ಬುಧವಾರ, ಮಾರ್ಚ್ 22, 2023
19 °C
ಅಧಿಕಾರಿಗಳಿಗೆ ತಾ. ಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಸಲಹೆ

ಜನರಿಗೆ ಸ್ಪಂದಿಸುವ ಮನೋಭಾವ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೊರಬ: ಆರೋಗ್ಯ ಇಲಾಖೆಯವರು ತಾಲ್ಲೂಕಿನ ಎಲ್ಲ ವಲಯಗಳಲ್ಲಿಯೂ ಲಸಿಕೆಯನ್ನು ಪೂರೈಸುವ ಮೂಲಕ ಜನಸಾಮಾನ್ಯರ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯತ್ನಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಕ್ಷತಾ ಅವರಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಾರ್ವಜನಿಕರ ಸಮಸ್ಯೆಗೆ ಇಲಾಖೆಯ ಅಧಿಕಾರಿಗಳು ಸ್ಪಂದಿಸುವ ಮನೋಭಾವ ಹೊಂದಿದಾಗ ಸಾರ್ವಜನಿಕರಲ್ಲಿ ಇಲಾಖೆಗಳ ಬಗ್ಗೆ ವಿಶ್ವಾಸ ಮೂಡಲು ಸಾಧ್ಯವಾಗುತ್ತದೆ. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಖಾಸಗಿ ಶಾಲೆಗಳಲ್ಲಿ ಶುಲ್ಕ ಪಡೆಯುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ನಂಜರಾಜ್ ಅವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರ ಇನ್ನೂ ಯಾವುದೇ ಶುಲ್ಕದ ಬಗ್ಗೆ ನಿರ್ಣಯವನ್ನು ತಿಳಿಸಿಲ್ಲ. ಹೆಚ್ಚು ಶುಲ್ಕ ಪಡೆಯುತ್ತಿರುವ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜಿ.ಕುಮಾರ್, ‘ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಬಹುಪಾಲು ಬಿತ್ತನೆ ಕೆಲಸಗಳು ಮುಗಿದಿವೆ. ಯಾವುದೇ ರೀತಿಯ ರಸಾಯನಿಕ ಗೊಬ್ಬರಗಳ ಕೊರತೆ ಉಂಟಾಗಿಲ್ಲ’ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಇಲಾಖೆಯ ವ್ಯವಸ್ಥಾಪಕ ಚಂದ್ರಪ್ಪ ಸಭೆಯ ಗಮನಕ್ಕೆ ತಂದರು.

ಬಿಸಿಎಂ ಇಲಾಖೆಯ ವಿಸ್ತರಣಾಧಿಕಾರಿ ಸದಾಶಿವ ಅವರು ಆನವಟ್ಟಿಯ ಕೆಲವು ವಿದ್ಯಾರ್ಥಿನಿಲಯಗಳ ಕಟ್ಟಡದಲ್ಲಿ ಮಳೆಗಾಲದಲ್ಲಿ ಸೋರುತ್ತಿರುವುದು ಕಂಡುಬರುತ್ತಿದ್ದು ಅದನ್ನು ಸರಿಪಡಿಸುವಂತೆ ಒತ್ತಾಯಿಸಿದರು.

ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಸೋಮಶೇಖರ್, ‘ಸರ್ಕಾರ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ಕೊರೊನಾ ಸಂಕಷ್ಟದಲ್ಲಿ ನೀಡಿದ ತಾತ್ಕಾಲಿಕ ಪರಿಹಾರ ಹಾಗೂ ಪ್ರೋತ್ಸಾಹಧನವನ್ನು ಅನಾನಸ್, ಪಪ್ಪಾಯ, ಕಲ್ಲಂಗಡಿ ಬೆಳೆಗಾರರಿಗೆ ವಿತರಿಸಲಾಗುತ್ತಿದೆ’ ಎಂದು
ತಿಳಿಸಿದರು.

ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಒಡೆಯರ್, ತಾಲ್ಲೂಕು ಆರೋಗ್ಯಾಧಿಕಾರಿ ಅಕ್ಷತಾ ಖಾನಾಪುರ, ಎಇಇ ಯಶೊಧರ್, ಅಕ್ಷರ ದಾಸೋಹ ಅಧಿಕಾರಿ ಮನೋಹರ್, ಅರಣ್ಯ, ತೋಟಗಾರಿಕೆ, ಕಂದಾಯ, ಶಿಕ್ಷಣ, ಪಿಆರ್‌ಇಡಿ, ರೇಷ್ಮೆ, ಮೆಸ್ಕಾಂ, ಸಮಾಜ ಕಲ್ಯಾಣ, ಬಿಸಿಎಂ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು