ಶಿವಮೊಗ್ಗ: ಜಿಲ್ಲೆಯಲ್ಲಿ ಪುಷ್ಯ ಮಳೆಯ ಆರ್ಭಟ ಮುಂದುವರೆದಿದೆ. ಇದರಿಂದ ಗಾಜನೂರಿನ ತುಂಗಾ ಜಲಾಶಯದಲ್ಲಿ ಒಳಹರಿವು 60,988 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ತುಂಗಾ ಜಲಾಶಯದ ಗರಿಷ್ಠ ಮಟ್ಟ 588.24 ಮೀಟರ್ ಇದ್ದು, ಮಂಗಳವಾರ ಜಲಾಶಯದಲ್ಲಿ 587.69 ಮೀಟರ್ ನೀರಿನ ಸಂಗ್ರಹವಿತ್ತು. ಜಲಾಶಯ ಬಹುತೇಕ ಭರ್ತಿ ಆಗಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಭದ್ರೆಗೂ ಮೊದಲೇ ತುಂಗಾ ಜಲಾಶಯ ಭರ್ತಿ ಆಗಿದೆ. ಮಲೆನಾಡಿನಲ್ಲಿ ಎಂದಿನಂತೆಯೇ ಈ ಬಾರಿಯೂ ಬಹುಬೇಗ ತುಂಬಿದ ಜಲಾಶಯ ಎಂಬ ಶ್ರೇಯ ತುಂಗೆಯದ್ದು. ಭಾರೀ ಪ್ರಮಾಣದಲ್ಲಿ ನದಿಗೆ ನೀರು ಹರಿಸುತ್ತಿರುವುದರಿಂದ ಶಿವಮೊಗ್ಗದ ಹೃದಯಭಾಗದಲ್ಲಿ ಹಾಯ್ದು ಹೋಗುವ ತುಂಗೆ ಮೈದುಂಬಿದ್ದಾಳೆ. ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದಾಳೆ. ನದಿ ದಂಡೆಯ ಕೋರ್ಪಲಯ್ಯ ಛತ್ರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.
ಜುಲೈ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 68.78 ಸೆಂ.ಮೀ ಇದ್ದು, ಇದುವರೆಗೆ ಸರಾಸರಿ 62.15 ಸೆಂ.ಮೀ ಮಳೆ ದಾಖಲಾಗಿದೆ.
ಶಿವಮೊಗ್ಗ 2.55 ಸೆಂ.ಮೀ, ಭದ್ರಾವತಿ 2.18, ತೀರ್ಥಹಳ್ಳಿ 7.80, ಸಾಗರ 8.65 ಸೆಂ.ಮೀ, ಶಿಕಾರಿಪುರ 1.76 ಸೆಂ.ಮೀ, ಸೊರಬ 2.78 ಸೆಂ.ಮೀ ಹಾಗೂ ಹೊಸನಗರ 9.76 ಸೆಂ.ಮೀ ಮಳೆ ಸುರಿದಿದೆ.
ತುಂಗೆಗೆ ಹಾರಿದವನಿಗೆ ಧರ್ಮದೇಟು.. ಇಲ್ಲಿನ ತುಂಗಾ ಸೇತುವೆ ಮೇಲಿನಿಂದ ಮಂಗಳವಾರ ತುಂಬಿದ ನದಿಗೆ ಹಾರಿದ ಯುವಕನೊಬ್ಬ ಸಾರ್ವಜನಿಕರಿಂದ ಧರ್ಮದೇಟು ತಿಂದನು. ಸೇತುವೆಯ ತಡೆಗೋಡೆ ಮೇಲೆ ಹತ್ತಿ ನಿಂತು ಕೂಗುತ್ತಾ ಯುವಕ ನದಿಗೆ ಹಾರಿದನು. ನೀರಿಗೆ ಬಿದ್ದವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ಭಾವಿಸಿದ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಪೊಲೀಸರಿಗೆ ಕರೆ ಮಾಡಿದರು. ನೀರಿಗೆ ಬಿದ್ದ ಯುವಕ ಈಜುತ್ತಾ ದಂಡೆಯತ್ತ ಬಂದನು. ವಿಜಯೋತ್ಸವದ ರೀತಿ ಹೊರಗೆ ಬಂದವನಿಗೆ ಅಲ್ಲಿ ನೆರೆದವರು ಧರ್ಮದೇಟು ನೀಡಿದರು. ಇಂತಹ ಅಪಾಯಕಾರಿ ಸಾಹಸಗಳನ್ನು ತಡೆಯುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.