ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ಮಾನವೀಯ ಸಂಬಂಧ ಬೆಳೆಯಲಿ

ಶರನ್ನವರಾತ್ರಿ ದಸರಾ ದರ್ಬಾರ್‌ ಕಾರ್ಯಕ್ರಮದ ಧರ್ಮ ಸಮಾರಂಭದಲ್ಲಿ ರಂಭಾಪುರಿಶ್ರೀ
Last Updated 9 ಅಕ್ಟೋಬರ್ 2021, 6:56 IST
ಅಕ್ಷರ ಗಾತ್ರ

ಕಡೇನಂದಿಹಳ್ಳಿ (ಶಿರಾಳಕೊಪ್ಪ):‘ಇಂದಿನ ಯಾಂತ್ರಿಕ ಬದುಕಿನಲ್ಲಿ ಮಾನವೀಯ ಸಂಬಂಧಗಳು ಬಹಳಷ್ಟು ಶಿಥಿಲಗೊಳ್ಳುತ್ತಿರುವುದು ನೋವಿನ ಸಂಗತಿ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಬೇಸರಿಸಿದರು.

ಸಮೀಪದ ಕಡೇನಂದಿಹಳ್ಳಿಯಲ್ಲಿ ನಡೆ‌ಯುತ್ತಿರುವ ಶರನ್ನವರಾತ್ರಿ ದಸರಾ ದರ್ಬಾರ್‌ ಕಾರ್ಯಕ್ರಮದ ಎರಡನೇ ದಿನದಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಸತ್ಯದ ತಳಹದಿಯ ಮೇಲೆ ಸೈದ್ಧಾಂತಿಕ ನಿಲುವು ಗಟ್ಟಿಗೊಳ್ಳಬೇಕಾಗಿದೆ. ನಂಬಿಕೆ ಮತ್ತು ಛಲ ಇದ್ದರೆ ಗುರಿ ತಲುಪುವುದು ಬಲು ಸುಲಭ. ಸಾಧನೆಯ ಹಾದಿಯಲ್ಲಿ ಏನೆಲ್ಲ ಕಷ್ಟಗಳು ಬಂದರೂ ಅವೆಲ್ಲವನ್ನು ಎದುರಿಸುವಂಥ ಶಕ್ತಿಯನ್ನು ಗಳಿಸಿಕೊಳ್ಳಬೇಕಾಗಿದೆ. ಒಳ್ಳೆಯದು ಉಳಿಯಬೇಕಾದರೆ ಕೆಟ್ಟದ್ದರ ಜೊತೆಗೆ ಹೋರಾಟ ಅನಿವಾರ್ಯ ಎಂದರು.

ಶಿವಶಕ್ತಿಯಿಂದ ಈ ಜಗತ್ತು ನಿರ್ಮಾಣಗೊಂಡಿದೆ. ಶಿವ ಜೀವ ಮತ್ತು ಜಗತ್ತು ಎಂದೆಂದಿಗೂ ಸತ್ಯ ಶಾಶ್ವತ. ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದಲ್ಲಿ ಜೀವಾತ್ಮ ಪರಮಾತ್ಮನೆಡೆಗೆ ಸಾಗುವ ಗುರಿಯನ್ನು ಅರಿಯಬೇಕಾಗುತ್ತದೆ ಎಂದರು.

