ಸಾಗರ: ತಮ್ಮ 8ನೇ ವಯಸ್ಸಿಗೆ ಪೋಲಿಯೊಗೆ ತುತ್ತಾಗಿ ಒಂದು ಕಾಲಿನ ಸ್ವಾಧೀನ ಕಳೆದುಕೊಂಡರೂ ಧೃತಿಗೆಡದೆ ಉನ್ನತ ವಿದ್ಯಾಭ್ಯಾಸ ಕೈಗೊಂಡು ಉಪನ್ಯಾಸಕರಾಗಿ ಸಾಹಿತ್ಯ ಕ್ಷೇತ್ರದಲ್ಲೂ ಕ್ರಿಯಾಶೀಲರಾಗಿದ್ದಾರೆ ಸಾಹಿತಿ ವಿ. ಗಣೇಶ್.
ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಇವರು ತಮ್ಮ ಶಿಷ್ಯ ವಲಯದಲ್ಲಿ ವಿ.ಜಿ. ಎಂದೇ ಪರಿಚಿತರು. ಮೂಲತಃ ಹೊಸನಗರ ತಾಲ್ಲೂಕಿನ ಹನಿಯಾ ಗ್ರಾಮದವರು.
ಮಕ್ಕಳ 40 ಕತೆಗಳು, ಸಣ್ಣ ಕತೆ, 8 ಕಾದಂಬರಿಗಳು, 5 ಕವನ ಸಂಕಲನಗಳು, 8 ಅನುವಾದಿತ ಕೃತಿಗಳು, ಒಂದು ನಾಟಕ ಸೇರಿದಂತೆ ಈವರೆಗೆ ವಿ.ಗಣೇಶ್ ಅವರ 75 ಕೃತಿಗಳು ಪ್ರಕಟವಾಗಿದ್ದು ಇನ್ನೈದು ಕೃತಿಗಳು ಅಚ್ಚಿನಲ್ಲಿವೆ. ಮಂಗಳವಾರ ನಡೆಯಲಿರುವ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇವರು ನಿಯೋಜಿತರಾಗಿದ್ದಾರೆ.
ಮನೆಯಲ್ಲಿ ಸಾಹಿತ್ಯದ ವಾತಾವರಣದಿಂದಾಗಿ ಬಾಲ್ಯದಿಂದ ಸಾಹಿತ್ಯದತ್ತ ಆಸಕ್ತಿ ಬೆಳೆಯಿತು. ಸಾಗರದ ಎಲ್.ಬಿ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಕವಿ ಗೋಪಾಲಕೃಷ್ಣ ಅಡಿಗರ ಪ್ರಭಾವ ಮತ್ತು ಪ್ರೇರಣೆ ಸಾಹಿತ್ಯ ಕೃತಿಗಳ ರಚನೆಗೆ ದಾರಿಯಾಯಿತು ಎಂದು ಹೇಳುವ ಅವರು, ಬದುಕಿನಲ್ಲಿ ಸೂಕ್ತ ಮಾರ್ಗದಲ್ಲಿ ನಡೆಯುವುದನ್ನು ಸಾಹಿತ್ಯ ಕಲಿಸುತ್ತದೆ. ಸಾಹಿತಿಯಾದವನು ಸಮಾಜಕ್ಕೆ ಹೆದರಬೇಕೆ ಹೊರತು ಸರ್ಕಾರಕ್ಕಲ್ಲ ಎನ್ನುತ್ತಾರೆ.
‘ಟೀಕೆ, ವಿಮರ್ಶೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಧರ್ಮ ಇತ್ತೀಚೆಗೆ ಕಡಿಮೆಯಾಗಿದ್ದು, ಬದಲಾವಣೆ ನಮ್ಮ ಮನೆಯಿಂದಲೇ ಆರಂಭ ಆಗಬೇಕು. ಪಾಲಕರು ಸಾಹಿತ್ಯದ ಓದಿನ ಅಭಿರುಚಿಯನ್ನು ಬೆಳೆಸಿಕೊಂಡರೆ ಮಕ್ಕಳೂ ಬೆಳೆಸಿಕೊಳ್ಳುತ್ತಾರೆ’ ಎಂದು ಅವರು ತಿಳಿಸುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.