಂದ ಕಾಂಗ್ರೆಸ್ ಮತ್ತೆ ಶ್ರೀನಿವಾಸ್ ಕರಿಯಣ್ಣ ಅವರನ್ನೇ ನೆಚ್ಚಿಕೊಂಡಿದೆ. ಶಿವಮೊಗ್ಗ ಗ್ರಾಮೀಣ ಕ್ಷೇತ್ರದಿಂದ ಪ್ರಬಲ ಆಕಾಂಕ್ಷಿಗಳಾಗಿದ್ದ ನಾರಾಯಣಸ್ವಾಮಿ ಹಾಗೂ ಪಲ್ಲವಿ ನಿರಾಸೆ ಅನುಭವಿಸಿದ್ದಾರೆ.

ಕಾಂಗ್ರೆಸ್ ಟಿಕೆಟ್ ಪ್ರಕಟಿಸುತ್ತಿದ್ದಂತೆಯೇ ಉಳಿದ ಆಕಾಂಕ್ಷಿಗಳಲ್ಲಿ ಅತೃಪ್ತಿ ಒಡಮೂಡಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ನಡೆಯ ಬಗ್ಗೆ ಅಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪ್ರತಿಕ್ರಿಯಿಸಿದರು. ಶಿಕಾರಿಪುರದಲ್ಲಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದ ನಾಗರಾಜ ಗೌಡ ಮೌನಕ್ಕೆ ಜಾರಿದ್ದು, ಫೋನ್ ಸಂಪರ್ಕಕ್ಕೂ ಸಿಗಲಿಲ್ಲ. ಶಿವಮೊಗ್ಗ ಗ್ರಾಮೀಣದಲ್ಲಿ ಬಹುತೇಕ ಟಿಕೆಟ್ ಖಚಿತವಾಗಿದೆ ಎಂದು ಹೇಳಲಾಗುತ್ತಿದ್ದ ಪಲ್ಲವಿ ನಿರಾಸೆಗೊಂಡರು. ಪಕ್ಷದ ತೀರ್ಮಾನ ಗೌರವಿಸಲಿದ್ದೇವೆ. ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡುವಂತೆ ಬೆಂಬಲಿಗರಿಗೂ ಮನವಿ ಮಾಡುವೆ ಎಂದು ಪಲ್ಲವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸ್ಕ್ರೀನಿಂಗ್ ಸಮಿತಿಯಲ್ಲಿ ನನ್ನ ಹೆಸರು ಅಂತಿಮಗೊಂಡಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳು ಹಾಗೂ ಜಾತಿ ಲೆಕ್ಕಾಚಾರದಿಂದ ನನಗೆ ಟಿಕೆಟ್ ತಪ್ಪಿದೆ. ಆದರೂ ಬೇಸರವಿಲ್ಲ. ಜಿಲ್ಲೆಯ ಏಳೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲ್ಲಿಸಿಕೊಳ್ಳಲು ಕಾರ್ಯಪ್ರವೃತ್ತನಾಗುವೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.

............

ಮಗನಿಗೆ ಟಿಕೆಟ್‌, ಅಪ್ಪನ ಆನಂದ ಭಾಷ್ಪ

ಶಿವಮೊಗ್ಗ ನಗರದ ಟಿಕೆಟ್‌ ಖಚಿತವಾಗುತ್ತಿದ್ದಂತೆಯೇ ಶಿವಪ್ಪ ನಾಯಕ ವೃತ್ತದಲ್ಲಿ ಯೋಗೀಶ್ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸಿದರು. ಎರಡು ದಶಕಗಳ ನಂತರ ಟಿಕೆಟ್ ಸಿಕ್ಕಿದ್ದಕ್ಕೆ ಯೋಗೀಶ್ ಅಪ್ಪ ಎಚ್.ಎಂ. ಚಂದ್ರಶೇಖರ‍ಪ್ಪ ಕಣ್ಣೀರು ಹಾಕಿ ಸಂತಸ ವ್ಯಕ್ತಪಡಿಸಿದರು.

................................

ಆಯನೂರುಗೆ ಟಿಕೆಟ್, ಊಹಾಪೋಹಕ್ಕೆ ತೆರೆ

ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಅವರಿಗೆ ಟಿಕೆಟ್ ಸಿಗಲಿದೆ ಎಂಬ ಊಹಾಪೋಹಕ್ಕೆ, ಕಳೆದ‌ 15 ದಿನಗಳಿಂದ ನಡೆದ ರಾಜಕೀಯ ಚಟುವಟಿಕೆಗೆ ಕಾಂಗ್ರೆಸ್ ಹೈಕಮಾಂಡ್ ತೆರೆ ಎಳೆದಿದೆ. ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ ಸೇರಿದಂತೆ‌ 11 ಮಂದಿ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ನಡೆಸಿದ್ದರು. ಆದರೆ ಕಾಂಗ್ರೆಸ್ ಯೋಗಿಶ್‌ಗೆ ಟಿಕೆಟ್ ಅಂತಿಮಗೊಳಿಸಿದೆ.