‘ರಂಭಾಪುರಿ ಬೆಳಗು’ ಸಂಚಿಕೆಯನ್ನು ಬಿಡುಗಡೆ ಮಾಡಿದ ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಬಿ.ವೈ. ಅರುಣಾದೇವಿ, ‘ಶಾಂತಿ ನೆಮ್ಮದಿಯ ಬದುಕಿಗೆ ನಂಬಿಕೆ ಮತ್ತು ಅಧ್ಯಾತ್ಮದ ಅರಿವು ಬೇಕಾಗಿದೆ. ಉನ್ನತ ಗುರಿ ಮತ್ತು ಉತ್ತಮ ಧ್ಯೇಯ ವ್ಯಕ್ತಿತ್ವ ವಿಕಾಸಕ್ಕೆ ದಾರಿದೀಪ. ಯುವ ಜನಾಂಗ ಧರ್ಮ ಮರೆತು ನಡೆದರೆ ಅಪಾಯ ತಪ್ಪಿದ್ದಲ್ಲ. ರಂಭಾಪುರಿ ಶ್ರೀಗಳ ದಸರಾ ಧರ್ಮ ಯಜ್ಞ ನಮ್ಮೆಲ್ಲರ ಬಾಳಿಗೆ ಬಲವನ್ನು ತಂದು ಕೊಡಲಿ. ಚಿಕ್ಕಮಕ್ಕಳಲ್ಲಿ ಸಂಸ್ಕಾರ ಸಂಸ್ಕೃತಿ ಬೆಳೆಸಬೇಕಾಗಿದೆ. ಸಂಸ್ಕಾರ ಸಂಸ್ಕೃತಿ ಮರೆಯಾದರೆ ಧರ್ಮದ ಬುಡ ಅಲ್ಲಾಡುತ್ತದೆ’ ಎಂದರು.

ಮಳಲಿ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ‘ರಂಭಾಪುರಿ ದಸರಾ ಮಹೋತ್ಸವ ನಾಡಿಗೆಲ್ಲ ಚಿರಪರಿಚಿತ. ಶಕ್ತಿ ಆರಾಧನೆಯ ಮೂಲಕ ಜೀವ ಸಂಕುಲಕ್ಕೆ ಯಾವುದೇ ತೊಂದರೆಯಾಗದೇ ಮುನ್ನಡೆಸಿಕೊಂಡು ಬಂದಿದ್ದಾರೆ’ ಎಂದರು.

ಮೈಸೂರಿನ ಅರಮನೆ ಜಪದಕಟ್ಟಿ ಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕಡೇನಂದಿಹಳ್ಳಿ ಪುಣ್ಯಾಶ್ರಮದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಕಡೇನಂದಿಹಳ್ಳಿಯ ವೀರಭದ್ರ ಶಿವಾಚಾರ್ಯರು, ದಿಂಡದಹಳ್ಳಿಯ ಪಶುಪತಿ ಶಿವಾಚಾರ್ಯರು, ಪುಟ್ಟಯ್ಯ ಶಾಸ್ತ್ರಿ, ಹಾಲಸ್ವಾಮಿ ಹಿರೇಮಠ, ನೀಲಕಂಠಯ್ಯ ಶಾಸ್ತ್ರಿ, ಮುದುಕಯ್ಯ ಸ್ವಾಮೀಜಿ ಸೇರಿ ಹಲವು ಗಣ್ಯರಿಗೆ ರಂಭಾಪುರಿ ಶ್ರೀ ಗುರುರಕ್ಷೆ ನೀಡಿದರು.

ಸಿದ್ಧರಬೆಟ್ಟ, ಕಲಾದಗಿ, ಹಾರನಹಳ್ಳಿ, ಸಂಗೊಳ್ಳಿ ಸೇರಿ ಹಲವು ಮಠಾಧೀಶರು, ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ತಾಲ್ಲೂಕು ಘಟಕದ ಕಾರ್ಯದರ್ಶಿ ನಿವೇದಿತಾ ರಾಜು ಇದ್ದರು.

ಆನವಟ್ಟಿಯ ನಿತ್ಯಶ್ರೀ ಆರಾಧ್ಯ ಮಠದ ಭರತ ನಾಟ್ಯ ಪ್ರದರ್ಶಿಸಿದರು. ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ನಡೆಯಿತು. ತಡಸನಹಳ್ಳಿ ಮುಖ್ಯಶಿಕ್ಷಕ ವೀರೇಶಗೌಡ್ರು ಸ್ವಾಗತಿಸಿದರು. ಗದಗಿನ ಗಾನಭೂಷಣ ವೀರೇಶ ಕಿತ್ತೂರ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಶಾಂತಾ ಆನಂದ, ಸಿ.ಎಚ್. ರೇಣುಕಾಪ್ರಸಾದ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT