ಆನವಟ್ಟಿ: ಸಮೀಪದ ಕುಬಟೂರು ಗ್ರಾಮದಲ್ಲಿ ಒಂಭತ್ತು ವರ್ಷಗಳಿಗೊಮ್ಮೆ ನಡೆಯುವ ದ್ಯಾಮವ್ವ ದೇವಿ ಜಾತ್ರೆಯಲ್ಲಿ ನಟ ಶಿವರಾಜ್‌ಕುಮಾರ್ ದಂಪತಿ ಹಾಗೂ ದಿ ಪ್ರಿಂಟರ್ರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ತಿಲಕ್‌ಕುಮಾರ್ ದಂಪತಿ ಶುಕ್ರವಾರ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ನಂತರ ಅವರು ದೇವಸ್ಥಾನದ ಅಭಿವೃದ್ಧಿಗಾಗಿ ತಲಾ ₹ 5 ಲಕ್ಷ ದೇಣಿಗೆ ನೀಡಿದರು.
ದೇವಿ ಜಾತ್ರೆಗೆ ನಟ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಆಗಮಿಸುತ್ತಿದ್ದಂತೆಯೇ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿ ಕೇಕೆ, ಸಿಳ್ಳೆ ಹಾಕುತ್ತಾ ಸಂಭ್ರಮಿಸಿದರು.
ಅಭಿಮಾನಿಗಳಿಗಾಗಿ ಶಿವರಾಜ್‌ಕುಮಾರ್ ಅವರು ತಮ್ಮದೇ ಅಭಿನಯದ ‘ಜನುಮದ ಜೋಡಿ’ ಚಿತ್ರದ ಜನಪ್ರಿಯ ಗೀತೆಯಾದ ‘ಇವನಾರ ಮಗನೋ, ಹಿಂಗೌನಲ್ಲ’, ಪುನೀತ್ ರಾಜ್‌ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ... ನೀನೆ ರಾಜಕುಮಾರ್ ಹಾಗೂ ಇತ್ತೀಚೆಗೆ ಬಿಡುಗಡೆಯಾದ ‘ವೇದ’ ಚಿತ್ರದ ‘ಯಾವನೋ ಇವನು ಗಿಲಕ್ಕೋ’ ಗೀತೆಗಳನ್ನು ಹಾಡಿ ರಂಜಿಸಿದರು. ‘ವೇದ’ ಚಿತ್ರದ 50ನೇ ದಿನ ಸಂಭ್ರಮವನ್ನು ನಿರ್ಮಾಪಕಿ ಗೀತಾ ಶಿವಕುಮಾರ್ ಹಂಚಿಕೊಂಡರು.
‘ಜಾತ್ರೆ ಮೊದಲ ದಿನವೇ ಬರಲು ಸಾಧ್ಯವಾಗಲಿಲ್ಲ. ಪತ್ನಿ ಗೀತಾ ಅವರ ಕಾಲಿಗೆ ಆಕಸ್ಮಿಕವಾಗಿ ಏಟು ಬಿದ್ದಿದ್ದರಿಂದ ನಡೆದಾಡಲೂ ಸಾಧ್ಯವಾಗದ ಸ್ಥಿತಿ ಇತ್ತು. ಇನ್ನೂ ಕಾಲು ನೋವು ಇದೆ. ಆದರೆ, ದೇವಿಯ ದರ್ಶನ ಪಡೆಯಲು ನೋವನ್ನು ಸಹಿಸಿಕೊಂಡು ಬಂದಿದ್ದಾರೆ’ ಎಂದು ಶಿವರಾಜ್‌ಕುಮಾರ್ ಅವರು ಅಭಿಮಾನಿಗಳಿಗೆ ತಿಳಿಸಿದರು.
ಸುಜಾತಾ ತಿಲಕ್ ಕುಮಾರ್ ಮಾತನಾಡಿ, ‘ತಂದೆಯ ಗುಣಗಳನ್ನೇ ಹೊಂದಿರುವ ಸಹೋದರ ಮಧು ಬಂಗಾರಪ್ಪ ಗುರುವಾರ 25,000ಕ್ಕೂ ಹೆಚ್ಚು ಜನರಿಗೆ ದಾಸೋಹದ ವ್ಯವಸ್ಥೆ ಮಾಡಿ ದೇವಿಗೆ ಭಕ್ತಿ ಸಮರ್ಪಿದ್ದಾರೆ. ತಂದೆ ಕಾಲದಿಂದಲೂ ಕುಟುಂಬದವರು ದೇವಿಯ ಜಾತ್ರೆಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಿಸುತ್ತಿದ್ದೇವೆ. ಈ ವರ್ಷ ಪುತ್ರಿ ಸೌಭಾಗ್ಯಲಕ್ಷ್ಮೀ ಹಾಗೂ ನಮ್ಮ ಕುಟುಂಬದವರು ಜಾನಪದ ನೃತ್ಯಗಳಲ್ಲಿ ಭಾಗವಹಿಸುವ ಮೂಲಕ ವಿಶೇಷವಾಗಿ ಆಚರಿಸಿದೆವು. ಗ್ರಾಮಸ್ಥರು ನಮ್ಮ ಮೇಲೆ ಇಟ್ಟಿರುವ ಅಭಿಮಾನಕ್ಕೆ ಹೃದಯ ಪೂರ್ವಕ ಅಭಿನಂದನೆಗಳು’ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಮಾತನಾಡಿ, ‘ನಮ್ಮ ಕುಟುಂಬದ ಮೇಲೆ ಈ ಮಣ್ಣಿನ ಋಣವಿದೆ. ಜಾತ್ಯತೀತವಾಗಿ ತಾಲ್ಲೂಕಿನ ಜನರ ಆಶೀರ್ವಾದವಿದೆ’ ಎಂದರು. ಕುಟುಂಬ ಸದಸ್ಯರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.