..............

ಐವರಿಂದ ಆರು ನಾಮಪತ್ರ ಸಲ್ಲಿಕೆ

ಶಿವಮೊಗ್ಗ ವಿಧಾನಸಭಾ ಚುನಾವಣೆಗೆ ಶನಿವಾರ ಜಿಲ್ಲೆಯಲ್ಲಿ ಒಟ್ಟು ಆರು ನಾಮಪತ್ರ ಸಲ್ಲಿಕೆಯಾಗಿವೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ (ಕೆ.ಆರ್.ಎಸ್) ಭದ್ರಾವತಿಯಲ್ಲಿ ಸುಮಿತ್ರಾ ಬಾಯಿ, ಶಿವಮೊಗ್ಗದಲ್ಲಿ ರಾಜೇಂದ್ರ ಡಿ. ಹಾಗೂ ಸೊರಬದಲ್ಲಿ ಟಿ. ಮಂಜುನಾಥ ನಾಮಪತ್ರ ಸಲ್ಲಿಸಿದರು. ಟಿ. ಮಂಜುನಾಥ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಸಾಗರದಲ್ಲಿ ಬಿಜೆಪಿಯಿಂದ ಹರತಾಳು ಹಾಲಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ತೀ.ನ. ಶ್ರೀನಿವಾಸ ನಾಮಪತ್ರ ಸಲ್ಲಿಸಿದ್ದು, ಒಟ್ಟು ಐವರು ಅಭ್ಯರ್ಥಿಗಳು ಆರು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಶಿವಮೊಗ್ಗ ಗ್ರಾಮಾಂತರ, ತೀರ್ಥಹಳ್ಳಿ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಈವರೆಗೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಅಭ್ಯರ್ಥಿಗಳು ಏಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

.............

ಬಿಜೆಪಿಯವರ ರಾಜೀನಾಮೆ ಪರ್ವದಿಂದ ಟಿಕೆಟ್‌ ಹಂಚಿಕೆ ತಡವಾಯಿತು. ಟಿಕೆಟ್ ಸಿಕ್ಕಿರುವುದು ಹರ್ಷ ಮೂಡಿಸಿದೆ. ನಾಮಪತ್ರ ಸೋಮವಾರ ಸಲ್ಲಿಸಲು ಸದ್ಯ ತೀರ್ಮಾನಿಸಿದ್ದು, ಬೆಂಬಲಿಗರ ಸಭೆ ಕರೆದು ತೀರ್ಮಾನಿಸಲಿದ್ದೇನೆ.
ಎಚ್.ಸಿ. ಯೋಗೀಶ್, ಶಿವಮೊಗ್ಗ ನಗರ ಕಾಂಗ್ರೆಸ್ ಅಭ್ಯರ್ಥಿ

.........

ಸೋತರೂ ಕೂಡ ಸತತವಾಗಿ ಐದು ವರ್ಷ ಕೆಲಸ ಮಾಡಿದ್ದೇನೆ. ಕೊರೊನಾ ಸಂದರ್ಭದಲ್ಲೂ ಜನರೊಂದಿಗೆ ಇದ್ದೆನು. ಇದನ್ನೆಲ್ಲ ಗುರುತಿಸಿ ಪಕ್ಷ ನನಗೆ ಟಿಕೆಟ್ ನೀಡಿದೆ. ಉಳಿದ ಟಿಕೆಟ್ ಆಕಾಂಕ್ಷಿಗಳನ್ನು ಜೊತೆಗೆ ಕರೆದೊಯ್ಯುವೆ.
ಡಾ.ಶ್ರೀನಿವಾಸ ಕರಿಯಣ್ಣ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿ

.........

40 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಪಕ್ಷ ನಿಷ್ಠೆಯಿಂದಾಗಿ ನನಗೆ ಟಿಕೆಟ್ ದೊರೆತಿದೆ. ಎಲ್ಲಾ ಆಕಾಂಕ್ಷಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ. ಕಳೆದ ಬಾರಿ ಸೋಲು ಕಂಡಿದ್ದ ನನಗೆ ತಾಲ್ಲೂಕಿನ ಜನತೆ ಈ ಬಾರಿ ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ.
ಗೋಣಿ ಮಾಲತೇಶ್, ಕಾಂಗ್ರೆಸ್ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT